– ಸಂದೇಶ್‍ಖಾಲಿ ಪ್ರಕರಣ ಪಶ್ಚಿಮ ಬಂಗಾಳ ಮಹಿಳೆಯರಿಗೆ ಸುರಕ್ಷಿತ ಎಂದು ಹೇಳುತ್ತದೆಯೇ?
ಕೋಲ್ಕತ್ತಾ: ಸಂದೇಶ್‍ಖಾಲಿ (Sandeshkhali) ಪ್ರಕರಣದ ವಿಚಾರವಾಗಿ ಮಮತಾ ಬ್ಯಾನರ್ಜಿ (Mamata Banerjee) ಸರ್ಕಾರವನ್ನು ಕಲ್ಕತ್ತಾ ಹೈಕೋರ್ಟ್ (Calcutta High Court) ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಈ ಪ್ರಕರಣದಲ್ಲಿ 100% ಜವಾಬ್ದಾರಿ ಆಡಳಿತ ಪಕ್ಷದ ಮೇಲಿದೆ. 55 ದಿನಗಳು ನೀವು ಕಣ್ಣಾಮುಚ್ಚಾಲೆ ಆಡಿದ್ದೀರಿ. ಅಲ್ಲದೇ ಅಸ್ಪಷ್ಟ ನಿಲುವು ತೆಗೆದುಕೊಂಡಿದ್ದೀರಿ. ನೀವು ಕಣ್ಣು ಮುಚ್ಚುವುದರಿಂದ ಜಗತ್ತು ಕತ್ತಲೆಯಾಗುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಟಿಎಸ್ ಶಿವಜ್ಞಾನಂ ನೇತೃತ್ವದ ಪೀಠ ಸರ್ಕಾರದ ವಿರುದ್ಧ ಚಾಟಿ ಬೀಸಿದೆ.
ಸಂದೇಶಖಾಲಿಯಲ್ಲಿ ನಡೆದ ಸುಲಿಗೆ, ಭೂಹಗರಣ ಮತ್ತು ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ, ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಪ್ರಕರಣದಲ್ಲಿ ಒಂದು ಅಫಿಡವಿಟ್ ಸರಿಯಾಗಿದ್ದರೂ ಅದು ನಾಚಿಕೆಗೇಡಿನ ಸಂಗತಿ. ಒಂದು ಪರ್ಸೆಂಟ್ ನಿಜವಾಗಿದ್ದರೂ ಅದು ಸಂಪೂರ್ಣ ನಾಚಿಕೆಗೇಡಿನ ಸಂಗತಿ. ಇದು ಪಶ್ಚಿಮ ಬಂಗಾಳ ಮಹಿಳೆಯರಿಗೆ ಸುರಕ್ಷಿತ ಎಂದು ಹೇಳುತ್ತದೆಯೇ? ಇಡೀ ಜಿಲ್ಲಾಡಳಿತ ಮತ್ತು ಆಡಳಿತ ಪಕ್ಷ ಇದರ ನೈತಿಕ ಹೊಣೆಗಾರಿಕೆಯನ್ನು ಹೊಂದಿರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಧರ್ಮಸ್ಥಳದ ಮಂಜುನಾಥನಂತೆ ಡಾ.ಮಂಜುನಾಥ್ – ಗುಣಗಾನ ಮಾಡಿದ ಮುನಿರತ್ನ
ಇದೇ ವೇಳೆ ಶೇಖ್ ಷಹಜಹಾನ್‍ನನ್ನು (Shahjahan) ಪ್ರತಿನಿಧಿಸುವ ವಕೀಲರು ಹೈಕೋರ್ಟ್‍ನಿಂದ ಕಠಿಣ ವಾಗ್ದಂಡನೆಗೆ ಗುರಿಯಾದರು.
ಜ.5 ರಂದು ಪಡಿತರ ಹಗರಣ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸಂದೇಶ್‍ಖಾಲಿಯಲ್ಲಿರುವ ಶೇಖ್ ಷಹಜಹಾನ್‍ನ ಮನೆಗೆ ಇಡಿ ಅಧಿಕಾರಿಗಳು ತೆರಳಿದ್ದರು. ಈ ವೇಳೆ ಜನರ ಗುಂಪು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿತ್ತು. ಇದಾದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಬಳಿಕ ಹೈಕೋರ್ಟ್ ಸರ್ಕಾರಕ್ಕೆ ಚಾಟಿ ಬೀಸಿದ ಮೇಲೆ, ತಲೆಮರೆಸಿಕೊಂಡ 55 ದಿನಗಳ ಬಳಿಕ ಫೆ.29 ರಂದು ಆತನನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ನಾನೇನು ತಪ್ಪು ಮಾಡಿಲ್ಲ, 10 ತಿಂಗ್ಳು ಅಜ್ಞಾತವಾಸ ಅನುಭವಿಸಿದ್ದೇನೆ: ಸುಧಾಕರ್ ಕಣ್ಣೀರು