ಬೆಂಗಳೂರು: ರಾಜ್ಯದ ಮೊದಲ ಮತ್ತು ದೇಶದ ಎರಡನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿದ್ದಿದೆ. ಏಪ್ರಿಲ್ 18ರಂದು ರಾಜ್ಯದ 14 ಕ್ಷೇತ್ರಗಳನ್ನು ಒಳಗೊಂಡಂತೆ ಒಟ್ಟು 97 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.
ರಾಜ್ಯದಲ್ಲಿ ಹೇಗಿತ್ತು ಪ್ರಚಾರ?
ರಾಜ್ಯದಲ್ಲಿ ಮೊದಲ ಹಂತದ ಲೋಕ ಸಮರದ ಮತದಾನಕ್ಕೆ ಇನ್ನು 45 ಗಂಟೆ ಮಾತ್ರ ಬಾಕಿ ಇದೆ. ತಿಂಗಳಿಂದ ಅಧಿಕೃತವಾಗಿ ನಡೆದಿದ್ದ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಾಗಿದೆ. ಎಲ್ಲರ ಆರೋಪ, ಆಕ್ಷೇಪದಂತೆ 14 ಕ್ಷೇತ್ರಗಳ ಪೈಕಿ ಕಂಪ್ಲೀಟ್ ಹೈಜಾಕ್ ಮಾಡಿದ್ದು, ಅದೇ ಮಂಡ್ಯ ರಾಜಕೀಯ. ಮಂಡ್ಯದಲ್ಲಿ ಪಕ್ಷೇತರ ಆಭ್ಯರ್ಥಿ ಸುಮಲತಾ ಅಂಬರೀಶ್ ಸ್ವಾಭಿಮಾನ ಹೆಸರಿನಲ್ಲಿ ದೊಡ್ಡ ಸಮಾವೇಶ ನಡೆಸಿದ ಮತ ಯಾಚನೆ ಮಾಡಿದರು. ಇತ್ತ ಸಿಎಂ ಕುಮಾರಸ್ವಾಮಿ ಸಹ ಪುತ್ರನ ಪರವಾಗಿ ಪ್ರಚಾರ ನಡೆಸಿದರು.
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೊನೆ ಕ್ಷಣದವರೆಗೂ ಮತದಾರರ ಓಲೈಕೆಗೆ ಅಭ್ಯರ್ಥಿ ಹಾಗೂ ಕಾರ್ಯಕರ್ತರು ಇನ್ನಿಲ್ಲದ ಕಸರತ್ತು ನಡೆಸಿದರು. ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮೂಡಿಗೆರೆಯಲ್ಲಿ ರೋಡ್ ಶೋ ಹಾಗೂ ಬಹಿರಂಗ ಸಭೆಯ ಮೂಲಕ ಮತಯಾಚನೆ ಮಾಡಿದರು. ಚಿಕ್ಕಬಳ್ಳಾಪುರ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ದೇವನಹಳ್ಳಿಯಲ್ಲಿ ಪ್ರಚಾರ ಮಾಡಿದರು. ಮಂಗಳೂರಿನಲ್ಲಿ ನಳೀನ್ ಕುಮಾರ್ ಕಟೀಲ್ ರೋಡ್ ಶೋ ನಡೆಸಿದರು ಮತ ನೀಡುವಂತೆ ಮನವಿ ಮಾಡಿಕೊಂಡರು.
ತಮಿಳುನಾಡಿನ 39, ಕರ್ನಾಟಕ 14, ಮಹಾರಾಷ್ಟ್ರ 10, ಉತ್ತರ ಪ್ರದೇಶ 8, ಅಸ್ಸಾಂ, ಬಿಹಾರ, ಓರಿಸ್ಸಾಗಳಲ್ಲಿ 5, ಛತ್ತೀಸಘಡ ಮತ್ತು ಪಶ್ಚಿಮ ಬಂಗಾಲದಲ್ಲಿ ತಲಾ 3, ಜಮ್ಮು ಮತ್ತು ಕಾಶ್ಮೀರ 2, ಮಣಿಪುರ, ತ್ರಿಪುರ ಹಾಗೂ ಪುದುಚೇರಿಯ ತಲಾ ಒಂದು ಕ್ಷೇತ್ರಗಳಲ್ಲಿ ಏಪ್ರಿಲ್ 18ರಂದು ಚುನಾವಣೆ ನಡೆಯಲಿದೆ.
ಕಣದಲ್ಲಿರುವ ಪ್ರಮುಖರು:
ನೆರೆಯ ತಮಿಳುನಾಡಿನ 39 ಲೋಕಸಭಾ ಕ್ಷೇತ್ರಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದೆ. ತಮಿಳುನಾಡಿನ ಮಹಾ ಚೇತನ ಎಂದು ಕರೆಸಿಕೊಂಡ ಮಾಜಿ ಸಿಎಂ ಜಯಲಲಿತಾ ಮತ್ತು ಕರುಣಾನಿಧಿ ಅಗಲಿದ ಬಳಿಕ ನಡೆಯುತ್ತಿರುವ ಮೊದಲ ಲೋಕಸಭಾ ಚುನಾವಣೆ ಇದಾಗಿದೆ. ತಮಿಳುನಾಡಿ ಬಿಜೆಪಿ ರಾಜ್ಯಾಧ್ಯಕ್ಷ ತಮಿಲಿಸಾಯಿ ಸುಂದರರಾಜನ್ ತೂತುಕುಡಿ ಲೋಕ ಅಖಾಡದಲ್ಲಿ ಡಿಎಂಕೆಯ ಕರುಣಾನಿಧಿ ಪುತ್ರಿ ಕನ್ನಿಮೋಳಿಯನ್ನು ಎದುರಿಸುತ್ತಿದ್ದಾರೆ.
ಉತ್ತರ ಪ್ರದೇಶದ 8 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಮಥುರಾದಿಂದ ಬಿಜೆಪಿಯಿಂದ ನಟಿ ಹೇಮಾ ಮಾಲಿನಿ ಸ್ಪರ್ಧೆ ಮಾಡಿದ್ದಾರೆ. ಗೋಧಿ ಕಟಾವು, ರೈತ ಮಹಿಳೆ ಫೋಟೋ ಮತ್ತು ಟ್ರ್ಯಾಕ್ಟರ್ ಚಾಲನೆ ಮಾಡುವ ಮೂಲಕ ಪ್ರಚಾರ ಕೈಗೊಂಡಿದ್ದರು.