ಬೆಂಗಳೂರು : ತಲೆನೋವಾಗಿರುವ ಸಂಪುಟ ವಿಸ್ತರಣೆ ಕಸರತ್ತು ಕ್ಲೈಮ್ಯಾಕ್ಸ್ ಹಂತ ತಲುಪುತ್ತಿದ್ದಂತೆ ಹಲವು ರೀತಿಯ ಲೆಕ್ಕಾಚಾರಗಳು ಮುನ್ನೆಲೆಗೆ ಬಂದಿವೆ. ಸಿಎಂ ಯಡಿಯೂರಪ್ಪ ಅವರು ತಮ್ಮದೇ ಅನುಭವದ ಆಧಾರದಲ್ಲಿ ಸಂಪುಟ ವಿಸ್ತರಣೆಯ ತಂತ್ರಗಾರಿಕೆಯಲ್ಲಿ ತೊಡಗಿದ್ದರೆ ಹೈಕಮಾಂಡ್ ಮತ್ತು ಸಂಘ ಪರಿವಾರ ಭಿನ್ನವಾಗಿ ಯೋಚಿಸುತ್ತಿರುವುದು ಈಗ ಬಹಿರಂಗವಾಗಿದೆ.
Advertisement
ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವಾಗ ಎಷ್ಟು ಶಾಸಕರಿಗೆ ಅವಕಾಶ, ಪ್ರಾದೇಶಿಕತೆ, ಸಮುದಾಯಗಳ ಅಂಕಿ-ಅಂಶಕ್ಕಿಂತ ಯುವಕರಿಗೇ ಯಾಕೆ ಹೆಚ್ಚು ಅವಕಾಶ ನೀಡಬಾರದು ಎನ್ನುವುದು ಹೈಕಮಾಂಡ್ ಲೆಕ್ಕ. ಈ ಬಾರಿ ವಿಸ್ತರಣೆ ಸಂದರ್ಭದಲ್ಲಿ ಯುವ ಶಾಸಕರಿಗೆ ಅವಕಾಶ ನೀಡುವುದು ಉತ್ತಮ ಎನ್ನುವುದು ನಿರ್ಧಾರಕ್ಕೆ ಬಂದಿದೆ. ರಾಜ್ಯದ ವಿವಿಧ ಭಾಗಗಳಿಂದ ಏಳೆಂಟು ಯುವ ಶಾಸಕರನ್ನು ಪಕ್ಷ ವರಿಷ್ಠರು ಗುರುತಿಸಿದ್ದಾರೆ. ಕರಾವಳಿಯ ಭಾಗದಿಂದ ಕಾರ್ಕಳ ಶಾಸಕ ಸುನಿಲ್‍ಕುಮಾರ್, ಹಳೇ ಮೈಸೂರು ಭಾಗದಿಂದ ನಂಜನಗೂಡು ಶಾಸಕ ಹರ್ಷವರ್ಧನ್ ಮತ್ತು ಹಾಸನ ಶಾಸಕ ಪ್ರೀತಂಗೌಡ, ಹೈದರಾಬಾದ್ ಕರ್ನಾಟಕದಿಂದ ಕಲಬುರಗಿ ಉತ್ತರ ಶಾಸಕ ದತ್ತಾತ್ರೇಯ ರೇವೂರ ಮತ್ತು ಸುರಪುರ ಶಾಸಕ ರಾಜುಗೌಡ, ಮುಂಬೈ ಕರ್ನಾಟಕದಿಂದ ಧಾರವಾಡದ ಶಾಸಕ ಅರವಿಂದ್ ಬೆಲ್ಲದ್ ಅವರ ಹೆಸರನ್ನು ಪಟ್ಟಿ ಮಾಡಿಕೊಂಡಿದೆ. ಜಾತಿ, ಪ್ರದೇಶವಾರು ಲೆಕ್ಕಾಚಾರದಲ್ಲಿ ಈ ಯುವ ಶಾಸಕರಿಗೆ ಅವಕಾಶ ನೀಡಬೇಕೆನ್ನುವುದು ವರಿಷ್ಠರ ಉದ್ದೇಶ ಎನ್ನಲಾಗಿದೆ.
Advertisement
Advertisement
ಪಕ್ಷವನ್ನು ಪರಿಣಾಮಕಾರಿಯಾಗಿ ಮುನ್ನಡೆಸಲು ಹಿರಿಯರನ್ನು ತೆರೆಗೆ ಸರಿಸಿ ಯುವಕರಿಗೆ ಆದ್ಯತೆ ಕೊಡುವ ವಿಚಾರದಲ್ಲಿ ಪಕ್ಷದ ವರಿಷ್ಠರು ವಿಶೇಷ ಆಸಕ್ತಿ ಹೊಂದಿದ್ದಾರೆ. ಭವಿಷ್ಯದಲ್ಲಿ ಪಕ್ಷವನ್ನು ರಾಜ್ಯದಲ್ಲಿ ಗಟ್ಟಿಯಾಗಿ ಸಂಘಟಿಸುವ ಗುರಿ ಇಟ್ಟುಕೊಂಡಿರುವ ಬಿಜೆಪಿ ಹೈಕಮಾಂಡ್, ಶತಾಯಗತಾಯ ಯುವ ಶಾಸಕರಿಗೆ ಹೊಸ ಮುಖಗಳಿಗೆ ಸಂಪುಟ ವಿಸ್ತರಣೆಯಲ್ಲಿ ಮನ್ನಣೆ ನೀಡುವುದು ಬಹುತೇಕ ಖಚಿತ ಎನ್ನಲಾಗಿದೆ.
Advertisement
ಮತ್ತೊಂದು ಕಡೆ ಆರ್‌ಎಸ್‌ಎಸ್ ಕೂಡ ಸಂಪುಟ ವಿಸ್ತರಣೆ ಕಗ್ಗಂಟು ಬಿಡಿಸಲು ಎಂಟ್ರಿ ಕೊಟ್ಟಿದೆ. ಸಂಘ ಪರಿವಾರ ವಿಶೇಷವಾಗಿ ಕರಾವಳಿ ಭಾಗದ ಬಗ್ಗೆ ಹೆಚ್ಚು ಒಲವು ತೋರುತ್ತಿದೆ. ಕಾರಣವೇನೆಂದರೆ ಬಿಜೆಪಿ ಹೆಚ್ಚು ನೆಲೆ ಇರುವುದು, ಪಕ್ಷ ಬಲಿಷ್ಠವಾಗಿರುವುದು ಕರಾವಳಿ ಭಾಗದಲ್ಲಿ. ಅದನ್ನು ಕಳೆದುಕೊಳ್ಳುವುದಾಗಲಿ, ಕಾರ್ಯಕರ್ತರಲ್ಲಿ ಅತೃಪ್ತಿ, ಅಸಮಾಧಾನ ಮೂಡುವುದಕ್ಕಾಗಲಿ ಅವಕಾಶ ನೀಡಬಾರದೆಂದು ಪರಿವಾರದ ಉದ್ದೇಶ. ಅದರಂತೆ ಸಂಪುಟ ವಿಸ್ತರಣೆಯಲ್ಲಿ ಕರಾವಳಿಗೂ ವಿಶೇಷ ಆದ್ಯತೆ, ಒತ್ತು ನೀಡಬೇಕೆಂದು ಆರ್‌ಎಸ್‌ಎಸ್ ಬಯಸಿದೆ. ದಕ್ಷಿಣ ಕನ್ನಡ ಜಿಲ್ಲೆಯ 6, ಉಡುಪಿಯ 5, ಉತ್ತರ ಕನ್ನಡ ಜಿಲ್ಲೆಯ 5 ಶಾಸಕರು ಪಕ್ಷದಿಂದ ಆಯ್ಕೆಯಾಗಿದ್ದರು. ಆ ಪ್ರದೇಶಕ್ಕೆ ನೀಡಬೇಕಾದ ಪ್ರಾಧನ್ಯತೆ ನೀಡಿಲ್ಲ ಎಂಬ ಅಸಮಾಧಾನವಿದೆ. 16 ಶಾಸಕರ ಪೈಕಿ ಕನಿಷ್ಠ 3 ಮಂದಿಯನ್ನು ಸಂಪುಟಕ್ಕೆ ಸೇರಿಸಬೇಕೆನ್ನುವುದು ಸಂಘ ಪರಿವಾರದ ಒತ್ತಡ. ಬಿಜೆಪಿ ಕಟ್ಟಲು ಮಾದರಿಯಾಗಿ ಕರಾವಳಿಯನ್ನು ಬಳಸಿಕೊಳ್ಳಲಾಗಿದೆ. ಹಾಗೆಯೇ ಎಲ್ಲ ಕಾರ್ಯಗಳಿಗೂ ಕರಾವಳಿಯನ್ನು ಬಳಸಿಕೊಂಡು ಈಗ ನಿರ್ಲಕ್ಷಿಸುವುದು ಸರಿಯಲ್ಲ ಎನ್ನವುದು ಆರ್‌ಎಸ್‌ಎಸ್ ಅಭಿಪ್ರಾಯ. ಹಾಗಾಗಿ ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಕರಾವಳಿಗೆ ಹೆಚ್ಚು ಆದ್ಯತೆ ಸಿಗುವ ನಿರೀಕ್ಷೆ ಇದೆ.
ಬಂಟ ಸಮುದಾಯದ ಪ್ರಾಬಲ್ಯವಿರುವ ಕರಾವಳಿಯಲ್ಲಿ ಸಂಸದರು ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅದೇ ರೀತಿ 5 ಮಂದಿ ಬಂಟ ಸಮುದಾಯದ ಶಾಸಕರೂ ಇದ್ದಾರೆ. ಬಿಜೆಪಿಗೆ ಹೆಚ್ಚು ಬೆಂಬಲ, ಬಲ ನೀಡುತ್ತಿರುವ ಮೂರು ಜಿಲ್ಲೆಗಳಲ್ಲಿ ಪ್ರಾಬಲ್ಯ ಹೊಂದಿರುವ ಬಿಲ್ಲವ ಸಮುದಾಯಕ್ಕೆ ನಿರೀಕ್ಷಿತ ಅವಕಾಶ ಕೊಟ್ಟಿಲ್ಲ ಅನ್ನೋ ಕೂಗು ಕೂಡ ಇದೆ. ಅದನ್ನು ಈಗ ಪಕ್ಷದ ವರಿಷ್ಠರು ಸರಿಪಡಿಸುವ ಕೆಲಸಕ್ಕೆ ಕೈಹಾಕಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಸಂಘ ಪರಿವಾರದ ಆಶಯದಂತೆ ಸಂಪುಟ ವಿಸ್ತರಣೆ ನಡೆದರೆ ಕರಾವಳಿಗೆ ಹೆಚ್ಚಿನ ಅವಕಾಶ ಸಿಗುವ ಸಾಧ್ಯತೆ ಇದೆ.