411 ಕೋಟಿ ರೂ. ಅನವಾಲ ಏತ ನೀರಾವರಿ ಯೋಜನೆಗೆ ಸಂಪುಟ ಅನುಮೋದನೆ

Public TV
2 Min Read
Basavaraj Bommai murugesh r nirani

– ಕ್ಷೇತ್ರದ ಜನತೆಯ ದಶಕಗಳ ಕನಸು ನನಸು ಮಾಡಿದ ನಿರಾಣಿ
– 65,000 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ

ಬೆಂಗಳೂರು: ಬಾಗಲಕೋಟೆ ಜಿಲ್ಲೆ ಬೀಳಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಘಟಪ್ರಭಾ ಯೋಜನೆಯಡಿ 411.10 ಕೋಟಿ ರೂ. ಮೊತ್ತದ ಅನವಾಲ ಏತ ನೀರಾವರಿ ಯೋಜನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಘಟಪ್ರಭಾ ಯೋಜನೆಯಡಿ, ಅನವಾಲ ಏತ ನೀರಾವರಿಯಲ್ಲಿ 3.64 ಟಿಎಂಸಿ ನೀರಿನ ಅವಶ್ಯಕತೆಯಾಗಿದ್ದು, ಇದರ ಅನುಷ್ಠಾನದಿಂದ ಸಾವಿರಾರು ರೈತರಿಗೆ ನೀರಾವರಿ ಸೌಲಭ್ಯ ಸಿಗಲಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು.

murugesh r nirani

ನಿರಾಣಿ ಮನವಿಗೆ ಸ್ಪಂದನೆ:
ಈ ನೀರಾವರಿ ಯೋಜನೆ ಕ್ಷೇತ್ರದ ಜನತೆಯ ಬಹು ದಿನಗಳ ಬೇಡಿಕೆಯಾಗಿದ್ದು, ನನ್ನ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನೀರಾವರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಹೃತ್ಪೂರ್ವಕ ಧನ್ಯವಾದ ಅರ್ಪಿಸಲು ಬಯಸುತ್ತೇನೆ ಎಂದು ನಿರಾಣಿ ಹೇಳಿದ್ದಾರೆ.

ಡಾ. ನಂಜುಂಡಪ್ಪ ವರದಿಯ ಪ್ರಕಾರ ಬಾಗಲಕೋಟೆ ಜಿಲ್ಲೆಯ ಬೀಳಗಿ ವಿಧಾನಸಭಾ ಕ್ಷೇತ್ರವು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಕೃಷ್ಣಾ ನದಿಯ ಹಿನ್ನೀರಿನಲ್ಲಿ ಅತಿ ಹೆಚ್ಚು ಜಮೀನು ಹಾಗೂ ಗ್ರಾಮಗಳನ್ನು ಕಳೆದುಕೊಂಡ ಮುಳುಗಡೆ ಪ್ರದೇಶವಾಗಿರುತ್ತದೆ. ಹೀಗಾಗಿ ಅನವಾಲ ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಬೇಕೆಂದು ಸಚಿವ ನಿರಾಣಿ ಮನವಿ ಮಾಡಿದ್ದರು. ಇದನ್ನೂ ಓದಿ: ರಾಜ್ಯದಲ್ಲಿಂದು 2 ಸಾವಿರ ಮಂದಿಗೆ ಕೊರೊನಾ – ಎರಡೇ ದಿನಗಳಲ್ಲಿ 11 ಜೀವ ಬಲಿ

Murugesh Nirani 3

ಈ ಯೋಜನೆಯಡಿ ಘಟಪ್ರಭಾ ಬಲದಂಡೆ ಮುಖ್ಯ ಕಾಲುವೆಯು 199 ಕಿ.ಮೀ ಇದ್ದು, ಇದರಡಿ 16,9129 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಬಲದಂಡೆ ಮುಖ್ಯ ಕಾಲುವೆಯು 148 ಕಿ.ಮೀ ನಿಂದ 199 ಕಿ.ಮೀ ವರೆಗೆ ನೀರು ತಲುಪದ ಕಾರಣ ಸುಮಾರು 24,750.00 ಹೆಕ್ಟೇರ್ ಜಮೀನು ನೀರಾವರಿ ಸೌಲಭ್ಯ ವಂಚಿತವಾಗಿವೆ. ಈ ಯೋಜನೆಗೆ 3.64 ಟಿಎಂಸಿ ನೀರಿನ ಅವಶ್ಯಕತೆ ಇರುತ್ತದೆ ಎಂದು ಸಿಎಂಗೆ ಬರೆದ ಪತ್ರದಲ್ಲಿ ಸಚಿವ ನಿರಾಣಿ ಉಲ್ಲೇಖಿಸಿದ್ದರು.

ಯೋಜನೆ ವಿವರ:
ಈ ಯೋಜನೆಯಿಂದ ಬೀಳಗಿ ಮತ್ತು ಬಾದಾಮಿ ವಿಧಾನಸಭಾ ಕ್ಷೇತ್ರದ 24,750 ಹೆಕ್ಟೇರ್ ಪೈಕಿ ಸುಮಾರು 14,525.43 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಲಭಿಸಲಿದೆ. ಬಾಗಲಕೋಟೆ ತಾಲೂಕಿನಲ್ಲಿ ಬರುವ ದೇವನಾಳು ಗ್ರಾಮದ ಹತ್ತಿರ ಅನವಾಲ ಏತ ನೀರಾವರಿ ಯೋಜನೆ ಕಾರ್ಯಾರಂಭವಾಗಲಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಏನ್ ಬಿಚ್ಚಿಡುತ್ತಾರೋ ಬಿಚ್ಚಿಡಲಿ: ಸುಧಾಕರ್ ತಿರುಗೇಟು

Murugesh Nirani

ಕಳೆದ ವರ್ಷ ಜುಲೈ 6ರಂದು ನಡೆದ 84ನೇ ಅಂದಾಜು ಪರಿಶೀಲನಾ ಸಮಿತಿ ಸಭೆಯಲ್ಲಿ ಸಚಿವ ನಿರಾಣಿ ಅವರು ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಪ್ರಸ್ತಾವನೆಯನ್ನು ಮಂಡಿಸಿದ್ದರು. ಮಂಡಳಿಯ ಕೆಲವೊಂದು ಅಂಶಗಳನ್ನು ಅಳವಡಿಸಿಕೊಳ್ಳುವ ಷರತ್ತಿಗೊಳಪಡಿಸಿ ಅನುಮೋದನೆ ಪಡೆಯಲು ಶಿಫಾರಸು ಮಾಡಲಾಗಿತ್ತು.

2022ರ ಜನವರಿ 22 ರಂದು ನಡೆದ ಕರ್ನಾಟಕ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ 97ನೇ ಸಭೆಯಲ್ಲಿ 411.10 ಕೋಟಿ ರೂ. ಮೊತ್ತದ ಸದರಿ ಯೋಜನೆಯು ಎರಡು ಹಂತಗಳಲ್ಲಿ ಕೈಗೊಳ್ಳಲು ಅನುಮೋದನೆ ನೀಡಿತ್ತು. ಅನವಾಲ ಏತ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಎರಡು ಹಂತಗಳಲ್ಲಿ ಕೈಗೊಳ್ಳುವಂತೆ ಸೂಚಿಸಿ, ಇದಕ್ಕೆ ಆಡಳಿತಾತ್ಮಕವಾಗಿ ಅನುಮೋದನೆ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *