– ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
– ಕಾಂಗ್ರೆಸ್ ನಾಯಕರಿಗೆ ಸಿಎಂ ಎಚ್ಚರಿಕೆ
ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯದಲ್ಲೂ ಪ್ರತಿಭಟನೆ, ಮುಷ್ಕರಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದಿನಿಂದ ಮೂರು ದಿನಗಳ ಕಾಲ ಸೆಕ್ಷನ್ 144 ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೈಗೊಂಡಿರುವ ಭದ್ರತಾ ಕ್ರಮಗಳ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಮುಖ್ಯಮಂತ್ರಿಗಳು ಬೆಳ್ಳಂಬೆಳಗ್ಗೆ ಮಹತ್ವದ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು.
ಮುಖ್ಯಮಂತ್ರಿಗಳ ಡಾಲರ್ಸ್ ಕಾಲೋನಿ ನಿವಾಸದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್. ರಾಜು, ಗುಪ್ತಚರ ವಿಭಾಗದ ಎಡಿಜಿಪಿ ಕಮಲ್ ಪಂತ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪಾಲ್ಗೊಂಡಿದ್ದರು. ಸುಮಾರು ಒಂದು ಗಂಟೆ ಕಾಲ ನಡೆದ ಸಭೆಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
Advertisement
Advertisement
ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಿಎಂ ನೀಡಿದ ಸೂಚನೆಗಳು:
* ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿ ಕ್ರಮ ವಹಿಸಬೇಕು.
* ಪ್ರತಿಭಟನೆ ನಡೆಯುವ ಸ್ಥಳಗಳಲ್ಲಿ ಸೂಕ್ತ ಮತ್ತು ಹೆಚ್ಚು ಭದ್ರತೆ ಕೊಡಬೇಕು.
* ಪ್ರತಿಭಟನೆ ಹೆಸರಲ್ಲಿ ಶಾಂತಿ ಕದಡುವರ ಬಗ್ಗೆ ಎಚ್ಚರ ವಹಿಸಬೇಕು.
* ಅಂತಹವರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಬೇಕು.
* ಈಗಾಗಲೇ ಪೌರತ್ವದಿಂದ ಬೇರೆ ರಾಜ್ಯಗಳಲ್ಲಿ ಪ್ರತಿಭಟನೆ ಆಗ್ತಿದೆ. ನಮ್ಮ ರಾಜ್ಯದಲ್ಲಿ ಆ ರೀತಿಯ ವಾತಾವರಣ ಸೃಷ್ಟಿ ಆಗೋದು ಬೇಡ.
* ಈ ನಿಟ್ಟಿನಲ್ಲಿ ಜಾಗರೂಕತೆಯಿಂದ ಕ್ರಮ ವಹಿಸಬೇಕು.
* ಎಲ್ಲ ಜಿಲ್ಲೆಗಳಲ್ಲೂ ಕಟ್ಟೆಚ್ಚರ ವಹಿಸಬೇಕು.
* ಈ ಮೂರು ದಿನಗಳಲ್ಲಿ ಕಾನೂನು ಕ್ರಮಗಳ ಬಗ್ಗೆ ನಿತ್ಯ ಎರಡು ಬಾರಿ ವರದಿ ಕೊಡಬೇಕು.
Advertisement
ಸಿಎಂ ಅಭಯ: ಸಿಎಎ ಕಾಯ್ದೆ ವಿರೋಧಿಸುತ್ತಿರುವ ರಾಜ್ಯದ ಮುಸಲ್ಮಾನ ಸಮುದಾಯಕ್ಕೆ ಮುಖ್ಯಮಂತ್ರಿಗಳು ಅಭಯ ನೀಡಿದ್ದಾರೆ. ತಮ್ಮ ನಿವಾಸದ ಎದುರು ಮಾತಾಡಿದ ಮುಖ್ಯಮಂತ್ರಿಗಳು ಸಿಎಎ ಕಾಯ್ದೆಯಿಂದ ಮುಸ್ಲಿಮರಿಗೆ ಯಾವುದೇ ತರಹದ ಸಮಸ್ಯೆ ಆಗುವುದಿಲ್ಲ. ಮುಸ್ಲಿಮರು ಕಾಯ್ದೆಯಿಂದಾಗಿ ಆತಂಕ ಪಡುವ ಅಗತ್ಯ ಇಲ್ಲ. ರಾಜ್ಯದ ಮುಸ್ಲಿಮರ ರಕ್ಷಣೆ ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
Advertisement
ಈ ಮೂಲಕ ಸಿಎಂ, ಮುಸ್ಲಿಂ ಸಮುದಾಯದಲ್ಲಿ ಮನೆ ಮಾಡಿರುವ ಅನುಮಾನ, ಆತಂಕಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು. ಇದೇ ವೇಳೆ ಪ್ರತಿಭಟನೆ ಹಿಂದೆ ಕಾಂಗ್ರೆಸ್ ನಾಯಕರ ಕಿತಾಪತಿ, ಕೈವಾಡಗಳಿವೆ. ಕಾಂಗ್ರೆಸ್ ನಾಯಕರು ಪ್ರತಿಭಟನೆಗೆ ಪ್ರಚೋದನೆ ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿಗಳು ನೇರವಾಗಿ ಎಚ್ಚರಿಕೆ ನೀಡಿದರು.