“ನನ್ನ ಮೂರನೇ ಅವಧಿಯಲ್ಲಿ ವಿಶ್ವದ ಅತೀ ದೊಡ್ಡ ಮೂರು ಆರ್ಥಿಕತೆಯಲ್ಲಿ (Economy) ಭಾರತದ (India) ಹೆಸರು ಇರಲಿದೆ. ಇದು ಮೋದಿ ನೀಡುವ ಗ್ಯಾರಂಟಿ” – ದೆಹಲಿಯ ‘ಭಾರತ ಮಂಟಪಂ’ವನ್ನು ಉದ್ಘಾಟನೆ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಈ ಭಾಷಣದ ಬಗ್ಗೆ ಹಲವು ಚರ್ಚೆಗಳು ಈಗ ಆರಂಭವಾಗಿದ್ದು ಅದರಲ್ಲೂ ಜಪಾನ್ ದೇಶವನ್ನು ಹಿಂದಿಕ್ಕಿಲು ಸಾಧ್ಯವೇ ಎಂಬ ಪ್ರಶ್ನೆ ಎದ್ದಿದೆ. ಹೀಗಾಗಿ ಇಲ್ಲಿ ಜಪಾನ್ ಅಭಿವೃದ್ಧಿಯಾಗಿದ್ದು ಹೇಗೆ? ಭಾರತ ಅಭಿವೃದ್ಧಿಯಾಗಿದ್ದು ಹೇಗೆ? ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಬೇಕಾದರೆ ಭಾರತ ಏನು ಮಾಡಬೇಕು? ಮತ್ತು ಭಾರತದ ಮುಂದಿರುವ ಸವಾಲು ಏನು? ಈ ವಿಷಯದ ಬಗ್ಗೆ ಇಲ್ಲಿ ವಿವರ ನೀಡಲಾಗಿದೆ.
ಜಪಾನ್ ಅಭಿವೃದ್ಧಿಯಾಗಿದ್ದು ಹೇಗೆ?
ಶುಚಿತ್ವಕ್ಕೆ ಹೆಸರುವಾಸಿಯಾದ ದೇಶ, ಸಮಯ ಪಾಲನೆಗೆ ಮಹತ್ವ ನೀಡುವ ಜನ, ಟೆಕ್ ಪ್ರಿಯರ, ಅಭಿವೃದ್ಧಿ ಹೊಂದಿದ ದೇಶವಾಗಿರುವ ಜಪಾನ್ 18, 19ನೇ ಶತಮಾನದಲ್ಲಿ ಯುದ್ಧ ಪ್ರಿಯ ರಾಷ್ಟ್ರವಾಗಿತ್ತು. ಸಣ್ಣ ದೇಶವಾದರೂ ಬಲಾಢ್ಯ ಚೀನಾ, ರಷ್ಯಾವನ್ನೇ ಸೋಲಿಸಿತ್ತು. ಸೇನಾ ಶಕ್ತಿ, ಯುದ್ಧವೇ ವಿದೇಶ ನೀತಿಯ ಭಾಗವಾಗಿತ್ತು.
Advertisement
ಯುದ್ಧದಾಹಿ ದೇಶವಾಗಿದ್ದ ಜಪಾನ್ ಎರಡನೇ ಮಹಾಯುದ್ಧದಲ್ಲಿ ಅಮೆರಿಕದ ಪರ್ಲ್ ಹರ್ಬರ್ ನೌಕಾ ನೆಲೆಯ ಮೇಲೆ 1941ರ ಡಿಸೆಂಬರ್ 7 ರಂದು ಏರ್ ಸ್ಟ್ರೈಕ್ ಮಾಡಿತ್ತು. ಈ ದಾಳಿ ನಡೆಯುವವರೆಗೂ 1939 ರಿಂದ ಆರಂಭಗೊಂಡಿದ್ದ ಎರಡನೇ ಮಹಾಯುದ್ಧದಲ್ಲಿ ಅಮೆರಿಕ (USA) ಭಾಗಿಯಾಗಿರಲಿಲ್ಲ. ದಾಳಿ ನಡೆದ ಮರು ದಿನವೇ ಅಮೆರಿಕ ಎರಡನೇ ಮಹಾಯುದ್ಧಕ್ಕೆ ಧುಮುಕಿತು. ತನ್ನ ಮೇಲಿನ ದಾಳಿಗೆ ಸೇಡು ತೀರಿಸಲು 1945ರ ಆಗಸ್ಟ್ 6 ರಂದು ಹಿರೋಶಿಮಾ ಆಗಸ್ಟ್ 9 ರಂದು ನಾಗಸಾಕಿ ಮೇಲೆ ಅಣು ಬಾಂಬ್ ದಾಳಿ ಮಾಡಿತು. ಎರಡು ದಾಳಿಗೆ ಹತ್ತಿರ ಹತ್ತಿರ ಎರಡೂವರೆ ಲಕ್ಷ ಜನ ಸಾವನ್ನಪ್ಪಿದ್ದರು. ಕೊನೆಗೆ ಸೆಪ್ಟೆಂಬರ್ 2 ರಂದು ಜಪಾನ್ ಅಮೆರಿಕಗೆ ಶರಣಾಯಿತು. ಇಲ್ಲಿಗೆ ಎರಡನೇ ಮಹಾಯುದ್ಧ ಅಂತ್ಯವಾಯಿತು.
Advertisement
Advertisement
ಯುದ್ಧದಿಂದ ಜಪಾನ್ ನಲುಗಿ ಹೋಗಿತ್ತು. ಈ ಕಾರಣಕ್ಕೆ ಅಮೆರಿಕದ ನಿರ್ದೇಶನದಂತೆ ಸಂವಿಧಾನಕ್ಕೆ 1947ರಲ್ಲಿ ಜಪಾನ್ ತಿದ್ದುಪಡಿ ಮಾಡಿತು. ವಿಶ್ವಶಾಂತಿ ಬಯಸುವ ರಾಷ್ಟ್ರವಾದ ಜಪಾನ್ ಜನರು ಎಂದಿಗೂ ಯಾವುದೇ ದೇಶದ ಮೇಲೆ ಯುದ್ಧ ಘೋಷಿಸುವುದಿಲ್ಲ ಮತ್ತು ಅತರರಾಷ್ಟ್ರೀಯ ವಿವಾದಗಳನ್ನು ಪರಿಹರಿಸಲು ಎಂದಿಗೂ ಬಲಪ್ರಯೋಗ ಮಾಡುವುದಿಲ್ಲ ಎಂದು ತಿದ್ದುಪಡಿ ಮಾಡಿತ್ತು. ಈ ತಿದ್ದುಪಡಿಯಿಂದ ಜಪಾನ್‌ಗೆ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯನ್ನು ಅಧಿಕೃತವಾಗಿ ಹೊಂದಲು ಅವಕಾಶವಿರಲಿಲ್ಲ. ಇದನ್ನೂ ಓದಿ: ಮೇಡ್ ಇನ್ ಚೈನಾಗೆ ಭಾರತ ಶಾಕ್ -ಲ್ಯಾಪ್‌ಟಾಪ್ ಬ್ಯಾನ್ ಮಾಡಿದ್ದು ಯಾಕೆ?
Advertisement
ಜಪಾನ್‌ನಲ್ಲಿ ಅಭಿವೃದ್ಧಿ ಕ್ರಾಂತಿ
ಮಿಲಿಟರಿಗೆ ಹಾಕುವ ಹಣವನ್ನು ಅಭಿವೃದ್ಧಿಗೆ ಬಳಸಿದ ಕಾರಣ ಜಪಾನ್‌ನಲ್ಲಿ ಕೈಗಾರಿಕಾ ಕ್ರಾಂತಿ (Industrial Revolution) ಆರಂಭವಾಯಿತು. ಉದ್ಯಮಗಳು ಆರಂಭಗೊಂಡವು, ಸರ್ಕಾರ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿತು. ಇದೆಲ್ಲದರ ಪರಿಣಾಮ 1968 ರಲ್ಲಿ ಜಪಾನ್ ಯುರೋಪ್ ದೇಶಗಳನ್ನು ಹಿಂದಿಕ್ಕೆ ಎರಡನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿ ಬದಲಾಯಿತು. 1945 ಅಣು ಬಾಂಬ್ ಹಾಕಿ ಕೇವಲ 23 ವರ್ಷದಲ್ಲಿ ಜಪಾನ್‌ನಲ್ಲಿ ಭಾರೀ ಬದಲಾವಣೆ ನಡೆಯಿತು. 2009 ವರೆಗೆ ಜಪಾನ್ ಎರಡನೇ ಸ್ಥಾನದಲ್ಲೇ ಇತ್ತು. 2010ರಲ್ಲಿ ಚೀನಾ (China) ಜಪಾನ್‌ನನ್ನು ಸೋಲಿಸಿ ಎರಡನೇ ಸ್ಥಾನ ಪಡೆಯಿತು.
ಭಾರತ ಅಭಿವೃದ್ಧಿಯಾಗಿದ್ದು ಹೇಗೆ?
ಸ್ವಾತಂತ್ರ್ಯ ಸಿಕ್ಕಿದ ಬಳಿಕ ಭಾರತ ಅಲಿಪ್ತ ನೀತಿಯನ್ನು ಅಳವಡಿಸಿಕೊಂಡಿತ್ತು. ಎರಡನೇ ಮಹಾಯುದ್ಧದ ಬಳಿಕ ಅಮೆರಿಕ ಮತ್ತು ಯುಎಸ್‌ಎಸ್‌ಆರ್ ಜೊತೆ ಶೀತಲ ಸಮರ ನಡೆಯುತ್ತಿತ್ತು. ಶೀತಲ ಸಮರ ನಡೆಯುತ್ತಿದ್ದರೂ ರಕ್ಷಣಾ ವಿಚಾರದಲ್ಲಿ ಭಾರತ ಯುಎಸ್‌ಎಸ್‌ಆರ್ ಜೊತೆ ಜಾಸ್ತಿ ವ್ಯವಹಾರ ಮಾಡಿತ್ತು. ಇದು ಅಮೆರಿಕದ ಕಣ್ಣು ಕೆಂಪಗೆ ಮಾಡಿತ್ತು. ಈ ಮಧ್ಯೆ ಗಡಿಯಲ್ಲಿರುವ ಪಾಕಿಸ್ತಾನ ಮತ್ತು ಚೀನಾದ ಜೊತೆ ಯುದ್ಧ ಮಾಡಿತು. ವಿರೋಧಿ ರಾಷ್ಟ್ರಗಳು ಶಕ್ತಿಶಾಲಿ ಆಗುತ್ತಿದ್ದಂತೆ ಭಾರತ 1974 ಮತ್ತು 1998ರಲ್ಲಿಅಣು ಬಾಂಬ್ ಸ್ಫೋಟ ಮಾಡಿತು. ಯಾವ ದೇಶಕ್ಕೂ ತಿಳಿಯದೇ ಬಹಳ ರಹಸ್ಯವಾಗಿ ಅಣು ಬಾಂಬ್ ಸ್ಫೋಟ ಮಾಡಿದ್ದನ್ನು ಸಹಿಸದ ಅಮೆರಿಕ ಸೇರಿದಂತೆ ಹಲವು ದೇಶಗಳು ಭಾರತದ ನಿರ್ಬಂಧ ಹೇರಿದ್ದವು.
1991ರ ಪಿವಿ ನರಸಿಂಹ ರಾವ್ ಸರ್ಕಾರ ಉದಾರಿಕರಣ, ಖಾಸಗೀಕರಣ, ಜಾಗತಿಕರಣ ನೀತಿಯನ್ನು ಅಳವಡಿಸಿಕೊಂಡಿತು. ಆದರೆ ಅಮೆರಿಕದ ಒತ್ತಡದಿಂದ ಭಾರತಕ್ಕೆ ಸಾಲ ನೀಡಲು ವಿವಿಧ ರಾಷ್ಟ್ರಗಳು ಹಿಂದೇಟು ಹಾಕಿದವು. ಒಂದು ರಾಕೆಟ್ ಮೇಲಕ್ಕೆ ಹಾರಲು ಬೇಕಾದ ಕ್ರಯೋಜನಿಕ್ ಎಂಜಿನ್ (Cryogenic Engine) ಅಮೆರಿಕ ನಿರ್ಬಂಧ ಹೇರಿತು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ನಿರ್ಬಂಧದಿಂದ ಅಭಿವೃದ್ಧಿ ವಿಚಾರದಲ್ಲಿ ಭಾರತಕ್ಕೆ ಬಹಳಷ್ಟು ಸಮಸ್ಯೆಯಾಯಿತು. ಈ ನಡುವೆ ಗಡಿಯಲ್ಲಿ ಪಾಕ್ ಕಿರಿಕಿರಿ, ದೇಶದ ಒಳಗಡೆ ಉಗ್ರರ ಕಾಟ. ಈ ಕಾರಣಕ್ಕೆ ಭಾರತ ಅಭಿವೃದ್ಧಿಯ ಜೊತೆಗೆ ರಕ್ಷಣೆಗೆ ಹೆಚ್ಚಿನ ಅನುದಾನ ನೀಡಿತು. ಬಜೆಟ್‌ನಲ್ಲಿ ರಕ್ಷಣೆಯೇ ಮೊದಲ ಆದ್ಯತೆ ಆಯಿತು. ಹೀಗಿದ್ದರೂ ನಿಧಾನವಾಗಿ ಭಾರತ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸತೊಡಗಿತು. ಇದನ್ನೂ ಓದಿ: ತಾಲಿಬಾನ್ ಉಗ್ರರಿಗೆ ಪಾಕ್ ಮೇಲೆ ಸಿಟ್ಯಾಕೆ?
ಭಾರತ Vs ಜಪಾನ್:
ಒಂದು ದೇಶ ಅಭಿವೃದ್ಧಿಯತ್ತ ಸಾಗುತ್ತಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಬಳಸುವ ಪ್ರಮುಖ ಮಾನದಂಡ ಯಾವುದು ಎಂದರೆ ಅದು ಜಿಡಿಪಿ. ಜಿಡಿಪಿ (GDP) ಎಂದರೆ ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಷನ್ ಅಥವಾ ಒಟ್ಟು ರಾಷ್ಟ್ರೀಯ ಉತ್ಪನ್ನ ಎಂದು ಕರೆಯಲಾಗುತ್ತದೆ. ಒಂದು ದೇಶದ ಅರ್ಥವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪತ್ತಿಯಾಗುವ ಎಲ್ಲಾ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯ. ಕೃಷಿ ಉತ್ಪನ್ನ, ಕೈಗಾರಿಕಾ ಉತ್ಪನ್ನ, ಬ್ಯಾಂಕಿಂಗ್ ಮತ್ತು ಹಣಕಾಸು ವಲಯದಲ್ಲಿನ ವಹಿವಾಟು, ಜನರ ಸಂಬಳ, ಆಮದು ರಫ್ತು ಎಲ್ಲವೂ ಸೇರಿ ಲೆಕ್ಕ ಹಾಕಿದಾಗ ಜಿಡಿಪಿಯ ಸಂಖ್ಯೆ ತಿಳಿಯುತ್ತದೆ.
ಭಾರತ ಮತ್ತು ಜಪಾನ್ ಜಿಡಿಪಿ ಯಾವ ವರ್ಷ ಎಷ್ಟು?
ಜಿಡಿಪಿ ಬೆಳವಣಿಗೆ ದರ ಎಷ್ಟು?
ಜಪಾನಿಗೆ ಹೋಲಿಕೆ ಮಾಡಿದಾಗ ಜಿಡಿಪಿ ಬೆಳವಣಿಗೆ ದರ ಭಾರತದ್ದೇ ಚೆನ್ನಾಗಿದೆ ಎಂದು ಅನಿಸಬಹುದು. ಆದರೆ ಆರ್ಥಿಕತೆಯಲ್ಲಿ ಭಾರತ ಹಿಂದೆ ಇದ್ದೇವೆ ಎಂದು ಅನಿಸುವುದು ಸಹಜ. ಜಿಡಿಪಿ ಕಡಿಮೆ ಯಾಕೆ ಎನ್ನುವುದಕ್ಕೆ ಎರಡು ಕಾರಣ ನೀಡಬಹುದು. ಒಂದನೇಯದಾಗಿ ನಮ್ಮ ಜನಸಂಖ್ಯೆ ಎರಡನೇಯದಾಗಿ ಈ ಹಿಂದೆ ತಿಳಿಸಿದಂತೆ ರಕ್ಷಣಾ ಬಜೆಟ್‌ಗೆ ನಾವು ಮೀಸಲಿಟ್ಟ ಹಣ.
ಸದ್ಯ ಭಾರತದ ಜನ ಸಂಖ್ಯೆ 142 ಕೋಟಿ ರೂ. ವಿಶ್ವದ 17% ಜನಸಂಖ್ಯೆ ನಮ್ಮಲ್ಲೇ ಇದೆ. ಜಪಾನ್ ಜನಸಂಖ್ಯೆ 12.32 ಕೋಟಿ ಇದ್ದು ವಿಶ್ವದ 1%ಜನಸಂಖ್ಯೆಗೆ ಸಮ. ಮಿಲಿಟರಿ ಬಜೆಟ್ ತೆಗದುಕೊಂಡರೆ 2022 ರಲ್ಲಿ ಭಾರತ 81.1 ಬಿಲಿಯನ್ ಡಾಲರ್ ಹಣವನ್ನು ಖರ್ಚು ಮಾಡುವ ವಿಶ್ವದಲ್ಲಿ 4 ಸ್ಥಾನವನ್ನು ಪಡೆದಿದೆ ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಹೇಳಿದೆ.
ಚೀನಾ ಮತ್ತು ರಷ್ಯಾ ಬಲಾಢ್ಯವಾಗುತ್ತಿರುವ ಹಿನ್ನೆಲೆಯಲ್ಲಿ 2014 ರಲ್ಲಿ ಜಪಾನ್ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ರಕ್ಷಣೆಗೆ ಹೆಚ್ಚಿನ ಅನುದಾನ ನೀಡತೊಡಗಿತು. 2022 ರಲ್ಲಿ ಜಪಾನ್ 46 ಬಿಲಿಯನ್ ಡಾಲರ್ ರಕ್ಷಣೆಗೆ ಮೀಸಲಿಡುವ ಮೂಲಕ ವಿಶ್ವದಲ್ಲಿ 10ನೇ ಸ್ಥಾನ ಪಡೆದಿದೆ. ಇದನ್ನೂ ಓದಿ: ಜಪಾನ್ ಮಿಲಿಟರಿ ಬಜೆಟ್ ಹೆಚ್ಚಿಸಿದ್ದು ಯಾಕೆ?
ಜಿಡಿಪಿ ರ‍್ಯಾಂಕ್
ಜಿಡಿಪಿ ರ‍್ಯಾಂಕ್‌ನಲ್ಲಿ 2009ರವರೆಗೆ ಜಪಾನ್ ವಿಶ್ವದಲ್ಲೇ ಎರಡನೇ ಸ್ಥಾನ ಪಡೆದುಕೊಂಡಿತ್ತು. ನಂತರ ಮೂರನೇ ಸ್ಥಾನದಲ್ಲಿದೆ ಮುಂದುವರಿದಿದೆ.
ಆರ್ಥಿಕತೆಯಲ್ಲಿ ಯಾವ ದೇಶ ಎಷ್ಟನೇ ಸ್ಥಾನದಲ್ಲಿ ಇದೆ?
ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ ಚೀನಾ ಎರಡನೇ ಸ್ಥಾನದಲ್ಲಿದೆ. ಜಪಾನ್, ಜರ್ಮನಿ, ಭಾರತ ಅನುಕ್ರಮವಾಗಿ ನಂತರದ ಸ್ಥಾನದಲ್ಲಿದೆ.
ಭಾರತ ಜಪಾನ್ ಹಿಂದಿಕ್ಕುತ್ತಾ?
ಕೋವಿಡ್ (Covid 19) ನೀಡಿದ ಹೊಡೆತದಿಂದ ಹಲವು ದೇಶಗಳು ಇನ್ನೂ ಚೇತರಿಸಿಕೊಂಡಿಲ್ಲ. ಇದರ ಬೆನ್ನಲ್ಲೇ ರಷ್ಯಾ-ಉಕ್ರೇನ್ ಯುದ್ಧ ಮತ್ತಷ್ಟು ಹೊಡೆತ ನೀಡಿತು. ಪರಿಸ್ಥಿತಿ ಹೀಗಿದ್ದರೂ ಭಾರತದ ಜಿಡಿಪಿ ಬೆಳವಣಿಗೆ (India GDP Growth) ದರ ಅತ್ಯುತ್ತಮವಾಗಿದೆ. 2022 ರಲ್ಲಿ 7% ಪ್ರಗತಿ ಸಾಧಿಸಿದ್ದೇವೆ. ಈ ರೀತಿಯ ಬೆಳವಣಿಗೆಯನ್ನು ಕಾಯ್ದುಕೊಂಡರೆ ಭಾರತ 2027ರಲ್ಲಿ ಜಪಾನ್ ಮತ್ತು ಜರ್ಮನಿಯನ್ನು ಹಿಂದಿಕ್ಕಿ 3ನೇ ಸ್ಥಾನವನ್ನು ಪಡೆದುಕೊಳ್ಳಬಹುದು ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ಭವಿಷ್ಯ ನುಡಿದಿದೆ. 2027ರ ವೇಳೆಗೆ ಜರ್ಮನಿ 4.9 ಟ್ರಿಲಿಯನ್ ಡಾಲರ್, ಜಪಾನ್ 5.2 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಿದ್ದರೆ ಭಾರತ 5.4 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಿ ಹೊರಹೊಮ್ಮಲಿದೆ ಎಂದು ಐಎಂಎಫ್ ಹೇಳಿದೆ.
ಜಪಾನ್‌ನಲ್ಲಿ ಒಟ್ಟು ಜನಸಂಖ್ಯೆಯಲ್ಲಿ 30% ಜನ 65 ವರ್ಷ ಮೇಲ್ಪಟ್ಟವರಾಗಿದ್ದಾರೆ . ಆದರೆ ಭಾರತದಲ್ಲಿ 65 ವರ್ಷ ಮೇಲ್ಪಟ್ಟವರ ಸಂಖ್ಯೆ ಇರುವುದು ಕೇವಲ 7%. 15-64 ವರ್ಷದ ಜನಸಂಖ್ಯೆ ದುಡಿಯುವ ವರ್ಗದ ಜನಸಂಖ್ಯೆ ಎಂದು ಕರೆಯಲಾಗುತ್ತದೆ. ಈ ಸಂಖ್ಯೆ ಹೆಚ್ಚಿದ್ದಷ್ಟು ದೇಶದ ಅಭಿವೃದ್ಧಿಯಾಗುತ್ತದೆ ಎನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯ. ಭಾರತದಲ್ಲಿ 70% ಜನರು 15-64 ವಯಸ್ಸಿನ ಒಳಗಡೆ ಇದ್ದಾರೆ.
ಸವಾಲು, ಪರಿಹಾರ ಏನು?
ಒಂದು ದೇಶದ ಆಮದು ಕಡಿಮೆಯಾಗಿ ರಫ್ತು ಹೆಚ್ಚಾದರೆ ಮಾತ್ರ ಆ ದೇಶ ಅಭಿವೃದ್ಧಿ ಹೊಂದಿದೆ ಎಂದು ಪರಿಗಣಿಸಲಾಗುತ್ತದೆ. ಬಹಳ ಮುಖ್ಯ 2022- 23ನೇ ಅವಧಿಯಲ್ಲಿ ಭಾರತ 447 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳನ್ನು ರಫ್ತು ಮಾಡಿದರೆ 714 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಭಾರತ ಮೇಕ್ ಇನ್ ಇಂಡಿಯಾ ಹೆಚ್ಚು ಒತ್ತು ನೀಡಲು ಆರಂಭಿಸಿದ್ದು, ಹಲವು ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಿವೆ. ಇದರ ಫಲ ಈಗಲೇ ಬರದೇ ಇದ್ದರೂ ಕೆಲ ವರ್ಷಗಳಲ್ಲಿ ಸಿಗಲಿದೆ.
ವಿಶ್ವದಲ್ಲೇ ಯುಪಿಐ (UPI) ಪಾವತಿಯಲ್ಲಿ ಭಾರತ ವಿಶ್ವದಲ್ಲೇ ನಂಬರ್ ಒನ್ ಸ್ಥಾನ ಪಡೆದಿದೆ. ಈಗ ಹಲವು ದೇಶಗಳ ಜೊತೆ ಭಾರತದ ಆರ್‌ಬಿಐ (RBI) ಯುಪಿಐ ಪಾವತಿ ಸಂಬಂಧ ಸಹಿ ಹಾಕಿದೆ.
In line with the vision of Hon'ble PM Shri @narendramodi of creating an indigenous payment platform that was secure and easy to use, Unified Payment Interface (UPI) was launched in 2016.
In 2022, 46% of the world’s real-time payments originated in India.#9YearsOfTechForGrowth pic.twitter.com/UACnvAwRSc
— Nirmala Sitharaman Office (@nsitharamanoffc) June 9, 2023
ಬಹಳ ಮುಖ್ಯವಾಗಿ ಈಗ ಡಾಲರ್ ಅವಲಂಬನೆ ಕಡಿಮೆ ಮಾಡಲು ಸ್ಥಳೀಯ ಕರೆನ್ಸಿ ಜೊತೆಯಲ್ಲೇ ವ್ಯವಹಾರ ನಡೆಸುತ್ತಿದೆ. ಕಚ್ಚಾ ತೈಲ ಪೂರೈಸುವ ದೇಶ ಯುದ್ಧದಲ್ಲಿ ಭಾಗವಹಿಸಿದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಸ್ತುಗಳ ಬೆಲೆ ಏರಿಕೆಯಿಂದ ಡಾಲರ್ ಬೆಲೆ ಏರಿಕೆಯಾಗುತ್ತದೆ. ಕಚ್ಚಾ ತೈಲ ದರ ಭಾರೀ ಏರಿಕೆಯಾಗುತ್ತದೆ. ಇದಕ್ಕೆ ಪರಿಹಾರ ಎಂಬಂತೆ ಇದೇ ಮೊದಲ ಬಾರಿಗೆ ಯುಎಇ ಜೊತೆ ಸ್ಥಳೀಯ ಕರೆನ್ಸಿ ಪಾವತಿಸಿ ಭಾರತ ಕಚ್ಚಾ ತೈಲವನ್ನು ಖರೀದಿಸಿದೆ.
ಭಾರತ ಈಗಾಗಲೇ ಪಾಕಿಸ್ತಾನದ ಜೊತೆ ಮೂರು ಬಾರಿ, ಚೀನಾದ ಜೊತೆ 1 ಬಾರಿ ಯುದ್ಧ ಮಾಡಿದೆ. ಒಂದು ವೇಳೆ ಭಾರತ ವಿರೋಧಿಗಳ ಜೊತೆ ಯುದ್ಧ ನಡೆಸಿದರೆ ಆರ್ಥಿಕತೆಯ ಮೇಲೆ ಬಹಳ ಪೆಟ್ಟು ಬೀಳುತ್ತದೆ. ಈ ರೀತಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ. ಇದನ್ನೂ ಓದಿ: ಡಾಲರ್‌ಗೆ ರೂಪಾಯಿ ಸೆಡ್ಡು – ಇಂಟರ್‌ನ್ಯಾಷನಲ್ ಕರೆನ್ಸಿ ಆಗುತ್ತಾ?
ಕೊನೆಯದಾಗಿ ಮೇ 2023ರಲ್ಲಿ ಭಾರತದ ಚುನಾವಣಾ ಆಯೋಗ ನೀಡಿದ ಮಾಹಿತಿ ಪ್ರಕಾರ ದೇಶದಲ್ಲಿ 6 ರಾಷ್ಟ್ರೀಯ ಪಕ್ಷ, 54 ಪ್ರಾದೇಶಿಕ ಪಕ್ಷಗಳು ಇವೆ. ಒಂದೊಂದು ರಾಜ್ಯದಲ್ಲಿ ಒಂದೊಂದು ಪಕ್ಷಗಳು ಆಡಳಿತ ನಡೆಸುತ್ತಿವೆ. ಹೀಗಾಗಿ ಒಂದು ಸರ್ಕಾರ ಬಂದ ಯೋಜನೆಗಳನ್ನು ಇನ್ನೊಂದು ಸರ್ಕಾರ ಮುಂದುವರಿಸುತ್ತದೆ ಎನ್ನುವುದು ಗ್ಯಾರಂಟಿ ಇಲ್ಲ. ಹೀಗಾಗಿ ಅಭಿವೃದ್ಧಿ ಪರ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಅನುದಾನ ನೀಡಬೇಕು. ವಿಶೇಷವಾಗಿ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಬೇಕು ಮತ್ತು ವಿದೇಶಿ ಹೂಡಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಹೂಡಿಕೆಗಳಿಗೆ ಈಗ ಫಲ ಬಾರದೇ ಇದ್ದರೆ 3-4 ವರ್ಷಗಳಲ್ಲಿ ಖಂಡಿತವಾಗಿಯೂ ಫಲ ಬಂದೇ ಬರುತ್ತದೆ. ಅಭಿವೃದ್ಧಿ ಪರ ಯೋಜನೆಗಳು ಯಶಸ್ವಿಯಾದರೆ ಖಂಡಿತವಾಗಿಯೂ ಆರ್ಥಿಕತೆಯಲ್ಲಿ ಭಾರತ ವಿಶ್ವದ ಮೂರನೇ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನ ಇಲ್ಲ.
– ಅಶ್ವಥ್ ಸಂಪಾಜೆ
Web Stories