ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಸದ್ಯಕ್ಕೆ ಶಾಂತಿ ನೆಲೆಸಿದೆ. ಉಪಚುನಾವಣೆ ಫಲಿತಾಂಶದ ಬಳಿಕ ಸಚಿವ ಸ್ಥಾನದ ಆಕಾಂಕ್ಷಿಗಳ ಆರ್ಭಟ ಹೆಚ್ಚಾಗಿತ್ತು. ಪಕ್ಷದ ಹಿರಿಯ ಶಾಸಕರು ಈ ಬಾರಿಯಾದರೂ ಸಚಿವ ಸ್ಥಾನ ಪಡೆಯಲೇಬೇಕೆಂದು ಸಿಎಂ ಯಡಿಯೂರಪ್ಪ ನಿವಾಸಕ್ಕೆ ನಿತ್ಯ ಭೇಟಿ ಕೊಟ್ಟು ಒತ್ತಡ ಹೇರುತ್ತಿದ್ದರು. ಆಕಾಂಕ್ಷಿಗಳ ಒತ್ತಡಕ್ಕೆ ಯಡಿಯೂರಪ್ಪನವರು ಅಕ್ಷರಶ: ತಾಳ್ಮೆಗೆಟ್ಟಿದ್ರು. ಆದ್ರೆ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಒಲವು ತೋರದ ಹಿನ್ನೆಲೆಯಲ್ಲಿ ದಿಢೀರನೇ ಸನ್ನಿವೇಶ ಬದಲಾಗಿದೆ. ಸಚಿವ ಸ್ಥಾನಕ್ಕೆ ಬೇಡಿಕೆ ಇಡಲು ಬೆಂಗಳೂರಿಗೆ ಆಗಮಿಸಿದ್ದ ಶಾಸಕರುಗಳು ಬೇರೆ ದಾರಿಯಿಲ್ಲದೇ ಸದ್ದಿಲ್ಲದೇ ತಮ್ಮ ತಮ್ಮ ಗೂಡು ಸೇರಿಕೊಂಡಿದ್ದಾರೆ.
ಕಳೆದ ಎರಡು ದಿನಗಳಿಂದಲೂ ಸಿಎಂ ಅವರ ಧವಳಗಿರಿ ನಿವಾಸದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಚಟುವಟಿಕೆಗಳು ನಿಶ್ಚಲಗೊಂಡಿವೆ. ಧವಳಗಿರಿಗೆ ಬರುತ್ತಿದ್ದ ಸಚಿವ ಸ್ಥಾನಾಕಾಂಕ್ಷಿಗಳ ಭೇಟಿ ಈ ಎರಡು ದಿನಗಳಲ್ಲಿ ಇಲ್ಲವೇ ಇಲ್ಲ ಅನ್ನುವಂತಾಗಿದೆ. ಪಕ್ಷದ ಶಾಸಕರಾದ ಉಮೇಶ್ ಕತ್ತಿ, ರೇಣುಕಾಚಾರ್ಯ, ಬಸನಗೌಡ ಪಾಟೀಲ್ ಯತ್ನಾಳ್, ರಾಜುಗೌಡ, ಎಂ.ಪಿ.ಕುಮಾರಸ್ವಾಮಿ, ಪೂರ್ಣಿಮಾ ಶ್ರೀನಿವಾಸ್, ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ, ಎಸ್ ಆರ್ ವಿಶ್ವನಾಥ್, ಮಾಡಾಳ್ ವಿರೂಪಾಕ್ಷಪ್ಪ, ಅರಗ ಜ್ಞಾನೇಂದ್ರ, ರಾಮದಾಸ್, ದತ್ತಾತ್ರೇಯ ಪಾಟೀಲ್ ರೇವೂರ, ಮಾಜಿ ಸಚಿವ ಸಿಪಿ ಯೋಗೇಶ್ವರ್ ಸೇರಿ ಹಲವರು ಸಚಿವ ಸ್ಥಾನಕ್ಕಾಗಿ ಉಪಚುನಾವಣೆ ಬಳಿಕ ಸಿಎಂ ಯಡಿಯೂರಪ್ಪನವರಿಗೆ ದುಂಬಾಲು ಬಿದ್ದಿದ್ದರು.
Advertisement
Advertisement
ಉಪಚುನಾವಣೆಯಲ್ಲಿ ಗೆದ್ದಿದ್ದ 11 ನೂತನ ಶಾಸಕರು ಸಹ ನಿತ್ಯ ಯಡಿಯೂರಪ್ಪ ಭೇಟಿ ಮಾಡಲು ಆಗಮಿಸುತ್ತಿದ್ದರು. ಇವರ ಜೊತೆಗೆ ಪರಾಜಿತರಾದ ಎಂಟಿಬಿ ನಾಗರಾಜ್, ಎಚ್ ವಿಶ್ವನಾಥ್ ಸಹ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಯಾವಾಗ ಹೈಕಮಾಂಡ್ ಸದ್ಯಕ್ಕೆ ಸಂಪುಟ ವಿಸ್ತರಣೆ ಇಲ್ಲ ಎನ್ನುವ ಸಂದೇಶ ರವಾನಿಸಿತೋ ಆಗ ಎಲ್ಲ ಹೊಸ ಮತ್ತು ಹಳೆ ಶಾಸಕರೂ ಭ್ರಮನಿರಸನಗೊಂಡು ವಾಪಸ್ ತಮ್ಮ ತಮ್ಮ ಗೂಡುಗಳಿಗೆ ಮರಳಿದ್ದಾರೆ.
Advertisement
ಸದ್ಯಕ್ಕೆ ಎರಡು ದಿನಗಳಿಂದ ಯಡಿಯೂರಪ್ಪ ನಿವಾಸದ ಎದುರು ಯಾರೊಬ್ಬರೂ ಆಕಾಂಕ್ಷಿಗಳು ಕಾಣಿಸಿಕೊಳ್ಳುತ್ತಿಲ್ಲ. ಹೈಕಮಾಂಡ್ ಧೋರಣೆಯಿಂದ ಬೇಸರಗೊಂಡಿರುವ ಆಕಾಂಕ್ಷಿಗಳು ಒಳಗೊಳಗೇ ಕುದಿಯುತ್ತಿದ್ದಾರೆ. ನೂತನ ಶಾಸಕರಲ್ಲೂ ಮಡುಗಟ್ಟಿರುವ ಬೇಗುದಿ ಕಡಿಮೆಯೇನಿಲ್ಲ. ಆದರೆ ಯಾರಿಗೂ ಬಹಿರಂಗವಾಗಿ ಅತೃಪ್ತಿ ತೋಡಿಕೊಳ್ಳದ ಅಸಹಾಯಕತೆ. ಈ ಹಿನ್ನೆಲೆಯಲ್ಲಿ ಏನೂ ಮಾಡಲಾಗದೇ ತಮ್ಮ ತಮ್ಮ ಕ್ಷೇತ್ರಗಳಿಗೆ ಎಲ್ಲರೂ ಮರಳಿದ್ದಾರೆ.
Advertisement
ಮುಂದಿನ ವಾರ ಅಂದ್ರೆ ಡಿಸೆಂಬರ್ 22ರ ನಂತರ ಯಡಿಯೂರಪ್ಪ ದೆಹಲಿಗೆ ಹೋಗುವ ಸಾಧ್ಯತೆಯಿದೆ. ಅದಕ್ಕೂ ಮುನ್ನ ಆಕಾಂಕ್ಷಿಗಳೆಲ್ಲ ಮತ್ತೊಂದು ರೌಂಡ್ ಯಡಿಯೂರಪ್ಪ ಭೇಟಿ ಮಾಡುವ ಸಾಧ್ಯತೆಯಿದೆ.