– ಸಾಕ್ಷಿ ನಾಶ ಮಾಡಿದ ಸಿಪಿಐ ಸೇರಿ ಐವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್
ಕಲಬುರಗಿ: ನಿಷೇಧಿತ ಒಂಟೆ ಮಾಂಸ ಮಾರಾಟದ ಸಾಕ್ಷಿ ನಾಶ ಮಾಡಿದ ಕಲಬುರಗಿಯ ಎಂಬಿ ನಗರ ಠಾಣೆಯ ಸಿಪಿಐ ಸೇರಿದಂತೆ ಐವರು ಪೊಲೀಸರ ಅಮಾನತುಗೊಳಿಸಿ ಈಶಾನ್ಯ ವಲಯ ಐಜಿಪಿ ಮನೀಶ್ ಖರ್ಬಿಕರ್ ಆದೇಶ ಹೊರಡಿಸಿದ್ದಾರೆ.
ಎಂಬಿ ನಗರ ಠಾಣೆಯ ಸಿಪಿಐ ವಾಜಿದ್ ಪಟೇಲ್, ಪಿಎಸ್‍ಐ ದೊಡ್ಡಮನಿ, ಪೇದೆಗಳಾದ ಶ್ರೀಶೈಲ್, ಮಲ್ಲಿಕಾರ್ಜುನ್ ಸೇರಿದಂತೆ ಒಟ್ಟು ಐದು ಜನರನ್ನು ಅಮಾನತು ಮಾಡಲಾಗಿದೆ. ಜೊತೆಗೆ ಈ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
Advertisement
Advertisement
ಏನಿದು ಪ್ರಕರಣ?:
ಲಾರಿಗಳ ಮೂಲಕ ರಾಜಸ್ಥಾನದಿಂದ ಕಲಬುರಗಿಗೆ ಒಂಟೆಗಳನ್ನು ತರಲಾಗುತ್ತಿದೆ. ಅಷ್ಟೇ ಅಲ್ಲದೆ ಅವುಗಳನ್ನು ನಗರದ ಹೊರ ವಲಯದಲ್ಲಿ ಹತ್ಯೆ ಮಾಡಿ, ಮಾಂಸವನ್ನು ಮಾರಾಟ ಮಾಡಲಾಗುತ್ತದೆ ಎಂದು ಆಂಧ್ರಪ್ರದೇಶದ ಪ್ರಾಣಿ ದಯಾ ಸಂಘದ ಕೆಲ ಸದಸ್ಯರು ಕಲಬುರಗಿ ಶಾಸಕ ದತ್ತಾತ್ರೇಯ ಅವರಿಗೆ ಮಾಹಿತಿ ನೀಡಿದ್ದರು. ಅಷ್ಟೇ ಅಲ್ಲದೇ ಒಂಟೆ ಮಾಂಸ ಮಾರಾಟದ ದಂಧೆಯ ಹಿಂದೆ ದೊಡ್ಡ ಗುಂಪಿದೆ. ಈಗಾಗಲೇ 100ಕ್ಕೂ ಹೆಚ್ಚು ಒಂಟೆಗಳನ್ನು ಕೊಯ್ದು ಮಾಂಸ ಮಾರಾಟ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.
Advertisement
Advertisement
ಆಂಧ್ರಪ್ರದೇಶದ ಪ್ರಾಣಿ ದಯಾ ಸಂಘದ ಸದಸ್ಯರಿಂದ ಮಾಹಿತಿ ಪಡೆದ ಶಾಸಕ ದತ್ತಾತ್ರೇಯ ಅವರು ಪೊಲೀಸರ ಗಮನಕ್ಕೆ ತಂದಿದ್ದರು. ಈ ಸಂಬಂಧ ಕಲಬುರಗಿ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಪೊಲೀಸರು ಕ್ರಮ ತೆಗೆದುಕೊಳ್ಳಲಿಲ್ಲ. ಇದರಿಂದಾಗಿ ಆಂಧ್ರಪ್ರದೇಶದ ಪ್ರಾಣಿ ದಯಾ ಸಂಘದ ಸದಸ್ಯರು ಕೇಂದ್ರ ಸಚಿವೆ, ಪ್ರಾಣಿ ಹಕ್ಕು ಕಾರ್ಯಕರ್ತೆ ಮನೇಕಾ ಗಾಂಧಿ ಅವರಿಗೆ ದೂರು ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮನೇಕಾ ಗಾಂಧಿ ಅವರು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿ ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ (ಡಿಜಿಪಿ) ನೀಲಮಣಿ ಅವರಿಗೆ ಪತ್ರ ಬರೆದಿದ್ದರು.
ಮನೇಕಾ ಗಾಂಧಿ ಅವರು ಸೂಚನೆ ಹಿನ್ನೆಲೆಯಲ್ಲಿ ಡಿಜಿಪಿ ನೀಲಮಣಿ ಅವರು ಐಜಿಪಿ ಮನೀಷ್ ಖರ್ಬಿಕರ್ ಅವರಿಗೆ ಸ್ಥಳ ಪರಿಶೀಲನೆ ನಡೆಸುವಂತೆ ತಿಳಿದ್ದರು. ಆದರೆ ಮನೀಷ್ ಅವರು ಸ್ಥಳಕ್ಕೆ ಬರುವ ಮುನ್ನವೇ ಸಿಪಿಐ ವಾಜಿದ್ ಪಟೇಲ್ ಸಾಕ್ಷಿ ನಾಶಪಡಿಸಿದ್ದರು. ಹೀಗಾಗಿ ಒಂಟೆ ಮಾರಾಟ ದಂಧೆಗೆ ಎಂಬಿ ನಗರ ಠಾಣೆಯ ಸಿಪಿಐ ವಾಜಿದ್ ಪಟೇಲ್ ಬೆಂಗಾವಲಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಒಟ್ಟು ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಮನೀಷ್ ಅವರು ಆದೇಶ ಹೊರಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv