– ಜುಲೈ 12ರಿಂದ ಅಧಿವೇಶನ ಆರಂಭ
– ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ
– ಜುಲೈ ಎರಡನೇ ವಾರ ಮೋಡ ಬಿತ್ತನೆಗೆ ಸಿದ್ಧತೆ
ಬೆಂಗಳೂರು: ಮಳೆಗಾಲದ ಅಧಿವೇಶನ ಜುಲೈ 12 ರಿಂದ 26 ವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಅಧಿವೇಶನದ ದಿನಾಂಕವನ್ನು ಅಂತಿಮಗೊಳಿಸಲಾಗಿದೆ.
ಅಧಿವೇಶನ ಅಷ್ಟೇ ಅಲ್ಲದೆ ಹಲವು ಮಹತ್ವದ ವಿಚಾರಗಳಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಕಳೆದ ಎರಡು ವರ್ಷಗಳಿಂದ ನಡೆಸಲಾಗುತ್ತಿದ್ದ ಬೆಳೆ ಸಮೀಕ್ಷೆಯನ್ನು ಈ ಬಾರಿ ಅತ್ಯಾಧುನಿಕವಾಗಿ ನಡೆಸಲು ಸಂಪುಟ ಒಪ್ಪಿಗೆ ನೀಡಿದೆ. ರಾಜ್ಯದಲ್ಲಿ 2 ಕೋಟಿ 20 ತಾಕುಗಳಿವೆ. ಈ ತಾಕುಗಳಲ್ಲಿ ಯಾವ ಬೆಳೆ ಬೆಳೆಯಲಾಗಿದೆ ನೆನ್ನುವ ಸಮೀಕ್ಷೆ ಮಾಡಲಾಗುತ್ತದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
Advertisement
Advertisement
ಈ ಬಾರಿ ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆಗೆ ನಿರ್ಧಾರವನ್ನು ಸರ್ಕಾರ ನಿರ್ಧಾರ ಕೈಗೊಂಡಿದೆ. ಅಷ್ಟೇ ಅಲ್ಲದೆ ಮುಂಗಾರು, ಹಿಂಗಾರು ಬೆಳೆಗಳ ಸಮೀಕ್ಷೆ ಮಾಡಲಾಗುತ್ತದೆ. ಇದೇ ಮೊದಲ ಬಾರಿಗೆ ಖಾಸಗಿಯವರಿಂದ ಬೆಳೆ ಸಮೀಕ್ಷೆ ಮಾಡಿಸಲಾಗುತ್ತದೆ. ಗ್ರಾಮದ ಯುವಕ-ಯುವತಿಯರು ಬೆಳೆ ಸಮೀಕ್ಷೆ ಮಾಡಬಹುದಾಗಿದೆ. ಪ್ರತಿ ಬೆಳೆಗೆ 10 ರೂ. ಸಂಭಾವನೆ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಸಮೀಕ್ಷೆ ಮಾಡಲು ಇಚ್ಚಿಸುವವರು ಗ್ರಾಮ ಲೆಕ್ಕಿಗರ ಬಳಿ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ. ಸುಮಾರು 90 ಕೋಟಿ ವೆಚ್ಚದಲ್ಲಿ ಸಮೀಕ್ಷೆ ನಡೆಸುತ್ತಿದ್ದು, ದೇಶದಲ್ಲಿ ಇಂತಹ ಸಮೀಕ್ಷೆ ಇದೇ ಮೊದಲಾಗಿದೆ ಎಂದರು.
Advertisement
Advertisement
ಕರ್ನಾಟಕ ರೈತ ಸುರಕ್ಷಾ ಯೋಜನೆಯನ್ನು ಈ ವರ್ಷವೂ ಅಳವಡಿಸಿಕೊಳ್ಳಲು ನಿರ್ಧಾರ ಮಾಡಲಾಗಿದೆ. 10 ಕ್ಲಸ್ಟರ್ ಮಾಡಿ ಟೆಂಡರ್ ಕರೆಯಲು ಸಂಪುಟ ಒಪ್ಪಿಗೆ ನೀಡಿದೆ. ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಯೋಜನೆ ಜಾರಿಯಾಗುತ್ತಿದ್ದು, ರಾಜ್ಯ ಸರ್ಕಾರ 546 ಕೋಟಿ ರೂ. ಯೋಜನೆಗೆ ಭರಿಸಲಿದೆ. ರಾಜ್ಯದ 10 ತಾಲೂಕು ಆಸ್ಪತ್ರೆಯಲ್ಲಿ ಡಿಎನ್ಬಿ ಕೋರ್ಸ್ ಪ್ರಾರಂಭಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಕೋರ್ಸ್ ಮಾಡಿದವರು 3 ವರ್ಷ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ನಿಯಮ ಅಳವಡಿಕೆ ಮಾಡಿದ್ದು, ನೀಟ್ ಮೂಲಕ ಕೋರ್ಸ್ ದಾಖಲಾತಿ ಮಾಡಿಕೊಳ್ಳಲು ಸರ್ಕಾರ ನಿರ್ಧಾರ ಮಾಡಿದೆ ಎಂದು ಹೇಳಿದರು.
ಹೇಮಾವತಿ ಬಲದಂಡೆ ನಾಲೆ ನವೀಕರಣ ಸಂಪುಟ ಒಪ್ಪಿಗೆ ನೀಡಿದೆ. 72 ಕಿಲೋಮೀಟರ್ ನಾಲೆ ನವೀಕರಣಕ್ಕೆ ಒಪ್ಪಿಗೆ ನೀಡಿದ್ದು, ಸುಮಾರು 422 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತದೆ ಎಂದರು.
ಮೋಡ ಬಿತ್ತನೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಕೇಂದ್ರ ಸರ್ಕಾರ ಕೆಲವು ಅನುಮತಿ ನೀಡಬೇಕಾಗಿದೆ. ಕೇಂದ್ರದಿಂದ ಅನುಮತಿ ಸಿಕ್ಕ ಕೂಡಲೇ ಮೋಡ ಬಿತ್ತನೆ ಪ್ರಾರಂಭ ಮಾಡುತ್ತೇವೆ. ಜುಲೈ ಎರಡನೇ ವಾರದಲ್ಲಿ ಮೋಡ ಬಿತ್ತನೆ ಮಾಡುವ ಗುರಿ ಇದೆ ಎಂದು ಮಾಹಿತಿ ನೀಡಿದರು.
ಬೆಂಗಳೂರು-ಹುಬ್ಬಳ್ಳಿ ಬದಲಾಗಿ ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಮೋಡ ಬಿತ್ತನೆ ನಿರ್ಧಾರ ಮಾಡಲಾಗಿದೆ. ಬೆಂಗಳೂರಿನಲ್ಲಿ ಹೆಚ್ಚು ವಾಯು ನೆಲೆ ಕೇಂದ್ರ ಇರುವುದರಿಂದ ಅನುಮತಿಯ ಸಮಸ್ಯೆ ಇದೆ. ಹೀಗಾಗಿ ಬೆಂಗಳೂರು ಬಿಟ್ಟು ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಮೋಡ ಬಿತ್ತನೆ ಮಾಡಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಮೀಸಲಾತಿ ಹೆಚ್ಚಿಸುವ ಕುರಿತು ಸಂಪುಟದಲ್ಲಿ ಚರ್ಚೆ ಆಯಿತು. ಮೀಸಲಾತಿ ಶೇ.50 ಮೀರಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈಗಿರುವ ಮೀಸಲಾತಿ ಹೇಗೆ ಬದಲಾವಣೆ ಮಾಡಬಹುದು ಎನ್ನುವ ಮಾಹಿತಿ ನೀಡುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ. ಮುಖ್ಯ ಕಾರ್ಯದರ್ಶಿಗಳು ವರದಿ ನೀಡಿದ ಬಳಿಕ ಕಮಿಟಿ ಮಾಡುವ ಕುರಿತು ತೀರ್ಮಾನ ಮಾಡಲಾಗುತ್ತದೆ. ಮುಂದಿನ ಕ್ಯಾಬಿನೆಟ್ ಕಮಿಟಿನಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.