ಧಾರವಾಡ: ಹಿರಿಯ ಸಾಹಿತಿ ಡಾ. ಎಂಎಂ ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ 6 ಆರೋಪಿಗಳ ಪೈಕಿ ಐವರನ್ನು ಗುರುವಾರ ಧಾರವಾಡ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಿ, ಸಾಕ್ಷಿ ವಿಚಾರಣೆ ನಡೆಸಲಾಯಿತು.
2015ರ ಆಗಸ್ಟ್ 30ರಂದು ಬೆಳಗಿನ ಜಾವ ಕಲಬುರ್ಗಿ ಧಾರವಾಡದ ಕಲ್ಯಾಣನಗರದಲ್ಲಿರುವ ತಮ್ಮ ಮನೆಯಲ್ಲಿ ಕುಳಿತಿದ್ದಾಗ, ಮನೆಗೆ ಬಂದ ಹಂತಕರು ಬಾಗಿಲು ಬಡಿದಿದ್ದರು. ಈ ವೇಳೆ ಹೊರಗೆ ಬಂದು ಬಾಗಿಲು ತೆಗೆಯುತ್ತಿದ್ದಂತೆಯೇ ಕಲಬುರ್ಗಿ ತಲೆಗೆ ಗುಂಡು ಹೊಡೆದು ಆರೋಪಿಗಳು ಬೈಕ್ ಹತ್ತಿ ಪರಾರಿಯಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ಆರೋಪಿಗಳಾದ ಹುಬ್ಬಳ್ಳಿಯ ಅಮಿತ್ ಬದ್ದಿ, ಗಣೇಶ ಮಿಸ್ಕಿನ್, ಬೆಳಗಾವಿಯ ಪ್ರವೀಣ್ ಚತುರ್ ಹಾಗೂ ವಾಸುದೇವ್ ಸೂರ್ಯವಂಶಿ ಸೇರಿದಂತೆ ಇನ್ನೊರ್ವನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇದನ್ನೂ ಓದಿ: ಜೇಮ್ಸ್ ರಿಲೀಸ್ ಬಳಿಕ ಅಪ್ಪು ನೆನೆದು ಕಣ್ಣೀರಿಟ್ಟ ಶಿವಣ್ಣ
ಕಣ್ಣೀರು ಹಾಕುತ್ತಾ ಸಾಕ್ಷ್ಯ ನುಡಿದ ಕಲಬುರ್ಗಿ ಪುತ್ರಿ:
ಈ ವೇಳೆ ಪ್ರಕರಣದಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಯಾಗಿರುವ ಹಾಗೂ ಹತ್ಯೆ ನಡೆದ ದಿನ ಅಂದು ಮನೆಯಲ್ಲಿದ್ದ ಕಲಬುರ್ಗಿ ಪುತ್ರಿ ರೂಪದರ್ಶಿಗೆ ಆರೋಪಿಗಳನ್ನು ಗುರುತಿಸುವಂತೆ ಸೂಚಿಸಲಾಯಿತು. ಇದಕ್ಕೂ ಮೊದಲು ಅಂದು ನಡೆದ ಘಟನೆಯನ್ನು ನ್ಯಾಯಾಧೀಶರ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟ ಕಲಬುರ್ಗಿ ಪುತ್ರಿ ತಂದೆಯನ್ನು ನೆನೆದು ನ್ಯಾಯಾಧೀಶರ ಎದುರು ಕಣ್ಣೀರು ಹಾಕಿದರು.
ಅಂದು ಗುಂಡು ಹೊಡೆದು ಪರಾರಿಯಾಗಿದ್ದ ಗಣೇಶ ಮಿಸ್ಕಿನ್‌ನನ್ನು ಗುರುತಿಸುವ ವೇಳೆ ರೂಪದರ್ಶಿ ಕಣ್ಣೀರು ಹಾಕಿ ಬಳಿಕ ಆಕ್ರೋಶದಿಂದ ಇವನೇ ಗುಂಡು ಹೊಡೆದಿದ್ದು ಎಂದು ಹೇಳಿದರು. ಹೊರಗಡೆ ರಸ್ತೆಯಲ್ಲಿ ಬೈಕ್ ಮೇಲೆ ನಿಂತಿದ್ದ ಮತ್ತೋರ್ವ ಆರೋಪಿ ಪ್ರವೀಣ್ ಚತುರ್‌ನನ್ನು ಕೂಡಾ ರೂಪದರ್ಶಿ ಗುರುತಿಸಿದರು.
ಈ ವಿಚಾರದ ಕುರಿತು ಸಮಗ್ರವಾದ ವಾದ-ವಿವಾದ ನಡೆದ ಬಳಿಕ ಕಲಬುರ್ಗಿ ಪತ್ನಿ ಉಮಾದೇವಿಯ ಸಾಕ್ಷ್ಯದ ವಿಚಾರಣೆಯನ್ನೂ ನಡೆಸಲಾಯಿತು. ಈ ವೇಳೆ ಸಾಕ್ಷಿಗಳನ್ನು ಏಕಕಾಲಕ್ಕೆ ಕ್ರಾಸ್ ಮಾಡಲು ತಮಗೆ ಸಿಆರ್‌ಪಿಸಿ 231 ಸೆಕ್ಷನ್ ಅಡಿಯಲ್ಲಿ ಅನುವು ಮಾಡಿಕೊಡುವಂತೆ ಆರೋಪಿಗಳ ಪರ ವಕೀಲ ಅರ್ಜಿ ಸಲ್ಲಿಸಿದರು. ಇದನ್ನೂ ಓದಿ: ಕಾಶ್ಮೀರಿ ಪಂಡಿತರಿಗೆ ಅನ್ಯಾಯವಾಗಿದೆ ಅದನ್ನು ಸರಿಪಡಿಸಿ ಪರಿಹಾರ ನೀಡಿ ಅದು ಬಿಟ್ಟು ಪ್ರಚೋದನೆ ಮಾಡಬೇಡಿ: ಖರ್ಗೆ
ವಿಚಾರಣೆಯಲ್ಲಿ ಕಲಬುರ್ಗಿ ಕೊಲೆ ನಡೆದ ಸಮಯದಲ್ಲಿ ಅವರು ಧರಿಸಿದ್ದ ಶರ್ಟ್, ಬನಿಯನ್, ಪ್ಯಾಂಟ್, ಗುಂಡುಗಡಿಗೆ ಸೇರಿದಂತೆ ಅಂದಿನ ಕೆಲವೊಂದು ವಸ್ತುಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಬಳಿಕ ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಅಭಿಪ್ರಾಯಟ್ಟ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು, ವಿಚಾರಣೆಯನ್ನು ಏಪ್ರಿಲ್ 5ಕ್ಕೆ ಮುಂದೂಡಿದರು.