Connect with us

Bengaluru City

ಕೆಫೆ ಕಾಫಿ ಡೇ ಮಾಲೀಕ, ಎಸ್‍ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ನಾಪತ್ತೆ

Published

on

ಮಂಗಳೂರು/ಬೆಂಗಳೂರು: ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅಳಿಯ, ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ್ ನಿನ್ನೆ ರಾತ್ರಿಯಿಂದ ದಿಢೀರ್ ಆಗಿ ಮಂಗಳೂರಿನ ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾಗಿದ್ದಾರೆ. ನೇತ್ರಾವತಿ ನದಿಗೆ ಹಾರಿರಬಹುದು ಎಂಬ ಶಂಕೆಯಲ್ಲಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಘಟನೆಯ ವಿವರ: ವ್ಯವಹಾರ ನಿಮಿತ್ತ ಸಿದ್ಧಾರ್ಥ್ ಅವರು ತಮ್ಮ ಕಾರಿನಲ್ಲಿ ಚಿಕ್ಕಮಗಳೂರಿಗೆ ತೆರಳಿದ್ದರು. ಅಲ್ಲಿಂದ ಮಂಗಳೂರಿಗೆ ಹೋಗಿದ್ದರು. ಕೇರಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಜಪ್ಪಿನಮೊಗರು ಎಂಬಲ್ಲಿ ನೇತ್ರಾವತಿ ಸೇತುವೆ ಇದ್ದು, ಇಲ್ಲಿಗೆ ತಲುಪುತ್ತಿದ್ದಂತೆ ಕಾರನ್ನು ನಿಲ್ಲಿಸಲು ಚಾಲಕನಿಗೆ ಹೇಳಿದ್ದಾರೆ. ಬಳಿಕ ಕಾರಿನಿಂದ ಇಳಿದು ಅವರು ಫೋನ್‍ನಲ್ಲಿ ಮಾತನಾಡುತ್ತಾ ಹೋಗಿದ್ದಾರೆ. ಆದರೆ ಅರ್ಧ ಗಂಟೆಯಾದರೂ ಸಿದ್ಧಾರ್ಥ್ ಅವರು ವಾಪಸ್ ಬರದೇ ಇದ್ದುದನ್ನು ಕಂಡು ಗಾಬರಿಯಾದ ಚಾಲಕ ಅವರಿಗೆ ಫೋನ್ ಮಾಡಿದ್ದಾನೆ. ಈ ವೇಳೆ ಅವರ ಫೋನ್ ಸ್ವಿಚ್ಡ್ ಆಫ್ ಆಗಿದ್ದು ಗಮನಕ್ಕೆ ಬಂದಿದೆ.

ಕಾರು ಚಾಲಕ ತಕ್ಷಣ ಈ ವಿಚಾರವನ್ನು ಸಿದ್ಧಾರ್ಥ್ ಮನೆಯವರಿಗೆ ತಿಳಿಸಿದ್ದಾರೆ. ಸಿದ್ಧಾರ್ಥ್ ಅವರು ಕಾರಿನಿಂದ ಇಳಿದ ಜಪ್ಪಿನ ಮೊಗರು ಪ್ರದೇಶ ನೇತ್ರಾವತಿ ನದಿ ತಟದಲ್ಲೇ ಇರುವುದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ. ಕಾರು ಚಾಲಕನಿಂದ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸಿದ್ಧಾರ್ಥ್ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

ಇತ್ತ ಬೆಂಗಳೂರಿನಲ್ಲಿರುವ ಎಸ್.ಎಂ.ಕೃಷ್ಣ ಅವರ ಮನೆಯಲ್ಲಿ ಆತಂಕ ಮನೆ ಮಾಡಿದೆ. ಈ ಘಟನೆಯ ಬಗ್ಗೆ ಎಸ್.ಎಂ.ಕೃಷ್ಣ ಅವರ ನಿವಾಸದ ಬಳಿ ಮಾತನಾಡಿದ ಕಾಂಗ್ರೆಸ್ ಮುಖಂಡ ಬಿಎಲ್ ಶಂಕರ್, ಕಾಫಿ ಡೇ ಉದ್ಯಮದ ಮಾಲೀಕರಾಗಿರುವ ಸಿದ್ಧಾರ್ಥ್ ಪ್ರಯಾಣ ಮಾಡುವ ವೇಳೆ ನಾಪತ್ತೆಯಾಗಿದ್ದಾರೆ. ಮಂಗಳೂರಿನ ಉಳ್ಳಾಲ ಸಮೀಪದಿಂದ ನಿನ್ನೆ ಸಂಜೆ 6 ಗಂಟೆಯಿಂದ ನಾಪತ್ತೆಯಾಗಿದ್ದಾರೆ. ಸ್ಥಳೀಯ ಪೊಲೀಸರು ಹಾಗೂ ಶಾಸಕ ಯು.ಟಿ.ಖಾದರ್ ಅವರೂ ಹುಡುಕಾಟದಲ್ಲಿ ತೊಡಗಿದ್ದಾರೆ. ನಾಪತ್ತೆಗೂ ಮೊದಲು ಅವರು ಯಾರ ಜೊತೆ ಮಾತನಾಡಿದರು ಎಂಬುದು ತಿಳಿದಿಲ್ಲ. ಅವರ ಕಚೇರಿ ತೆರೆದ ಬಳಿಕ ಏನಾದರೂ ಮಾಹಿತಿ ಸಿಗಬಹುದು. ಯಾವುದೇ ತೊಂದರೆ ಆಗದೇ ವಾಪಸ್ ಸಿಗಲಿ ಎಂಬ ನಿರೀಕ್ಷೆಯಲ್ಲಿ ನಾವೆಲ್ಲರೂ ಇದ್ದೇವೆ ಎಂದರು.

ಸಿದ್ಧಾರ್ಥ್ ನಮ್ಮ ಊರಿನವರು ಹಾಗೂ ದೊಡ್ಡ ಉದ್ಯಮಿ. ಅವರ ಕುಟುಂಬ ಆತಂಕದಲ್ಲಿದೆ. ಹಾಗಾಗಿ ನಾವು ನೋಡಲು ಬಂದಿದ್ದೇವೆ. ಯಾವುದೇ ಸಮಸ್ಯೆ ಬಂದರೂ ಅವರು ಎದುರಿಸುತ್ತಿದ್ದರು. ಪ್ರಕರಣ ತನಿಖಾ ಹಂತದಲ್ಲಿದ್ದು ತನಿಖೆ ಬಳಿಕ ಎಲ್ಲವೂ ವಿವರವಾಗಿ ತಿಳಿಯಲಿದೆ ಎಂದರು.

ಸಿದ್ಧಾರ್ಥ್ ಯಾರು?: ದೇಶ ವಿದೇಶಗಳಲ್ಲಿ ಕೆಫೆ ಕಾಫಿ ಡೇ ಸ್ಥಾಪಿಸಿ ಪ್ರಖ್ಯಾತರಾದವರು. ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರ ಪುತ್ರಿಯನ್ನು ವಿವಾಹವಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ 12 ಸಾವಿರ ಎಕರೆ ಕಾಫಿ ಎಸ್ಟೇಟ್ ಹೊಂದಿದ್ದಾರೆ. ಮಂಗಳೂರಿನ ಸಾಫ್ಟ್‌ವೇರ್ ಕಂಪೆನಿಗಳಿಗೆ ಹೂಡಿಕೆ ಮಾಡಿದ್ದಾರೆ. ಷೇರು ಮಾರುಕಟ್ಟೆ ವ್ಯವಹಾರದಲ್ಲೂ ತೊಡಗಿಸಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *