ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸಿದ್ಧಾರ್ಥ್ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್ ಆಗಿದ್ದು, ಈ ಪತ್ರವನ್ನು ಕೆಫೆ ಕಾಫಿ ಡೇ(ಸಿಸಿಡಿ) ಗಂಭೀರವಾಗಿ ಪರಿಗಣಿಸಿದ್ದು ತನಿಖೆ ನಡೆಸಲು ನಿರ್ಧರಿಸಿದೆ.
ಸಿದ್ಧಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಕಚೇರಿಯಲ್ಲಿ ಆಡಳಿತ ಮಂಡಳಿಯ ಸಭೆ ನಡೆಯಿತು.ಈ ಸಭೆಯಲ್ಲಿ ಸಿದ್ಧಾರ್ಥ್ ಅವರ ಹೆಸರಿನಲ್ಲಿ ಹರಿದಾಡುತ್ತಿರುವ ಪತ್ರದ ಬಗ್ಗೆ ಚರ್ಚೆ ನಡೆದಿದೆ.
ಹಣಕಾಸು ವ್ಯವಹಾರ, ಲೆಕ್ಕ ಪರಿಶೋಧನೆ ಕಂಪನಿ ಇತರೇ ವಿಚಾರಗಳನ್ನು ತಿಳಿಸುವ ಪತ್ರದ ಸತ್ಯಾಸತ್ಯತೆ ಪರಿಶೀಲಿಸಿಲ್ಲ. ಸಿದ್ಧಾರ್ಥ್ ಅವರ ವೈಯಕ್ತಿಕ ಮಾಹಿತಿಗಳು ಇರುವ ಹಿನ್ನೆಲೆಯಲ್ಲಿ ಈ ಪತ್ರವನ್ನು ಗಂಭೀರವಾಗಿ ಸ್ವೀಕರಿಸಿದ್ದು ಕೂಲಂಕಷವಾಗಿ ತನಿಖೆ ಮಾಡಲು ನಿರ್ಧರಿಸಿದೆ ಎಂದು ಕಂಪನಿ ತಿಳಿಸಿದೆ.
ಇಂದಿನ ಸಭೆಯಲ್ಲಿ ಎಸ್‍ವಿ ರಂಗನಾಥ್(ಕಾರ್ಯನಿರ್ವಾಹಕೇತರ ಸ್ವತಂತ್ರ ನಿರ್ದೇಶಕ) ಅವರನ್ನು ಕಂಪನಿಯ ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು, ನಿತಿನ್ ಬಾಗ್ಮನೆ ಅವರನ್ನು ಹಂಗಾಮಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಇದೇ ವೇಳೆ ಕಾನೂನು ಸಲಹೆಗಾರರನ್ನಾಗಿ ಸಿರಿಲ್ ಅಮರಚಂದ್ ಮಂಗ್ಲದಾಸ್ ಅವರನ್ನು ನೇಮಿಸಲಾಗಿದೆ. ಮುಂದಿನ ಸಭೆಯನ್ನು ಆಗಸ್ಟ್ 8 ರಂದು ನಡೆಸಲು ತೀರ್ಮಾನಿಸಲಾಗಿದೆ.