ಬೆಂಗಳೂರು: ಅಂತೂ ಇಂತೂ ಸಚಿವ ಸಂಪುಟ ವಿಸ್ತರಣೆಯೆಂಬ ಗಜಪ್ರಸವಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಫೆಬ್ರವರಿ 6ರ ಗುರುವಾರದಂದು ಬೆಳಗ್ಗೆ 10.30 ಕ್ಕೆ ರಾಜಭವನದಲ್ಲಿ 13 ಜನ ನೂತನ ಸಚಿವರು ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಸಿಎಂ ಯಡಿಯೂರಪ್ಪ, ಫೆ.6ರಂದು ಬೆಳಗ್ಗೆ 10.30ಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. 10+3 ಸೂತ್ರದನ್ವಯ ಸಂಪುಟ ವಿಸ್ತರಣೆ ಮಾಡಲಿದ್ದೇವೆ. ಉಪ ಚುನಾವಣೆಯಲ್ಲಿ ಗೆದ್ದ 10 ಜನರಿಗೆ ಸಚಿವ ಸ್ಥಾನ ಕೊಡ್ತೇವೆ. ಪಕ್ಷದ ಮೂಲ ಶಾಸಕರ ಪೈಕಿ ಮೂವರಿಗೆ ಸಚಿವ ಸ್ಥಾನ ಕೊಡ್ತೇವೆ ಎಂದು ತಿಳಿಸಿದರು. ಹಾಗಿದ್ದರೆ ಒಬ್ಬರು ಯಾರಿಗೆ ಕೊಡಲ್ಲ ಎಂಬ ಪ್ರಶ್ನೆಗೆ ಕಾದು ನೋಡಿ ಎಂದು ಸಿಎಂ ಉತ್ತರಿಸಿದರು.
ಇದೇ ವೇಳೆ ಉಪಚುನಾವಣೆಯಲ್ಲಿ ಸೋತಂತಹ ಹೆಚ್. ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ಕೊಡಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಸೋತವರಿಗೆ ಸಚಿವ ಸ್ಥಾನ ಕೊಡುವಂತಿಲ್ಲ ಎಂದು ಇದೇ ವೇಳೆ ಸಿಎಂ ಯಡಿಯೂರಪ್ಪ ಅಧಿಕೃತವಾಗಿ ಘೋಷಿಸಿದರು. ಇನ್ನು ಆರ್ ಶಂಕರ್ ಅವರಿಗೆ ಈ ಸಲದ ಬದಲು ಮುಂದಿನ ಬಾರಿ ಪರಿಗಣಿಸಲಾಗುತ್ತದೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಬೆಳಗಾವಿ ಮತ್ತೆ ಬೆಂಗಳೂರಿಗೆ ಹೆಚ್ಚು ಸಚಿವರ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಅದು ಅನಿವಾರ್ಯವಾಗಿದೆ. ನನ್ನ ಜಾಗದಲ್ಲಿ ಯಾರೇ ಇದ್ದಿದ್ರು ಅದೇ ಕೆಲಸ ಮಾಡುತ್ತಿದ್ದರು. ಆ 17 ಶಾಸಕರು ರಾಜೀನಾಮೆ ಕೊಟ್ಟಿಲ್ಲ ಅಂದಿದ್ರೆ ನಾನು ಈ ಕುರ್ಚಿಯಲ್ಲಿ ಬಂದು ಕುಳಿತುಕೊಳ್ಳೋಕೆ ಆಗುತ್ತಿತ್ತಾ?. ನಾವು ಹಿಂದೆ ಏನು ಭರವಸೆ ಕೊಟ್ಟಿದ್ದೇವೋ ಅದನ್ನು ಈಡೇರಿಸುತ್ತೇವೆ. ಯಾವ ಶಾಸಕರಿಗೂ ಅನ್ಯಾಯ ಮಾಡುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು. ಸಂಪುಟ ಪುನಾರಚನೆ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದೆಂದು ಸಿಎಂ ಸ್ಪಷ್ಟಪಡಿಸಿದರು.