ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ (Pahalgam Terror Attack )ಪಾಕಿಸ್ತಾನದ (Pakistan) ಪಾತ್ರವಿರುವುದಕ್ಕೆ ಪೆಂಟಗನ್‌ನ ಮಾಜಿ ಅಧಿಕಾರಿ ಮೈಕೆಲ್ ರೂಬಿನ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅವರು, ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್‌ನನ್ನು ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ಗೆ ಹೋಲಿಸಿ ಆಕ್ರೋಶ ಹೊರಹಾಕಿದ್ದಾರೆ.
ಮುನೀರ್ ಮತ್ತು ಬಿನ್ ಲಾಡೆನ್ (Osama Bin Laden) ನಡುವಿನ ಏಕೈಕ ವ್ಯತ್ಯಾಸವೆಂದರೆ, ಮುನೀರ್ ಅರಮನೆಯಲ್ಲಿ ವಾಸಿಸುತ್ತಿದ್ದಾನೆ. ಲಾಡೆನ್ ಗುಹೆಯಲ್ಲಿ ವಾಸಿಸುತ್ತಿದ್ದ. ಪಹಲ್ಗಾಮ್ ದಾಳಿಗೆ ಅಮೆರಿಕ ತೆಗೆದುಕೊಳ್ಳಬಹುದಾದ ಏಕೈಕ ಕ್ರಮ ಎಂದರೆ, ಪಾಕಿಸ್ತಾನವನ್ನು ಭಯೋತ್ಪಾದನೆಯ ಪ್ರಾಯೋಜಕ ರಾಷ್ಟ್ರ ಎಂದು ಘೋಷಿಸುವುದು. ಮುನೀರ್‌ನನ್ನು ಉಗ್ರರ ಪಟ್ಟಿಗೆ ಸೇರಿಸಬೇಕು ಮತ್ತು ಈತನ ಅಂತ್ಯವು ಲಾಡೆನ್‌ನಂತೆ ಆಗಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕೇಂದ್ರ ಸರ್ಕಾರದ ಜೊತೆ ನಾವಿದ್ದೇವೆ, ಎಲ್ಲಾ ಉಗ್ರ ತಾಣಗಳನ್ನು ನಾಶಪಡಿಸಬೇಕು: ಸಿಎಂ
ಬಿಲ್ ಕ್ಲಿಂಟನ್ ಭಾರತಕ್ಕೆ ಬಂದಿದ್ದಾಗ ಭಯೋತ್ಪಾದಕ ದಾಳಿ ನಡೆದಂತೆಯೇ, ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಭಾರತ ಪ್ರವಾಸದಲ್ಲಿದ್ದಾಗ ದಾಳಿ ನಡೆದಿದ್ದು, ಪಾಕಿಸ್ಥಾನ ಗಮನ ಸೆಳೆಯಲು ಬಯಸುತ್ತಿದೆ ಎಂದು ಅವರು ಸಿಟ್ಟು ಹೊರಹಾಕಿದರು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಳಿಯಲ್ಲಿ 27 ಮಂದಿ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಭಾರತವು ಪಾಕಿಸ್ತಾನದ ವಿರುದ್ಧ ಹಲವಾರು ರಾಜತಾಂತ್ರಿಕ ಕ್ರಮಗಳನ್ನು ಘೋಷಿಸಿದೆ.
ಕೇಂದ್ರ ಸಚಿವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸತತ 3 ಗಂಟೆಗಳ ಕಾಲ ಕೇಂದ್ರ ಸಂಪುಟ ಸಮಿತಿ ಸಭೆ ನಡೆದಿದ್ದು, ಪಾಕ್ ಸಂಬಂಧಕ್ಕೆ ಎಳ್ಳುನೀರು ಬಿಡಲಾಗಿದೆ. ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿರುವ ಅಟ್ಟಾರಿ-ವಾಘಾ ಗಡಿ ಚೆಕ್‌ಪೋಸ್ಟ್ ಅನ್ನು ತಕ್ಷಣದಿಂದ ಮುಚ್ಚುವುದು, ಸಾರ್ಕ್ ವಿಸಾ ವಿನಾಯಿತಿ ಯೋಜನೆ ಪಾಕಿಸ್ತಾನದವರಿಗೆ ರದ್ದು, ರಾಯಭಾರ ಕಚೇರಿ ಸಿಬ್ಬಂದಿ ಹಂತಹಂತವಾಗಿ ಕಡಿತಗೊಳಿಸುವುದು ಮತ್ತು 1960ರ ಸಿಂಧು ನದಿ ಒಪ್ಪಂದವನ್ನು ರದ್ದು ಮಾಡುವುದು ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೇಂದ್ರ ಸಂಪುಟ ಸಮಿತಿ ತೆಗೆದುಕೊಂಡಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ತ್ರಿ ತಿಳಿಸಿದ್ದರು. ಇದನ್ನೂ ಓದಿ: ಮಗು ಇದೆ ಬಿಟ್ಟು ಬಿಡಿ ಅಂದ್ರೂ ಶೂಟ್ ಮಾಡಿದ್ರು – ಬಿಕ್ಕಿಬಿಕ್ಕಿ ಅತ್ತ ಸುಜಾತ