ಕೋಲ್ಕತ್ತಾ: ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ಬಿಜೆಪಿ ಮಾಜಿ ವಕ್ತಾರೆ ನೀಡಿದ ಹೇಳಿಕೆಗಳಿಂದಾಗಿ ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ನಿಯಂತ್ರಿಸಲು ಪೊಲೀಸರಿಗೆ ಸಾಧ್ಯವಾಗದಿದ್ದರೆ ರಾಜ್ಯ ಸರ್ಕಾರ ಕೇಂದ್ರ ಪಡೆಗಳನ್ನು ಕರೆಸಬೇಕು ಎಂದು ಕೋಲ್ಕತ್ತಾ ಹೈಕೋರ್ಟ್ ಸೂಚನೆ ನೀಡಿದೆ.
ದುಷ್ಕರ್ಮಿಗಳನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುವಂತೆ ಹಿಂಸಾಚಾರದ ಘಟನೆಗಳ ವೀಡಿಯೋ ತುಣುಕನ್ನು ಸಂಗ್ರಹಿಸಲು ರಾಜ್ಯ ಅಧಿಕಾರಿಗಳಿಗೆ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಹಾಗೂ ನ್ಯಾಯಮೂರ್ತಿ ರಾಜರ್ಷಿ ಭಾರದ್ವಾಜ್ ಅವರಿದ್ದ ಪೀಠ ಸೂಚಿಸಿದೆ. ಇದನ್ನೂ ಓದಿ: ಪ್ರವಾದಿ ಅವಹೇಳನ – ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 400ಕ್ಕೂ ಹೆಚ್ಚು ಮಂದಿ ಬಂಧನ
ನ್ಯಾಯಾಲಯದಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪರಿಹಾರ ಕ್ರಮ ಕೈಗೊಳ್ಳುವಂತೆ ಹಲವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ಹಿಂಸಾಚಾರದ ವೇಳೆ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು. `ಹೌರಾ ಅಂಕುರ್‌ಹಾಟಿ ರಾಷ್ಟ್ರೀಯ ಹೆದ್ದಾರಿ ತಡೆದ ಪ್ರತಿಯೊಬ್ಬರನ್ನೂ ಬಂಧಿಸಬೇಕು’ ಎಂಬಿತ್ಯಾದಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ನಡುವೆ ಶಾಂತಿಯುತ ಪ್ರತಿಭಟನೆಗೆ ಅವಕಾಶ ಮಾಡಿಕೊಡುವಂತೆಯೂ ಕೆಲ ಅರ್ಜಿಗಳನ್ನು ಸಲ್ಲಿಸಲಾಗಿದೆ. ಇದನ್ನೂ ಓದಿ: ಪ್ರವಾದಿ ವಿರುದ್ಧ ಅವಹೇಳನ – ಮುಸ್ಲಿಂ ಸಂಘಟನೆಗಳ ಪ್ರತಿಭಟನೆಗೆ ವಿಹೆಚ್‌ಪಿ ತೀವ್ರ ಖಂಡನೆ
ರಾಜ್ಯದ ಪ್ರಸ್ತುತ ಪರಿಸ್ಥಿತಿ ಮತ್ತು ಅಧಿಕಾರಿಗಳು ಕೈಗೊಂಡ ಕ್ರಮ ವಿವರಿಸುವ ಅಫಿಡವಿಟ್ ಸಲ್ಲಿಸಲು ಕಾಲಾವಕಾಶ ಅಗತ್ಯವಿರುವುದರಿಂದ ವಿಚಾರಣೆ ಮುಂದೂಡಬೇಕೆಂದು ಅಡ್ವೋಕೇಟ್ ಜನರಲ್ ಕೋರಿದರು. ಇದಕ್ಕೆ ಒಪ್ಪಿದ ನ್ಯಾಯಾಲಯ ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ಶಾಂತಿ ಕಾಪಾಡಲು ಸಾಧ್ಯವಾಗುವ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿದೆ. ಜೊತೆಗೆ ಹಿಂಸಾಚಾರ ಪ್ರತಿಭಟನೆ ನಿಯಂತ್ರಿಸಲು ಸಾಧ್ಯವಾಗದೇ ಇದ್ದಲ್ಲಿ, ಕೇಂದ್ರದ ಪಡೆಗಳನ್ನು ಕರೆಸಬೇಕು ಎಂದು ನಿರ್ದೇಶನ ನೀಡಿದೆ.
ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಹೇಳಿಕೆ ಖಂಡಿಸಿ ಜೂನ್ 10 ರಂದು ಪಶ್ಚಿಮ ಬಂಗಾಳದ ಹೌರಾ, ಮುರ್ಷಿದಾಬಾದ್ ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚರ‍್ಕೆ ತಿರುಗಿತ್ತು. ಇದನ್ನೂ ಓದಿ: ಪದವೀಧರ ಮಹಿಳೆಯನ್ನು ಕೆಲಸಕ್ಕೆ ಹೋಗುವಂತೆ ಒತ್ತಾಯಿಸುವಂತಿಲ್ಲ – ಹೈಕೋರ್ಟ್
ಈ ಘಟನೆಗೆ ಸಂಬಂಧಿಸಿದಂತೆ 26 ಎಫ್‌ಐಆರ್ ದಾಖಲಾಗಿದ್ದು, 240 ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ ಉತ್ತರ ಪ್ರದೇಶದಲ್ಲೂ ಹಿಂಸಾತ್ಮಕ ಪ್ರತಿಭಟನೆ ನಡೆದಿದ್ದು, ಈವರೆಗೆ ದೇಶಾದ್ಯಂತ 400ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದು 40ಕ್ಕೂ ಹೆಚ್ಚು FIRಗಳು ದಾಖಲಾಗಿವೆ.