ಬೆಂಗಳೂರು: ಬರಗಾಲ ಕುರಿತು ಕರೆದಿದ್ದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಸಿಎಂ ದೋಸ್ತಿ ನಾಯಕರ ನಡೆಯ ಬಗ್ಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಹಾಗೂ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರ ಅಸಹಕಾರ ವಿಷಯಗಳ ಕುರಿತು ಬಿಸಿ ಬಿಸಿ ಚರ್ಚೆ ನಡೆದಿದೆ. ಮತ್ತೊಮ್ಮೆ ಸಿದ್ದರಾಮಯ್ಯ ಸಿಎಂ ಹೇಳಿಕೆಗಳನ್ನು ಕೊಡುತ್ತಿರುವ ಕಾಂಗ್ರೆಸ್ ಸಚಿವರು, ಶಾಸಕರ ವಿರುದ್ಧ ಸಿಎಂ ಕುಮಾರಸ್ವಾಮಿ ಗರಂ ಆಗಿದ್ದರು ಎಂಬ ಮಾಹಿತಿ ಲಭಿಸಿದೆ.
ಮೈತ್ರಿ ಧರ್ಮದಂತೆ ಐದು ವರ್ಷ ಸಿಎಂ ಬದಲಾವಣೆ ಇಲ್ಲ. ಕಾಂಗ್ರೆಸ್ ನಾಯಕರು ವರಿಷ್ಠರ ನಿರ್ಧಾರಕ್ಕೆ ಸೆಡ್ಡು ಹೊಡೆದು ಸಿದ್ದರಾಮಯ್ಯ ಸಿಎಂ ಆಗಲಿ ಅಂತಿರೋದು ಎಷ್ಟು ಸರಿ ಎಂದು ಕುಮಾರಸ್ವಾಮಿ ತೀವ್ರವಾಗಿ ಬೇಸರ ವ್ಯಕ್ತಪಡಿಸಿದ್ದಾರಂತೆ. ಸರ್ಕಾರಕ್ಕೆ ಡ್ಯಾಮೇಜ್ ಆಗುವ ಹೇಳಿಕೆಗಳನ್ನು ನಿಲ್ಲಿಸುವಂತೆ ನಿಮ್ಮವರಿಗೆ ತಾಕೀತು ಮಾಡಿ ಎಂದು ಡಿಸಿಎಂ ಪರಮೇಶ್ವರ್ ಗೆ ಸಿಎಂ ಸಿಟ್ಟಿನಲ್ಲೇ ಸೂಚಿಸಿದರು ಎಂದು ತಿಳಿದು ಬಂದಿದೆ.
ಮಂಡ್ಯ, ತುಮಕೂರುಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಪರ ಕೆಲಸ ಮಾಡದ ಸ್ಥಳೀಯ ಕೈಮುಖಂಡರ ವಿರುದ್ಧವೂ ಸಿಎಂ ಸಂಪುಟ ಸಭೆಯಲ್ಲಿ ಕಿಡಿಕಾರಿದ್ದಾರಂತೆ. ಮಂಡ್ಯದಲ್ಲಿ ರೆಬೆಲ್ ಕಾಂಗ್ರೆಸ್ ಮುಖಂಡರ ವಿರುದ್ಧ ಖುದ್ದು ವೇಣುಗೋಪಾಲ್ ಅವರಿಗೇ ದೂರು ಕೊಟ್ರೂ ಪ್ರಯೋಜನ ಆಗಿಲ್ಲ. ಮಂಡ್ಯ ವಿಚಾರವನ್ನು ಸಿಎಂ ಎತ್ತುತ್ತಿದ್ದ ಹಾಗೆ ಕಾಂಗ್ರೆಸ್ ಸಚಿವರು ಮೌನಕ್ಕೆ ಜಾರಿದರು. ಪರಮೇಶ್ವರ್ ಅವರು ತುಮಕೂರು ವಿಚಾರದಲ್ಲಿ ಸಮರ್ಥನೆ ಮಾಡ್ಕೊಂಡಿದ್ದು ಬಿಟ್ಟರೆ ಉಳಿದ ಯಾವುದೇ ವಿಚಾರಕ್ಕೂ ಯಾವ ನಾಯಕರು ಸಮರ್ಥನೆಗೆ ಮುಂದಾಗಿಲ್ಲ ಎನ್ನಲಾಗಿದೆ.