300ಕ್ಕೂ ಹೆಚ್ಚು ಇಲಿಗಳೊಂದಿಗೆ ಮಹಿಳೆ ವ್ಯಾನ್‍ನಲ್ಲೇ ವಾಸ

Public TV
2 Min Read
women live with rats

ವಾಷಿಂಗ್ಟನ್: ಒಂದು ಇಲಿ ಮನೆಯಲ್ಲಿದ್ದರೇನೆ ಪರದಾಡುತ್ತೇವೆ, ಆದರೆ ಇಲ್ಲೊಬ್ಬ ಮಹಿಳೆ ಸುಮಾರು 300ಕ್ಕೂ ಹೆಚ್ಚು ಇಲಿಗಳ ಜೊತೆ ವ್ಯಾನ್‍ನಲ್ಲಿ ವಾಸಿಸುತ್ತಿದ್ದಾರೆ.

ಈ ಮಹಿಳೆಯ ಹೆಸರು ಕಾರ್ಲಾ ಇವರು 300ಕ್ಕೂ ಹೆಚ್ಚು ಇಲಿಗಳನ್ನು ಸಾಕಿದ್ದಾರೆ. ಮಾತ್ರವಲ್ಲ ಈ ಇಲಿಗಳೊಟ್ಟಿಗೆ ಮಹಿಳೆಯು ಸಹ ವಾಸಿಸುತ್ತಿದ್ದಾಳೆ ಎಂಬುದು ಅಚ್ಚರಿಯ ವಿಷಯವಾಗಿದೆ. ಇಲಿಗಳೊಂದಿಗೆ ವಾಸಿಸುವುದು ಕುಟುಂಬದೊಂದಿಗೆ ವಾಸಿಸುವಷ್ಟೇ ಸಾಮಾನ್ಯ ಎಂದು ಈ ಮಹಿಳೆ ಭಾವಿಸಿದ್ದಾರೆ.

ಇವರು ಕ್ಯಾಲಿಫೋರ್ನಿಯಾದ ಬೀಚ್ ಬಳಿ ಇರುವ ಸ್ಯಾನ್ ಡಿಯಾಗೋದ ಸಮುದಾಯದಲ್ಲಿ ವಾಸಿಸುತ್ತಿದ್ದು, ಅಂಗಡಿಯ ಪಕ್ಕದಲ್ಲೇ ನಿಲ್ಲಿಸಿರುವ ಮಿನಿ ವ್ಯಾನ್‍ನೊಳಗೆ ಸುಮಾರು 300 ಸಾಕು ಇಲಿಗಳೊಂದಿಗೆ ವಾಸಿಸುತ್ತಿದ್ದಾರೆ. ಇದಕ್ಕೆ ‘ರೊಡೆಂಟ್ ವಿಲ್ಲೆ’ ಎಂದು ಹೆಸರಿಟ್ಟಿದ್ದಾರೆ.

women live with rats 2 1

ವರದಿಗಳ ಪ್ರಕಾರ, ರೊಡೆಂಟ್ ವಿಲ್ಲೆ ಕೇವಲ ಎರಡು ಇಲಿಗಳಿಂದ ಪ್ರಾರಂಭವಾಯಿತು. ಆದರೆ ಸ್ವಲ್ಪ ಸಮಯದಲ್ಲೇ 300ಕ್ಕೂ ಹೆಚ್ಚು ಇಲಿಗಳು ಸೇರಿಕೊಂಡವು. ಈ 300 ಇಲಿಗಳ ಪೈಕಿ 140 ಇಲಿಗಳನ್ನು ಈ ಮಹಿಳೆ ದತ್ತು ಪಡೆಯಲು ಮುಂದಾಗಿದ್ದಾರೆ.

ಅಕ್ಟೋಬರ್ 8ರಂದು ಸ್ಯಾನ್ ಡಿಯಾಗೋ ಹ್ಯೂಮನ್ ಸೊಸೈಟಿಗೆ ಕರೆ ಮಾಡಿ ಕರ್ಲಾ ಈ ಕುರಿತು ಮಾಹಿತಿ ನೀಡಿದ್ದಾರೆ. ಲೆಕ್ಕವಿಲ್ಲದಷ್ಟು ಇಲಿಗಳು ನನ್ನ ಆರೈಕೆಯಲ್ಲಿವೆ. ಹೀಗಾಗಿ ನಿಮ್ಮ ಸಹಾಯ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ.

ಕರೆಯ ನಂತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ವ್ಯಾನ್‍ನಲ್ಲಿರುವ ಇಲಿಗಳನ್ನು ಕಂಡು ಅಚ್ಚರಿಗೊಳಗಾಗಿದ್ದಾರೆ. ಭಾರೀ ಪ್ರಮಾಣದ ಇಲಿಗಳಿವೆ. ಇವು ಕೇವಲ ವ್ಯಾನ್‍ನಲ್ಲಿ ವಾಸಿಸುತ್ತಿಲ್ಲ, ಹೊರಗಡೆಯೂ ಇವೆ. ಆದರೆ ವ್ಯಾನ್ ಒಳಗೆ ಬರುವುದು, ಹೋಗುವುದನ್ನು ಮಾಡುತ್ತಿವೆ. ಅಷ್ಟು ಪ್ರಮಾಣದ ಇಲಿಗಳನ್ನು ಕಂಡು ನಮಗೆ ಆಶ್ಚರ್ಯವಾಗಿದೆ ಎಂದು ಹ್ಯೂಮನ್ ಸೊಸೈಟಿಯ ಕಾನೂನು ಜಾರಿ ವಿಭಾಗದ ಕ್ಯಾಪ್ಟನ್ ಡೇನಿ ಕುಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

women live with rats 4

ಅಧಿಕಾರಿಗಳು ಈ ವಿಡಿಯೋವನ್ನು ಸೆರೆ ಹಿಡಿದಿದ್ದು, ವಿಡಿಯೋದಲ್ಲಿ ಇಲಿಗಳು ವ್ಯಾನ್ ಸೀಟ್, ಮೇಲ್ಭಾಗ ಹಾಗೂ ಡೋರ್ ಬಳಿ ಓಡಾಡುತ್ತಿವೆ. ಅಲ್ಲದೆ ವ್ಯಾನ್‍ನಲ್ಲಿಯೇ ಬಿಲಗಳನ್ನು ಮಾಡಿಕೊಂಡು ವಾಸಿಸುತ್ತಿವೆ.

ಪ್ರಾಣಿಗಳನ್ನು ಕ್ರೂರವಾಗಿ ನೋಡಿಕೊಳ್ಳುತ್ತಿಲ್ಲ, ಅಲ್ಲದೆ ಕುರ್ಲಾ ಇಲಿಗಳನ್ನು ಸಂಗ್ರಹಿಸುತ್ತಿಲ್ಲ ಎಂದು ಕುಕ್ ತಿಳಿಸಿದ್ದಾರೆ. ಇದು ಕ್ರೂರತೆಯ ಪ್ರಕರಣವಲ್ಲ, ಆದರೆ ಮಾಲೀಕರು ಸಹಾಯ ಮಾಡುವಂತೆ ಬೇಡಿಕೊಳ್ಳುತ್ತಿದ್ದಾರೆ. ಕುರ್ಲಾ ಇಲಿಗಳಿಗೆ ಉತ್ತಮವಾಗಿಯೇ ಆಹಾರ, ನೀರು ನೀಡುತ್ತಿದ್ದಾರೆ ಎಂದು ಕುಕ್ ಮಾಹಿತಿ ನೀಡಿದ್ದಾರೆ.

women live with rats 3

ವ್ಯಾನ್ ತಪಾಸಣೆ ನಂತರ, ಕುರ್ಲಾ ಅವರ ಮನವಿ ಮೇರೆಗೆ ಇಲಿಗಳನ್ನು ಬೇರೆ ಕಡೆ ಓಡಿಸಲು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಸ್ಯಾನ್ ಡಿಯಾಗೋ ಹ್ಯೂಮ್ಯಾನ್ ಸೊಸೈಟಿಯ ಅಧಿಕಾರಿಗಳು ವಾಹನದ ಪ್ರತಿ ಮೂಲೆಯಲ್ಲಿದ್ದ ಇಲಿಗಳನ್ನು ಸಂಗ್ರಹಿಸಲು ಹಲವಾರು ದಿನಗಳ ಕಾಲ ಪರದಾಡಿದ್ದಾರೆ. ಅಧಿಕಾರಿಗಳು ಒಟ್ಟು 320 ಇಲಿಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದು, ಅವುಗಳಲ್ಲಿ ಹೆಚ್ಚಿನವು ಚಿಕ್ಕ ಇಲಿಗಳಾಗಿವೆ ಎಂದು ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *