– 5 ನಿಮಿಷದಲ್ಲಿ ಹೊತ್ತಿ ಉರಿದ ಗುಡಿಸಲು
– ತೆಂಗಿನ ಮರಕ್ಕೆ ಬೆಂಕಿ
– ಸಿಡಿಲು ಬಡಿದು ಮೂವರಿಗೆ ಗಾಯ
ಚಿಕ್ಕಬಳ್ಳಾಪುರ: ಸಿಡಿಲು ಬಡಿದು ಗುಡಿಸಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಗುಡಿಸಲಿನಲ್ಲಿದ್ದ ಸೀಮೆ ಹಸು ಕರು ಸಜೀವದಹನವಾಗಿರೋ ಘಟನೆ ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ಕಡಬೂರು ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಘಟನೆಯಲ್ಲಿ ಕೇವಲ ನೋಡ ನೋಡುತ್ತಿದ್ದಂತೆ 5 ನಿಮಿಷದಲ್ಲಿ ಗುಡಿಸಲು ಬೆಂಕಿಗಾಹುತಿಯಾಗಿ ಸೀಮೆ ಹಸು ಕರು ಸುಟ್ಟು ಕರಕಲಾಗಿದ್ರೆ ಉಳಿದ ಮೂರು ಸೀಮೆಹಸುಗಳು ತೀವ್ರತರವಾದ ಸುಟ್ಟುಗಾಯಗಳಿಂದ ಸಾವು ಬದುಕಿನ ನಡುವೆ ನರಳಾಟ ನಡೆಸಿವೆ.
ಅಂದಹಾಗೆ ಬಾಲಪ್ಪ-ನರಸಮ್ಮ ದಂಪತಿಗೆ ಸೇರಿದ ಸೀಮೆಹಸುಗಳಾಗಿವೆ. ಸಿಡಿಲಿನ ಅರ್ಭಟಕ್ಕೆ ಬೆಚ್ಚಿಬಿದ್ದು ಗುಡಿಸಲಿನಿಂದ ಓಡಿ ಬಂದಿರೋ ಬಾಲಪ್ಪ-ನರಸಮ್ಮ ದಂಪತಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಬದುಕಿಗೆ ಆಧಾರವಾಗಿದ್ದ ಸೀಮೆಹಸುಗಳು ಕಣ್ಣೇದುರೇ ಬೆಂಕಿಗಾಹುತಿಯಾದ ದೃಶ್ಯ ಕಂಡ ದಂಪತಿ ಕಣ್ಣೀರಧಾರೆಯೇ ಹರಿದಿದೆ.
ಜೀವನಧಾರ ಹಸುಗಳನ್ನ ಕಳೆದುಕೊಳ್ಳುವ ಆತಂಕದಲ್ಲಿರೋ ಬಡ ದಂಪತಿಗೆ ದಿಕ್ಕುತೋಚದಂತಾಗಿ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಮತ್ತೊಂದೆಡೆ ಸಿಡಲಿನ ಅರ್ಭಟಕ್ಕೆ ಇದೇ ಗ್ರಾಮದ ವೆಂಕಟನಾರಾಯಣಪ್ಪನವರ ವಠಾರದಲ್ಲಿದ್ದ ತೆಂಗಿನಮರಕ್ಕೂ ಸಹ ಬೆಂಕಿ ಹೊತ್ತಿಕೊಂಡು ಧಗ ಧಗ ಅಂತ ಹೊತ್ತಿಉರಿದಿದೆ. ಅಲ್ಲದೆ ಇದೇ ಗ್ರಾಮದಲ್ಲಿ ಸಿಡಿಲು ಬಡಿದು ಮೂವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.