ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕ್ಯಾಬಿನೆಟ್ ಗುರುವಾರ ಬಿಹಾರ ಮತ್ತು ಆಂಧ್ರ ಪ್ರದೇಶದ 2 ರೈಲ್ವೆ ಯೋಜನೆಗಳಿಗೆ ಅನುಮೋದನೆ ನೀಡಿದೆ. ಆಂಧ್ರ ಪ್ರದೇಶದ ಅಮರಾವತಿ ಮತ್ತು ಉತ್ತರ ಬಿಹಾರದಿಂದ ಈಶಾನ್ಯ ರಾಜ್ಯಗಳೊಂದಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ.
ಅಮರಾವತಿ ರೈಲ್ವೆ ಯೋಜನೆಯು (Amaravati Railway Projects) 87 ಕಿಮೀ ರೈಲುಮಾರ್ಗ ನಿರ್ಮಿಸುವ ಯೋಜನೆಯಾಗಿದ್ದು, ಸುಮಾರು 2,245 ಕೋಟಿ ರೂ. ವೆಚ್ಚ ಆಗಲಿದೆ ಎಂದು ಅಂದಾಜಿಸಲಾಗಿದೆ. ಈ ಹೊಸ ರೈಲ್ವೆ ಯೋಜನೆಯು ಹೈದರಾಬಾದ್, ಚೆನ್ನೈ ಮತ್ತು ಕೋಲ್ಕತ್ತಾದಂತಹ ಪ್ರಮುಖ ನಗರಗಳಿಗೆ ನೇರ ರೈಲ್ವೆ ಸಂಪರ್ಕವನ್ನು ಕಲ್ಪಿಸುತ್ತದೆ. ಅಲ್ಲದೇ ಮಚಲಿಪಟ್ಟಣಂ, ಕೃಷ್ಣಪಟ್ಟಣಂ ಮತ್ತು ಕಾಕಿನಾಡ ಬಂದರುಗಳಿಗೂ ಸಂಪರ್ಕ ಕಲ್ಪಿಸುತ್ತದೆ. ಇದನ್ನೂ ಓದಿ: ಶಿವಮೊಗ್ಗ | ವಾಹನ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸ್‌ನನ್ನೇ ಬಾನೆಟ್ ಮೇಲೆ ಹೊತ್ತೋಯ್ದ ಕಾರು ಚಾಲಕ
2ನೇ ಯೋಜನೆಯು ಉತ್ತರ ಬಿಹಾರ (North Bihar) ಮತ್ತು ಈಶಾನ್ಯ ರಾಜ್ಯಗಳ ನಡುವಿನ ಸಂಪರ್ಕ ಹೆಚ್ಚಿಸುವ ಗುರಿ ಹೊಂದಿದೆ, ಇದು 256 ಕಿಮೀ ಉದ್ದದ ರೈಲು ಮಾರ್ಗ ನಿರ್ಮಿಸುವ ಯೋಜನೆಯಾಗಿದೆ. ಡಬಲ್ ಲೈನ್ ರೈಲು ಮಾರ್ಗ ಇದಾಗಿದ್ದು, 4,553 ಕೋಟಿ ರೂ. ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದೆ. ಈ ಮಾರ್ಗದಲ್ಲಿ ಸುಮಾರು 40 ಸೇತುವೆಗಳೂ ಇರಲಿವೆ. ಜೊತೆಗೆ ಪವಿತ್ರ ನಗರವಾದ ಅಯೋಧ್ಯೆಯನ್ನು ಸೀತಾಮರ್ಹಿಯೊಂದಿಗೆ ಸಂಪರ್ಕಿಸುತ್ತದೆ.
ಎರಡೂ ಯೋಜನೆಗಳಿಗೆ 6,798 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಪ್ರಧಾನಿ ಮೋದಿ ನೇತೃತ್ವದ ಕ್ಯಾಬಿನೆಟ್ ಸಮಿತಿ ಹಸಿರು ನಿಶಾನೆ ತೋರಿದೆ. ಇದನ್ನೂ ಓದಿ: ಮಹಾ ಚುನಾವಣೆ: ಅಜಿತ್ ಪವಾರ್ ಬಣಕ್ಕೆ ಸಿಕ್ತು ಗಡಿಯಾರ ಚಿಹ್ನೆ – ಸುಪ್ರೀಂ ಕೋರ್ಟ್ ಅನುಮತಿ
ಈ ಯೋಜನೆಯ ಅನುಕೂಲವೇನು?
ಸುಮಾರು 313 ಕಿಮೀ ರೈಲು ಮಾರ್ಗ ಸ್ಥಾಪಿಸುವ ಈ ಯೋಜನೆಯು 168 ಹಳ್ಳಿಗಳನ್ನು ಸಂಪರ್ಕಿಸುತ್ತವೆ. ಸುಮಾರು 12 ಲಕ್ಷ ಜನರಿಗೆ ಅನುಕೂಲ ಒದಗಿಸಲಿದೆ. ಕೃಷಿ ಉತ್ಪನ್ನಗಳು, ರಸಗೊಬ್ಬರ, ಕಲ್ಲಿದ್ದಲು, ಕಬ್ಬಿಣದ ಅದಿರು, ಉಕ್ಕು ಮತ್ತು ಸಿಮೆಂಟ್ ಮುಂತಾದ ಸರಕುಗಳನ್ನು ಸಾಗಾಟಕ್ಕೆ ಹೊಸ ಮಾರ್ಗ ಸಿಕ್ಕಂತಾಗುತ್ತದೆ. ಇದನ್ನೂ ಓದಿ: ಜಾತಿ ನಿಂದನೆ ಪ್ರಕರಣದಲ್ಲಿ 98 ಜನಕ್ಕೆ ಜೀವಾವಧಿ – ಕೊಪ್ಪಳ ಜಿಲ್ಲಾ ಕೋರ್ಟ್ ಐತಿಹಾಸಿಕ ತೀರ್ಪು!