ಚಿಕ್ಕಮಗಳೂರು: ಉದ್ಯಮಿ ವಿಜಿ ಸಿದ್ಧಾರ್ಥ್ ಹೆಗ್ಡೆ ಅವರ ಅಂತ್ಯಸಂಸ್ಕಾರವು ಸ್ವಗ್ರಾಮ ಬೇಲೂರಿನ ಚಿಕ್ಕನಹಳ್ಳಿಯ ಚೇತನಹಳ್ಳಿ ಎಸ್ಟೇಟ್ ನಿವಾಸದ ಬಳಿ ಸಾವಿರಾರು ಜನರ ಕಣ್ಣೀರಧಾರೆ ನಡುವೆ ಒಕ್ಕಲಿಗ ಸಂಪ್ರದಾಯದಂತೆ ನೆರವೇರಿತು.
ವಿಜಿ ಸಿದ್ಧಾರ್ಥ ಅವರ ಚಿತೆಗೆ ಹಿರಿಯ ಪುತ್ರ ಅಮರ್ತ್ಯ ಅಂತಿಮ ವಿಧಿವಿಧಾನ ನಡೆಸಿ ಪೂಜೆ ನಡೆಸಿದರು. ಬಳಿಕ ಪುತ್ರರಾದ ಅಮರ್ತ್ಯ ಮತ್ತು ಕಿರಿಯ ಪುತ್ರ ಇಶಾನ್ ಅಗ್ನಿ ಸ್ಪರ್ಶ ನೇರವೇರಿಸಿದರು. ಹಲಸು, ಶ್ರೀಗಂಧ, ಮಾವು, ಆಲದ ಮರದಿಂದ ಸಿದ್ಧಪಡಿಸಿರುವ ಚಿತೆಯಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು.
Advertisement
Advertisement
ಕಾಫಿ ಡೇ ಮಾಲೀಕ, ಉದ್ಯಮಿ ಸಿದ್ದಾರ್ಥ್ ಮೂರು ದಿನಗಳ ಹಿಂದೆ ಇಳಿ ಸಂಜೆ ನೇತ್ರಾವತಿ ಸೇತುವೆ ಮೇಲಿನಿಂದ ಕಣ್ಮರೆಯಾಗಿದ್ದರು. ಅವರಿಗಾಗಿ ನಿರಂತರವಾಗಿ ಮೂರು ದಿನ ಹುಡುಕಾಟ ನಡೆಸಲಾಗಿತ್ತು. ಸಿದ್ಧಾರ್ಥ್ ಅವರು ಹೊಯಿಗೆ ಬಜಾರಿನ ಅಳಿವೆ ಬಾಗಿಲಿನಲ್ಲಿ ಇಂದು ಬೆಳಗ್ಗೆ 6.30ಕ್ಕೆ ಶವದ ರೂಪದಲ್ಲಿ ಪತ್ತೆಯಾದರು. ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಕಣ್ಣಿಗೆ ಸಿದ್ದಾರ್ಥ್ ಮೃತದೇಹ ಕಂಡಿತ್ತು. ಮಾಹಿತಿ ಗೊತ್ತಾದ ಕೂಡಲೇ ಕುಟುಂಬಸ್ಥರು, ಆಪ್ತರು, ಕಾಫಿಡೇ ಕುಟುಂಬದ ಆಕ್ರಂದನ ಮುಗಿಲುಮುಟ್ಟಿತ್ತು.
Advertisement
Advertisement
ಮಧ್ಯಾಹ್ನ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಯಿಂದ ವಿಶೇಷ ಅಂಬುಲೆನ್ಸ್‍ನಲ್ಲಿ ಚಿಕ್ಕಮಗಳೂರು ನಗರದ ಎಬಿಸಿ ಕಾಫಿ ಕ್ಯೂರಿಂಗ್ ಅವರಣಕ್ಕೆ ತರಲಾಯಿತು. ಅಳಿಯ ಪಾರ್ಥಿವ ಶರೀರ ನೋಡಿದ ಹಿರಿಯ ಜೀವ ಎಸ್.ಎಂ.ಕೃಷ್ಣ ಮನಸ್ಸು ಭಾರವಾಗಿತ್ತು. ಕಪ್ಪು ಕನ್ನಡಕ ಅವರ ದುಃಖವನ್ನು ಮರೆ ಮಾಚಿತ್ತು. ಎಸ್‍ಎಂ ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ, ಸಿದ್ದಾರ್ಥ್ ಧರ್ಮಪತ್ನಿ ಮಾಳವಿಕಾ, ತಾಯಿ ವಸಂತಿ ಕಣ್ಣಾಲಿಗಳು ತುಂಬಿಬಂದಿದ್ದವು. ಎಲ್ಲರ ದುಃಖದ ಕಟ್ಟೆ ಒಡೆದಿತ್ತು. ಮಕ್ಕಳಾದ ಅಮಥ್ಯ ಮತ್ತು ಇಶಾನ್‍ರ ಕಣ್ಣೀರ ಕೋಡಿ ನಿಲ್ಲಲೇ ಇಲ್ಲ. ಆದರೆ ಮೈಸೂರಿನ ಆಸ್ಪತ್ರೆಯೊಂದರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪ್ಪ ಗಂಗಯ್ಯ ಹೆಗ್ಡೆ ಅವರಿಗೆ ಪುತ್ರನ ಮುಖವನ್ನು ಕೊನೆಯದಾಗಿ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿಲ್ಲ.
ಎಬಿಸಿ ಕಾಫಿ ಕ್ಯೂರಿಂಗ್ ಅವರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಡಿ.ಕೆ.ಶಿವಕುಮಾರ್ ಸೇರಿದಂತೆ ನೂರಾರು ರಾಜಕಾರಣಿಗಳು, ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದ ಅಭಿಮಾನಿಗಳು, ಕಾರ್ಮಿಕರು ಅಂತಿಮ ದರ್ಶನ ಪಡೆದರು. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಿದ್ಧಾರ್ಥ್ ಅವರನ್ನು ನೆನೆದು ಕಣ್ಣೀರಿಟ್ಟರು.
ಕಾಫಿ ನಾಡು ಚಿಕ್ಕಮಗಳೂರಿಗೂ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರಿಗೂ ಅವಿನಾಭಾವ ಸಂಬಂಧ. ಚಿಕ್ಕಮಗಳೂರಿನ ಬಹುತೇಕರು ಒಂದಲ್ಲ ಒಂದು ರೀತಿ, ಒಂದಲ್ಲ ಒಂದು ಕ್ಷಣದಲ್ಲಿ ಸಿದ್ಧಾರ್ಥ್ ಅವರಿಂದ ನೆರವು ಪಡೆದವರೇ. ಹೀಗಾಗಿ ಮಂಗಳೂರಿನಿಂದ ಚಿಕ್ಕಮಗಳೂರಿಗೆ ಸಿದ್ಧಾರ್ಥ್ ಪಾರ್ಥಿವ ಶರೀರವನ್ನು ತರುವ ಮಾರ್ಗದುದ್ದಕ್ಕೂ ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚಿ ಸಂತಾಪ ಸೂಚಿಸಿದರು. ಮಲೆನಾಡ ಹೆಬ್ಬಾಗಿಲು ಕೊಟ್ಟಿಗೆಹಾರ, ಬಣಕಲ್‍ನಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣ ಆಗಿತ್ತು. ಪಾರ್ಥಿವ ಶರೀರ ಬರುವಿಕೆಗಾಗಿ ಮಾರ್ಗದುದ್ದಕ್ಕೂ ಕಾದು ನಿಂತ ಸಾವಿರಾರು ಜನ, ವಾಹನ ನಿಲ್ಲಿಸಿ ಅಂತಿಮ ದರ್ಶನ ಪಡೆದರು. ಚಿಕ್ಕಮಗಳೂರು, ಹಾಸನ, ಮಡಿಕೇರಿ ಜಿಲ್ಲೆಯ ಕಾಫಿ ಕಾರ್ಮಿಕರಿಗೆ ರಜೆ ಘೋಷಿಸಲಾಗಿತ್ತು. ಕಾಫಿ ಕೆಲಸ ಸಂಪೂರ್ಣ ಸ್ತಬ್ಧವಾಗಿತ್ತು.
ಸಿದ್ಧಾರ್ಥ್ ಅಕಾಲಿಕ ಅಗಲಿಕೆಗೆ ರಾಜಕೀಯ ಗಣ್ಯರು, ಸ್ವಾಮೀಜಿಗಳು, ಆಪ್ತರ ಉದ್ಯಮಿಗಳು ಕಂಬನಿ ಮಿಡಿದಿದ್ದಾರೆ. ಸಿದ್ದಾರ್ಥ್ ಬದುಕಿನ ವಿಚಾರದಲ್ಲಿ ದುಡುಕಿದ್ದಾರೆ. ಭಗವಂತ ಎಸ್‍ಎಂ ಕೃಷ್ಣ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು, ಸಿದ್ದಾರ್ಥ್ ನಿಧನವನ್ನ ಅರಗಿಸಿಕೊಳ್ಳಲು ಆಗ್ತಿಲ್ಲ. ಇದು ದೇಶಕ್ಕೆ ದೊಡ್ಡ ನಷ್ಟ. ಸಾವಿರಾರು ಜನಕ್ಕೆ ಸ್ವಾಭಿಮಾನದಿಂದ ಬದುಕಲು ದಾರಿ ಮಾಡಿಕೊಟ್ಟಿದ್ದ ನಂದಾದೀಪ ಆರಿ ಹೋಗಿದೆ ಅಂತ ಸಂತಾಪ ಸೂಚಿಸಿದ್ದಾರೆ. ಅವರ ಈ ದಾರುಣ ಸಾವಿಗೆ ಸರ್ಕಾರ ಸೂಕ್ತ ತನಿಖೆ ನಡೆಸಲಿ ಎಂದು ಆಗ್ರಹಿಸಿದ್ದಾರೆ.
ಡಿಕೆ ಶಿವಕುಮಾರ್ ಮಾತನಾಡಿ, ಸಿದ್ಧಾರ್ಥ್ ನಮ್ಮ ರಾಜ್ಯದ ಆಸ್ತಿ. ಇಷ್ಟೊಂದು ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿ ಮಾಡಿದ್ದರು. ಆದಾಯ ತೆರಿಗೆ ಇಲಾಖೆ ಏನ್ ಬೇಕಾದರೂ ಮಾತಾಡಿಕೊಳ್ಳಲಿ. ಎಲ್ಲವನ್ನೂ ದೇವರೇ ನೋಡಿಕೊಳ್ಳುತ್ತಾನೆ ಎಂದು ಮಾರ್ಮಿಕವಾಗಿ ನುಡಿದರು.
ಖುದ್ದು ಸ್ಥಳದಲ್ಲಿ ಬೀಡುಬಿಟ್ಟು ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದ ಮಾಜಿ ಸಚಿವ ಯು.ಟಿ ಖಾದರ್, ಸಂತಾಪ ಸೂಚಿಸಿದರು. ಶವ ಪತ್ತೆಯಾದ ರೀತಿಯನ್ನು ವಿವರಿಸಿದರು. ನೀರಿನ ಸೆಳೆತ, ವೇಗಕ್ಕೆ ಸಿದ್ಧಾರ್ಥ್ ಧರಿಸಿದ್ದ ಟೀ ಶರ್ಟ್ ಬಿಚ್ಚಿ ಹೋಗಿದೆ. ಸಿದ್ಧಾರ್ಥ್ ಪ್ಯಾಂಟಿನಲ್ಲಿ ಮೊಬೈಲ್, ಕರ್ಚಿಫ್ ಸಿಕ್ಕಿದೆ. ಕೈಯಲ್ಲಿ ಉಂಗುರ, ಡಿಜಿಟಲ್ ವ್ಹಾಚ್ ಇದೆ ಎಂದು ತಿಳಿಸಿದರು. ಶೃಂಗೇರಿ ಶಾಸಕ ರಾಜೇಗೌಡರರು ಆಪ್ತ ಮಿತ್ರ ಸಿದ್ಧಾರ್ಥ್ ಅವರನ್ನು ನೆನೆದು ಕಂಬನಿ ಮಿಡಿದರು.
https://www.youtube.com/watch?v=zudpwA7rBm4