ಶಿವಮೊಗ್ಗ: ಸಂಪುಟ ರಚನೆಯಾಗದಿರುವುದರಿಂದ ಪ್ರವಾಹ ಪರಿಸ್ಥಿತಿ ನಿಭಾಯಿಸಲು ತೊಂದರೆಯಾಗಿರುವುದು ನಿಜ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಒಪ್ಪಿಕೊಂಡಿದ್ದಾರೆ.
ರಾಜ್ಯಾದ್ಯಂತ ಎದುರಾಗಿರುವ ಪ್ರವಾಹದ ಕುರಿತು ಇಂದು ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಶೀಘ್ರದಲ್ಲೇ ಸಚಿವ ಸಂಪುಟ ರಚನೆಯಾಗಲಿದೆ. ಈ ಕುರಿತು ಮುಖ್ಯಮಂತ್ರಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದ್ದಾರೆ. ಸಂಪುಟ ರಚನೆಯಾಗದ್ದರಿಂದಲೇ ಪ್ರವಾಹ ನಿಭಾಯಿಸಲು ತೊಂದರೆಯಾಗಿದೆ ಎಂಬುದು ನಿಜ ಎಂದು ಇದೇ ವೇಳೆ ಒಪ್ಪಿಕೊಂಡಿದ್ದಾರೆ.
Advertisement
Advertisement
ಸಚಿವ ಸಂಪುಟ ರಚನೆಯಾಗದ ಹಿನ್ನಲೆ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಬಿಜೆಪಿಯಿಂದ ತಂಡ ರಚನೆ ಮಾಡಲಾಗಿದೆ. ಸುಮಾರು ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಗೆ ನಾಲ್ಕು ತಂಡಗಳಲ್ಲಿ ಬಿಜೆಪಿ ನಾಯಕರು ಪ್ರವಾಸ ಮಾಡಲಿದ್ದಾರೆ. ಈ ಮೂಲಕ ಸಾರ್ವಜನಿಕರನ್ನು ಪ್ರವಾಹದಿಂದ ರಕ್ಷಿಸಿ, ಪರಿಸ್ಥಿತಿ ಹತೋಟಿಗೆ ತರಲಾಗುವುದು ಎಂದು ತಿಳಿಸಿದರು.
Advertisement
ಸಚಿವರಾಗಿಯೇ ಪ್ರವಾಹ ನಿಭಾಯಿಸಬೇಕೆಂದೇನಿಲ್ಲ. ಬಿಜೆಪಿ ನಾಯಕರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಕೈಗೊಳ್ಳಬೇಕಾದ ಪರಿಹಾರ ಕಾರ್ಯಗಳ ಕುರಿತು ಚರ್ಚೆ ನಡೆಸಲಿದ್ದೇವೆ. ಈ ರೀತಿಯ ಜಲಪ್ರಳಯ ಇತ್ತೀಚಿನ ವರ್ಷಗಳಲ್ಲಿ ಬಂದಿರಲಿಲ್ಲ. ನಮ್ಮ ಜಿಲ್ಲೆಯಲ್ಲಿಯೂ 201 ಮನೆಗಳು ಬಿದ್ದು ಹೋಗಿವೆ. ಇಬ್ಬರು ಮೃತ ಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
Advertisement
ಪ್ರವಾಹದಿಂದ ಜನರನ್ನು ರಕ್ಷಿಸಿ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಮುಖ್ಯಮಂತ್ರಿಗಳು ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದಾರೆ. ಪ್ರವಾಹ ವಿಪರೀತವಾಗಿದ್ದರಿಂದ ಮೊದಲು ಅದನ್ನು ನಿಭಾಯಿಸಿ ಆಮೇಲೆ ಸಂಪುಟ ರಚನೆ ಎಂದು ಕೇಂದ್ರದ ನಾಯಕರು ಹೇಳಿದ್ದಾರೆ. ಅಲ್ಲದೆ, ಇನ್ನೆರಡು ದಿನ ಕಾಯಿರಿ ಎಂದು ಹೇಳಿದ್ದು, ಈ ವಾರದಲ್ಲಿ ಸಂಪುಟ ರಚನೆಯಾಗಲಿದೆ. ಹೀಗಾಗಿ ಕಾಯುವುದು ಅನಿವಾರ್ಯ ಆಗಿರುವುದರಿಂದ ಸಂಪುಟ ರಚನೆ ತಡವಾಗುತ್ತಿದೆ ಎಂದು ಹೇಳಿದರು.