Connect with us

ನಿಮ್ಮನ್ನು ಯಾವ ಸಮಯದಲ್ಲಾದ್ರೂ ಕರೀಬಹುದು- ಸಂಸತ್ತಿನ ಹಾಜರಾತಿ ಬಗ್ಗೆ ಜನಪ್ರತಿನಿಧಿಗಳಿಗೆ ಮೋದಿ ವಾರ್ನಿಂಗ್

ನಿಮ್ಮನ್ನು ಯಾವ ಸಮಯದಲ್ಲಾದ್ರೂ ಕರೀಬಹುದು- ಸಂಸತ್ತಿನ ಹಾಜರಾತಿ ಬಗ್ಗೆ ಜನಪ್ರತಿನಿಧಿಗಳಿಗೆ ಮೋದಿ ವಾರ್ನಿಂಗ್

ನವದೆಹಲಿ: ಸಂಸತ್ತಿನಲ್ಲಿ ಸಂಸದರ ಹಾಜರಾತಿಯ ಕೊರತೆ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಬಿಜೆಪಿಯ ಸಂಸದರಿಗೆ ಎಚ್ಚರಿಕೆ ನೀಡಿರೋ ಮೋದಿ, “ನಿಮಲ್ಲಿ ಯಾರನ್ನು ಬೇಕಾದ್ರೂ ಯಾವ ಸಮಯದಲ್ಲಾದ್ರೂ ನಾನು ಕರೆಯಬಹುದು” ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ. ಈ ಮೂಲಕ ಸಂಸತ್ತಿನಲ್ಲಿ ಒಂದು ದಿನವೂ ಗೈರಾಗದಂತೆ ಪಕ್ಷದ ಶಾಸಕರು ಹಾಗೂ ಸಂಸದರಿಗೆ ಸಭೆಯಲ್ಲಿ ಮೋದಿ ಎಚ್ಚರಿಸಿದ್ದಾರೆ.

ಸಂಸತ್ತಿನ ಕಲಾಪಗಳಲ್ಲಿ ಭಾಗವಹಿಸುವುದು ನಿಮ್ಮ ಆದ್ಯ ಕರ್ತವ್ಯ. ನಾನು ಸಾಕಷ್ಟು ಕೆಲಸಗಳನ್ನ ಮಾಡಬಹುದು. ಆದ್ರೆ ಉಭಯ ಸದನಗಳಲ್ಲಿ ನಿಮ್ಮ ಪರವಾಗಿ ಹಾಜರಾಗಲು ಸಾಧ್ಯವಿಲ್ಲ ಎಂದು ಮೋದಿ ಖಡಕ್ ಆಗಿ ಹೇಳಿದ್ದಾರೆ ಎನ್ನಲಾಗಿದೆ.

ಬಜೆಟ್ ಅಧಿವೇಶನದ ವೇಳೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಹಾಜರತಿ ಕೊರತೆ/ಕೋರಂನ ಕೊರತೆ ಮತ್ತು ಖಾಲಿ ಬೆಂಚ್‍ಗಳ ಬಗ್ಗೆ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಮಾತನಾಡಿದ ಬಳಿಕ ಮೋದಿ ಈ ಎಚ್ಚರಿಕೆ ನೀಡಿದ್ದಾರೆ. ಸದನದಲ್ಲಿ ಕೋರಂಗೆ ಅವಶ್ಯವಿರುವಷ್ಟು ಜನಪ್ರತಿನಿಧಿಗಳು ಹಾಜರಿಲ್ಲವಾದ್ರೆ ಕೋರಂ ಬೆಲ್ ಅಲರ್ಟ್ ನೀಡುತ್ತದೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜನಪ್ರತಿನಿಧಿಗಳು ಬರುವವರೆಗೂ ಕಲಾಪ ಸ್ಥಗಿತಗೊಳ್ಳುತ್ತದೆ.

ಇದರಿಂದ ನಿರಾಸೆಗೊಂಡ ಮೋದಿ, ಸಂಸತ್ತಿನಲ್ಲಿ ಹಾಜರಾಗುವಂತೆ ಸಂಸದರನ್ನು ಮನವಿ ಮಾಡಬೇಕಿಲ್ಲ. ಅದು ಅವರ ಜವಾಬ್ದಾರಿಯಾಗಿದೆ. ತಮ್ಮ ಕೇತ್ರದ ಲಕ್ಷಾಂತರ ಜನರ ಪ್ರತಿನಿಧಿಯಾಗಿ ಕಲಾಪದಲ್ಲಿ ಭಾಗವಹಿಸುವುದು ಅವರ ಕರ್ತವ್ಯ ಅಂತ ಹೇಳಿದ್ದಾರೆ.

ಪ್ರಧಾನಿಯಾಗಿ ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಸಂಸತ್ತಿನಲ್ಲಿ ಹಾಜರಿರುವಂತೆ ಹೇಳುತ್ತಲೇ ಇದ್ದರು. ಆದ್ರೆ ಇದೇ ಮೊದಲ ಬಾರಿಗೆ ಸಂಸದರಿಗೆ ಖಡಕ್ ಆಗಿ ಹೇಳುವ ಮೂಲಕ ಎಚ್ಚರಿಕೆ ನೀಡಿದ್ದಾರೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

Advertisement
Advertisement