ಬೆಂಗಳೂರು: ಸಚಿವ ಸಂಪುಟ ರಚನೆಯಾಗದಿದ್ದಾಗ ಯಡಿಯೂರಪ್ಪ ಅವರು ಒನ್ ಮ್ಯಾನ್ ಆರ್ಮಿ ಕೆಲಸ ಮಾಡಿದ್ದರು. ಅದೇ ಚೆನ್ನಾಗಿತ್ತು, ಅದಕ್ಕೆ ಹೋಲಿಸಿದರೆ ಈಗ ಇನ್ನೂ ಹದಗೆಟ್ಟಿದೆ. ಇಂದು ಮಂತ್ರಿಗಿರಿಗಾಗಿ ಪಕ್ಷದಲ್ಲಿ ಕಿತ್ತಾಟ ನಡೆಯುತ್ತಿದೆ. ಗೆಲ್ಲದ ವ್ಯಕ್ತಿಯನ್ನು ಕರೆ ತಂದು ಉಪಮುಖ್ಯಮಂತ್ರಿ ಮಾಡಿದ್ದಾರೆ ಎಂದು ಸಚಿವ ಸಂಪುಟ ರಚನೆಯ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರ ಮೇಲೆ ಹಲವಾರು ಆರೋಪಗಳಿವೆ. ಆದರೂ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದಾರೆ. ಈಶ್ವರಪ್ಪ, ಆರ್.ಅಶೋಕ್ ಅವರು ಇದನ್ನು ಒಪ್ಪಿಕೊಳ್ಳಬಾರದು. ಜಗದೀಶ್ ಶೆಟ್ಟರ್ ಅವರು ಹಿರಿಯರಿದ್ದಾರೆ ಅವರಿಗೆ ನೀಡಬೇಕಾದ ಉನ್ನತ ಹುದ್ದೆಯನ್ನು ಬೇರೆಯವರಿಗೆ ನೀಡಿದ್ದಾರೆ. ಸಿಎಂ ಆಗಿದ್ದವರು ಹೇಗೆ ಮತ್ತೆ ಸಚಿವರಾದರೋ ತಿಳಿಯದಾಗಿದೆ. ಬಿಜೆಪಿಯವರು ಹಿಟ್ಲರ್ ರೀತಿಯಲ್ಲಿ ಅಧಿಕಾರ ನಡೆಸುತ್ತಿದ್ದಾರೆ. ದೆಹಲಿಯಿಂದ ಏನು ಆದೇಶ ಬರುತ್ತೋ ಅದನ್ನು ಯಡಿಯೂರಪ್ಪ ಒಪ್ಪಿಕೊಳ್ಳಬೇಕಾಗಿದೆ. ಇಂದು ಪ್ರಜಾಪ್ರಭುತ್ವ ಇಲ್ಲದಾಗಿದೆ, ಆಡಳಿತ ವ್ಯವಸ್ಥೆ ಬಿದ್ದಿದೆ ಎಂದು ಹರಿಹಾಯ್ದಿದರು.
Advertisement
Advertisement
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದಮೇಲೆ ಎಲ್ಲರಿಗೂ ದಿಗ್ಭ್ರಮೆಯಾಗುತ್ತಿದೆ. ರಾಜ್ಯದಲ್ಲಿ ಅತಿವೃಷ್ಟಿ ಜೊತೆಗೆ ಬರ ಇದೆ. ಇಂತಹ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇವರ ಆಡಳಿತದ ವೈಖರಿ ನೋಡಿದಲ್ಲಿ ಇಂತಹ ಕೆಟ್ಟ ಆಡಳಿತ ಈ ವರೆಗೆ ನಡೆದಿಲ್ಲ. ಮೈತ್ರಿ ಸರ್ಕಾರದ ಮೇಲೆ ಸುಳ್ಳಿನ ಆರೋಪ ಮಾಡಿದರು. ಸರ್ಕಾರವನ್ನು ಬೀಳಿಸಲು ತಂತ್ರಗಳನ್ನು ಮಾಡುತ್ತಿದ್ದರು. ಅವರಿಗೆ ಆಡಳಿತ ಸರಿಯಾಗಿ ನಡೆಯಬೇಕು ಎನ್ನುವುದಕ್ಕಿಂತ ಸರ್ಕಾರ ಬೀಳಿಸಬೇಕು ಎಂಬುದಿತ್ತು. ಆಪರೇಷನ್ ಕಮಲ ಮಾಡಿ ಅದರಲ್ಲಿ ಯಶಸ್ವಿಯಾದರು. ಭ್ರಷ್ಟಾಚಾರದಿಂದ ಸರ್ಕಾರ ರಚನೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
ಆಗಬೇಕಾದ ಕೆಲಸಗಳು ಇನ್ನೂ ಆಗುತ್ತಿಲ್ಲ. ಅತೃಪ್ತರಿಗೂ ಸ್ಥಾನಮಾನ ನೀಡಿ ಬೇಡ ಎನ್ನುವುದಿಲ್ಲ. ಆದರೆ ಅವರ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿದೆ. ಅಲ್ಲಿಯವರೆಗೂ ಯಾರಿಗಾದರೂ ನಿರ್ವಹಣೆ ಮಾಡುವವರಿಗೆ ಖಾತೆ ಕೊಡಿ. ಇಲ್ಲವಾದಲ್ಲಿ ಆಡಳಿತ ವ್ಯವಸ್ಥೆ ಹದಗೆಡುತ್ತದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
Advertisement
ನಾವು ಹಲವಾರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಿ ವರದಿ ಸಿದ್ಧಪಡಿಸಿದ್ದೇವೆ. ಆಗಸ್ಟ್ 29 ರಂದು ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡುತ್ತೇವೆ. ನಂತರ ವರದಿಯನ್ನು ರಾಜ್ಯಪಾಲರಿಗೆ ಕೊಟ್ಟು ಪ್ರಧಾನಿಯವರಿಗೆ ತಲುಪಿಸಲು ಮನವಿ ಮಾಡುತ್ತೇವೆ. ಅದಕ್ಕೂ ಸ್ಪಂದನೆ ನೀಡದಿದ್ದಲ್ಲಿ ನಿಯೋಗ ರಚನೆ ಮಾಡಿಕೊಂಡು ದೆಹಲಿಯ ಜಂತರ್ ಮಂತರ್‍ನಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ದಿನೇಶ್ ಗುಂಡೂರಾವ್ ಎಚ್ಚರಿಸಿದ್ದಾರೆ.
ಮಧ್ಯಂತರ ಚುನಾವಣೆ ಬರುತ್ತೋ ಇಲ್ವೋ ಗೊತ್ತಿಲ್ಲ. ಆದರೆ, ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ಅನುಕೂಲವಂತೂ ಆಗುವುದಿಲ್ಲ. ಎಷ್ಟು ಬೇಗ ಸರ್ಕಾರ ಹೋಗುತ್ತೋ ಅಷ್ಟು ಬೇಗ ಒಳ್ಳೆಯದಾಗುತ್ತೆ. ಚುನಾವಣೆಗೆ ನಾವು ಯಾವಾಗಲೂ ಸಿದ್ಧ. 224 ಕ್ಷೇತ್ರಗಳಲ್ಲೂ ನಾವು ಕೆಲಸ ಶುರು ಮಾಡಿದ್ದೇವೆ. ಆರು ತಿಂಗಳ ಕಾಲ ಈ ಸರ್ಕಾರ ಇದ್ದರೆ ಇನ್ನೂ ಏನೇನು ಆಗುತ್ತದೆಯೋ ಗೊತ್ತಿಲ್ಲ. ರಾಜ್ಯದ ಜನರಿಗೂ ಈ ಸರ್ಕಾರ ಅವಶ್ಯಕತೆ ಇಲ್ಲ ಎಂದರು.
ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಸಚಿವರಾಗೋದಕ್ಕೆ ಯೋಗ ಮತ್ತು ಯೋಗ್ಯತೆ ಬೇಕು ಅಂತ ಯಡಿಯೂರಪ್ಪ ಹೇಳಿದರು. ಚುನಾವಣಾ ಆಯೋಗಕ್ಕೆ ಬಿಜೆಪಿಯವರು ಸಲ್ಲಿಸಿದ ಅಫಿಡವಿಟ್ ತೆಗೆದುಕೊಂಡಿದ್ದೇವೆ. 18 ರಲ್ಲಿ 10 ಜನ ಸಚಿವರ ಮೇಲೆ ಕ್ರಿಮಿನಲ್ ಕೇಸ್ ಗಳಿವೆ. ಇದೇ ಅವರ ಯೋಗ ಮತ್ತು ಯೋಗ್ಯತೆ ಎಂದು ಹರಿಹಾಯ್ದರು.
ಸಂಘದ ಶಾಖೆಗಳಲ್ಲಿ ನಮಸ್ತೆ ಸದಾ ವತ್ಸಲೆ ಎನ್ನುವವರಿಗೆ ಯೋಗ್ಯತೆ ಇಲ್ಲ, ಕ್ರಿಮಿನಲ್ ಕೇಸ್ ಇರುವವರಿಗೆ ಮಾತ್ರ ಯೋಗ್ಯತೆ ಇದೆ ಎನ್ನುವುದನ್ನು ತೋರಿಸುತ್ತದೆ. ಕಾಂಗ್ರೆಸ್ ಜೆಡಿಎಸ್‍ಗೆ ಯಾರು ಚೂರಿ ಹಾಕಿದ್ದಾರೆ ಅವರಿಗೆ ಮಾತ್ರ ಯೋಗ್ಯತೆ ಇದೆ ಎನಿಸುತ್ತದೆ. ಶೆಟ್ಟರ್, ಸಿಟಿ ರವಿ, ಶ್ರೀರಾಮುಲು, ಅಶೋಕ್ ಅವರೆಲ್ಲ ತಾವೇ ಪಕ್ಷವನ್ನು ಕಟ್ಟಿದ್ದು ಅಂತ ಬಿಂಬಿಸಿಕೊಳ್ಳುತ್ತಿದ್ದರು. ಆದರೆ ಇವರೆಲ್ಲ ಕೇವಲ ಮಂತ್ರಿಗಳಾಗೋದಕ್ಕೆ ಮಾತ್ರ ಯೋಗ್ಯತೆ ಇರುವವರು ಅಂತ ಪಾರ್ಟಿ ಹೇಳಿದೆ ಎಂದು ಹರಿಹಾಯ್ದರು.
ಇವರಿಗೆಲ್ಲ ಯೋಗ್ಯತೆ ಇಲ್ಲ ಅಂತ ಬಿಜೆಪಿ ರಾಷ್ಟ್ರೀಯ ನಾಯಕರು ಕಪಾಳ ಮೋಕ್ಷ ಮಾಡಿದ್ದಾರೆ. ಬಿಜೆಪಿಯ ಈ ನಾಯಕರಿಗೆ ಸ್ವಾಭಿಮಾನ ಇದ್ದರೆ ರಾಜೀನಾಮೆ ಕೊಟ್ಟು ಹೊರ ಬರಬೇಕು. ಇಲ್ಲದೇ ಹೋದರೆ ಜನರೇ ಮುಂದಿನ ದಿನಗಳಲ್ಲಿ ನಿಮಗೆ ಕಪಾಳ ಮೋಕ್ಷ ಮಾಡುತ್ತಾರೆ ಎಂದು ಉಗ್ರಪ್ಪ ಕಿಡಿಕಾರಿದರು.