ಬೆಂಗಳೂರು: ಕೋಟ್ಯಂತರ ಆರ್‌ಸಿಬಿ ಅಭಿಮಾನಿಗಳಿಗೆ ಕೊನೆಗೂ ರಾಜ್ಯ ಸರ್ಕಾರದಿಂದ ಗುಡ್‌ನ್ಯೂಸ್ ಸಿಕ್ಕಿದೆ. 2026ರ ಐಪಿಎಲ್ ಸೇರಿದಂತೆ ಮುಂಬರುವ ಎಲ್ಲಾ ಕ್ರಿಕೆಟ್ ಪಂದ್ಯಗಳನ್ನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಸಲು ಸಚಿವ ಸಂಪುಟ ಬಹುತೇಕ ಒಪ್ಪಿಗೆ ಸೂಚಿಸಿದೆ.
ಗೃಹ ಇಲಾಖೆಗೆ ಜವಾಬ್ದಾರಿ ನೀಡಿ ಮೈಕೆಲ್ ಡಿ ಕುನ್ಹಾ ವರದಿಯ ಶಿಫಾರಸುಗಳನ್ನ ಅಳವಡಿಸಿಕೊಂಡು ಪಂದ್ಯಕ್ಕೆ ಅವಕಾಶ ಮಾಡಿಕೊಡಲು ಬೆಳಗಾವಿಯಲ್ಲಿ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಪಂದ್ಯಗಳು ನಡೆಯುವ ಸಂದರ್ಭದಲ್ಲಿ ಹೆಚ್ಚಿನ ಭದ್ರತೆ ಒದಗಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಪಂದ್ಯದ ವೇಳೆ ಏನೇನು ಕ್ರಮ ಅನುಸರಿಸಬೇಕು ಅನ್ನೋದರ ಬಗ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿಯು (KSCA) ಗೃಹ ಇಲಾಖೆಯೊಂದಿಗೆ ಚರ್ಚಿಸಬೇಕಿದೆ. ಬಳಿಕ ಗೃಹ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ಬಳಿಕ ತೀರ್ಮಾನ ಕೈಗೊಳ್ಳಲು ಸಂಪುಟ ನಿರ್ಧರಿಸಿದೆ.
ಕಳೆದ ಜುಲೈನಲ್ಲಿ ಆರ್‌ಸಿಬಿ ವಿಜಯೋತ್ಸವ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಮಂದಿ ಅಭಿಮಾನಿಗಳು ಸಾವನ್ನಪ್ಪಿದ್ದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳನ್ನ ಸ್ಥಗಿತಗೊಳಿಸಲಾಗಿತ್ತು, ಇದೇ ಕಾರಣದಿಂದ ಮಹಿಳಾ ವಿಶ್ವಕಪ್ ಪಂದ್ಯ ಕೂಡ ಕೈತಪ್ಪಿತ್ತು.


