ಕಾರವಾರ: ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆ ವಿರೋಧಿಸಿ ಭಟ್ಕಳದಲ್ಲಿ ತಂಜೀಂ ಸಂಸ್ಥೆ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದ್ದು, ಈ ಹಿನ್ನೆಲೆಯಲ್ಲಿ ಭಟ್ಕಳದಾದ್ಯಾಂತ ಇಂದು ಸಂಜೆಯಿಂದಲೇ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಜಿಲ್ಲೆಯಲ್ಲಿ 144 ಸೆಕ್ಷನ್ ಇದ್ದ ಕಾರಣ ಸಂಘಟನೆ ಕರೆದಿದ್ದ ಪ್ರತಿಭಟನೆಗೆ ಅವಕಾಶವನ್ನು ನಿರಾಕರಿಸಲಾಗಿತ್ತು. ಶನಿವಾರದಿಂದ ಕಲಂ 144 ಸಡಿಲಿಕೆ ಮಾಡಿದ್ದು ಸೋಮವಾರ ಪ್ರತಿಭಟನೆ ನಡೆಸಲು ಪೊಲೀಸ್ ಇಲಾಖೆ ಷರತ್ತುಬದ್ಧ ಪರವಾನಿಗೆ ನೀಡಿದೆ.
Advertisement
ಮಂಗಳೂರಿನಂತೆ ಅಹಿತಕರ ಘಟನೆ ಆಗದಂತೆ ಭಟ್ಕಳ ನಗರದ ಎಲ್ಲಾ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಬಿಗಿ ಪೋಲಿಸ್ ಬಂದೋಬಸ್ತ್ ಕಲ್ಪಿಸಿದೆ. ಆರು ಡಿ.ಆರ್, ಮೂರು ಕೆ.ಎಸ್.ಆರ್.ಪಿ ತುಕಡಿಗಳನ್ನು ನಿಯೋಜನೆ ಮಾಡಿದ್ದು, 500 ಪೊಲೀಸರನ್ನು ನಗರದಾದ್ಯಂತ ಇಂದು ಸಂಜೆಯಿಂದ ನಿಯೋಜನೆ ಮಾಡಲಾಗಿದೆ. ಪ್ರತಿಭಟನೆಯು ಭಟ್ಕಳ ನಗರದ ಅಂಜಮನ್ ಗ್ರೌಂಡ್ ನಲ್ಲಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಗ್ರೌಂಡ್ ಸುತ್ತಮುತ್ತ ಕಟ್ಟೆಚ್ಚರ ವಹಿಸಲಾಗಿದೆ. ಪ್ರತಿಭಟನೆಯು ಕೇವಲ ಭಟ್ಕಳದಲ್ಲಿ ಅಲ್ಲದೇ ಜಿಲ್ಲೆಯ ದಾಂಡೇಲಿಯಲ್ಲಿ ಸಹ ನಡೆಯಲಿದೆ. ದಾಂಡೇಲಿ ಸಂವಿಧಾನ ಬಚಾವ್ ಆಂದೋಲನ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.
Advertisement
Advertisement
ಪ್ರತಿಭಟನೆಗೆ ಅವಕಾಶ ನೀಡುವಂತೆ ತಂಜೀಂ ಸಂಘಟನೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಕೋರಿತ್ತು. ಒಂದು ವೇಳೆ ಪರವಾನಗಿ ದೊರೆಯದಿದ್ದರೂ ಭಟ್ಕಳದಲ್ಲಿ ಸೋಮವಾರ ಪ್ರತಿಭಟನೆ ನಡೆಸುತ್ತೇವೆ ಎಂದು ತಂಜೀಂ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಭಟ್ಕಳಕ್ಕೆ ಭೇಟಿ ನೀಡಿ ತಂಜಿಂ ಸಂಘಟನೆಗೆ ಷರತ್ತುಬದ್ಧ ಅನುಮತಿ ನೀಡಿದ್ದು ಒಂದು ವೇಳೆ ಅಹಿತಕರ ಘಟನೆ ನಡೆದರೆ ಸಂಘಟನೆಯೇ ಹೊಣೆ ಎಂದು ಷರತ್ತು ವಿಧಿಸಿದ್ದಾರೆ.