ಬೆಂಗಳೂರು: ಸಚಿವ ಸಂಪುಟ ರಚನೆಗೆ ಕೊನೆಗೂ ಮುಕ್ತಿ ಸಿಗಲಿದೆ. ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಜನವರಿ 31 ರಂದು ಸಂಪುಟ ವಿಸ್ತರಣೆ ನಡೆಯುವುದು ಬಹುತೇಕ ಖಚಿತ ಎನ್ನಲಾಗಿದೆ.
ಗುರುವಾರದಂದು ಸಿಎಂ ಯಡಿಯೂರಪ್ಪ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಗುರುವಾರ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆ ಚರ್ಚೆ ನಡೆಸಲಿರುವ ಸಿಎಂ, ಅಂದೇ ಸಚಿವ ಸಂಪುಟ ಕುರಿತು ಮಾತುಕತೆ ಫೈನಲ್ ಮಾಡಲಿದ್ದಾರೆ. ಹೈಕಮಾಂಡ್ ಅಂದೇ ಒಪ್ಪಿಗೆ ಕೊಟ್ರೆ ಜನವರಿ 31 ರಂದು ಬಹುತೇಕ ಸಂಪುಟ ವಿಸ್ತರಣೆ ನಡೆಯಲಿದೆ. ಸಿಎಂ ದೆಹಲಿಗೆ ಹೋಗುವ ಕುರಿತು ನಾಳೆ ಸ್ಪಷ್ಟತೆ ಸಿಗಲಿದೆ. ಒಂದೊಮ್ಮೆ ದೆಹಲಿಗೆ ಸಿಎಂ ಬಿಎಸ್‍ವೈ ತೆರಳದಿದ್ದರೂ ಜನವರಿ 31ರಂದೇ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ದೆಹಲಿಗೆ ಸಿಎಂಗೆ ಬುಲಾವ್ ಕೊಡದಿದ್ದರೂ ಫೋನ್ ಮೂಲಕವೇ ಸಿಎಂಗೆ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಓಕೆ ಅನ್ನುವ ಸಾಧ್ಯತೆಯಿದೆ.
Advertisement
Advertisement
ಸದ್ಯದ ಮಾಹಿತಿಗಳ ಪ್ರಕಾರ ಮಿತ್ರಮಂಡಳಿ ಶಾಸಕರ ಪೈಕಿ 9 ರಿಂದ 10 ಜನರಿಗೆ ಸಚಿವ ಸ್ಥಾನ ಕೊಡೋದು ನಿರ್ಧಾರ ಆಗಿದೆ. ಪಕ್ಷದ ಮೂಲ ಶಾಸಕರ ಪೈಕಿ 2 ರಿಂದ 4 ಜನರಿಗೆ ಇದೇ ಸಂಪುಟ ವಿಸ್ತರಣೆಯಲ್ಲಿ ಮಂತ್ರಿಗಿರಿ ಸಿಗುವ ಸಾಧ್ಯತೆಯೂ ದಟ್ಟವಾಗಿದೆ. ಆದರೆ ಇದರ ಬಗ್ಗೆ ಹೈಕಮಾಂಡ್ ಕಡೆಯಿಂದಲೇ ಇನ್ನೂ ಹೆಚ್ಚಿನ ಸ್ಪಷ್ಟತೆ ಸಿಗಬೇಕಿದೆ.
Advertisement
ನಾಳೆ ಸಿಎಂ ಯಡಿಯೂರಪ್ಪ ಬೆಳಗಾವಿ ಪ್ರವಾಸ ಹೊರಡಲಿದ್ದು ಅಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನಂತರ ಅಂದೇ ಸಂಜೆ ಸಿಎಂ ಶಿವಮೊಗ್ಗಕ್ಕೆ ತೆರಳಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ಜನವರಿ 30 ರಂದು ಸಿಎಂ ಬೆಂಗಳೂರಿಗೆ ಮರಳುವುದು ನಿಗದಿಯಾಗಿದೆ. ಒಂದೊಮ್ಮೆ ದೆಹಲಿಯಿಂದ ಬುಲಾವ್ ಬಂದರೆ ಜನವರಿ 30 ರಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಾಪಸ್ಸಾಗಿ ಅಲ್ಲಿಂದ ನೇರವಾಗಿ ದೆಹಲಿ ವಿಮಾನ ಹತ್ತಲಿದ್ದಾರೆ.
Advertisement
ದೆಹಲಿ ಬುಲಾವ್ ಬರದಿದ್ದರೆ ಸಿಎಂ ಅವರು ಶಿವಮೊಗ್ಗದಿಂದ ಮಂಗಳೂರಿಗೆ ತೆರಳುವ ಸಾಧ್ಯತೆ ಇದೆ. ಮಂಗಳೂರಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದ್ದು, ಸಿಎಂ ಭಾಗವಹಿಸುವ ಸಾಧ್ಯತೆ ಇದೆ. ಆದರೆ ಇಷ್ಟೆಲ್ಲದರ ಮಧ್ಯೆ ಜನವರಿ 31 ರಂದು ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.