ನವದೆಹಲಿ: ಸಚಿವ ಅರುಣ್ ಜೇಟ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದ ಹಿನ್ನೆಲೆಯಲ್ಲಿ ಪಿಯೂಷ್ ಗೋಯಲ್ ಅವರಿಗೆ ಹೆಚ್ಚುವರಿಯಾಗಿ ಹಣಕಾಸು ಸಚಿವಾಲಯದ ಹೊಣೆಯನ್ನು ನೀಡಲಾಗಿದೆ.
ದೆಹಲಿಯ ಏಮ್ಸ್ ನಲ್ಲಿ 65 ವರ್ಷದ ಅರುಣ್ ಜೇಟ್ಲಿ ಅವರಿಗೆ ಯಶಸ್ವಿಯಾಗಿ ಇಂದು ಶಸ್ತ್ರ ಚಿಕಿತ್ಸೆ ನಡೆದಿತ್ತು. ಮೂತ್ರಪಿಂಡ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಜೇಟ್ಲಿ ಅವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಏಮ್ಸ್ ಆಸ್ಪತ್ರೆ ತಿಳಿಸಿದೆ.
Advertisement
ಕಳೆದ ಒಂದು ತಿಂಗಳಿನಿಂದ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದ ಜೇಟ್ಲಿ ಕಳೆದ ಶನಿವಾರ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಿಂದೆ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ 2014ರ ಸೆಪ್ಟೆಂಬರ್ ನಲ್ಲಿ ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ನಡೆದಿತ್ತು.
Advertisement
ಪ್ರಸ್ತುತ ಪಿಯೂಷ್ ಗೋಯಲ್ ರೈಲ್ವೇ ಮತ್ತು ಕಲ್ಲಿದ್ದಲು ಇಲಾಖೆಯನ್ನು ನೋಡಿಕೊಳ್ಳುತ್ತಿದ್ದು, ಈಗ ಜೇಟ್ಲಿ ಚೇತರಿಸಿಗೊಳ್ಳುವವರೆಗೂ ಹಣಕಾಸು ಸಚಿವಾಲಯವನ್ನು ನೋಡಿಕೊಳ್ಳಲಿದ್ದಾರೆ.
Advertisement
ಸ್ಮೃತಿ ಇರಾನಿ ಹೊಂದಿದ್ದ ಪ್ರಸಾರ ಖಾತೆಯನ್ನು ಕ್ರೀಡಾ ಸಚಿವರಾಗಿದ್ದ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಸ್ಮೃತಿ ಇರಾನಿ ಜವಳಿ ಖಾತೆಯಲ್ಲಿ ಮುಂದುವರಿಯಲಿದ್ದಾರೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆಯನ್ನು ನೋಡಿಕೊಳ್ಳುತ್ತಿದ್ದ ಎಸ್.ಎಸ್ ಅಹ್ಲುವಾಲಿಯ ಅವರಿಗೆ ಹೆಚ್ಚುವರಿಯಾಗಿ ಎಲೆಕ್ಟ್ರಾನಿಕ್ಸ್ ಖಾತೆಯನ್ನು ನೀಡಲಾಗಿದೆ.