– ಸಿಕ್ಕ ವಾಹನಗಳಲ್ಲೇ ಪ್ರತಿಭಟನಾಕಾರರನ್ನು ತುಂಬಿದ ಪೊಲೀಸರು
– ಖಾಸಗಿ ಬಸ್, ಆಟೋ, ಟಿಟಿ ವಾಹನಗಳ ಮೂಲಕ ಸ್ಥಳಾಂತರ
ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕೆಲವು ದಿನಗಳಿಂದ ದೇಶಾದ್ಯಂತ ನಡೆಯುತ್ತಿದ್ದ ಪ್ರತಿಭಟನೆ ಇಂದು ಸಿಲಿಕಾನ್ ಸಿಟಿಗೂ ವ್ಯಾಪಿಸಿದೆ. ನಗರದ ಟೌನ್ ಹಾಲ್ ಬಳಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಅಲ್ಲದೆ ಸಿಕ್ಕ ಸಿಕ್ಕ ವಾಹನಗಳಲ್ಲೇ ಪ್ರತಿಭಟನಾಕಾರರನ್ನು ಪೊಲೀಸರು ತುಂಬಿ ವಶಕ್ಕೆ ಪಡೆಯುತ್ತಿದ್ದಾರೆ.
ಪ್ರತಿಭಟನೆ ನಡೆಯುವ ಮುನ್ಸೂಚನೆ ಇದ್ದಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸರು 144 ಸೆಕ್ಷನ್ ಜಾರಿ ಮಾಡಿದ್ದರು. ಆದರೂ ಸಹ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಇದೀಗ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನಾಕಾರರ ಮೇಲೆ ಲಘು ಲಾಠಿ ಪ್ರಹಾರ ನಡೆಸಿ, ವಶಕ್ಕೆ ಪಡೆಯುತ್ತಿದ್ದಾರೆ.
Advertisement
Advertisement
ಪೊಲೀಸ್ ವಾಹನ, ಬಿಎಂಟಿಸಿ ಬಸ್ ಸಾಕಾಗದೆ, ಸಿಕ್ಕ ಸಿಕ್ಕ ಖಾಸಗಿ ವಾಹನಗಳನ್ನೂ ಬಳಸಿ ಪ್ರತಿಭಟನಾಕಾರರನ್ನು ಸಾಗಿಸುತ್ತಿದ್ದು, ಖಾಸಗಿ ಬಸ್, ಆಟೋ, ಟಿಟಿ ವಾಹನಗಳು ಸೇರಿದಂತೆ ಇತೆ ವಾಹನಗಳಲ್ಲಿ ಸಾಗಿಸುತ್ತಿದ್ದಾರೆ.
Advertisement
ಪ್ರತಿಭಟನಾಕಾರರು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಈ ವೇಳೆ ಬಿಎಂಟಿಸಿ ಬಸ್ಸಿಗೆ ಪ್ರತಿಭಟನಾಕಾರರು ಅಡ್ಡ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿ, ಕರಪತ್ರಗಳನ್ನು ಹಂಚುತ್ತಿದ್ದಾರೆ. ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸುತ್ತಿದ್ದಾರೆ.
Advertisement
ಈ ವೇಳೆ ಪ್ರತಿಭಟನಾಕಾರಾಗಿ ಆಗಮಿಸಿದ್ದ ರಾಜೀವ್ ಗೌಡ ಮಾತನಾಡಿ, ಈ ಕುರಿತು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದೇವೆ. ಕಮೀಷನರ್ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದಿಂದಲೂ ವಿದ್ಯಾರ್ಥಿಗಳ ಗುಂಪು ಆಗಮಿಸಿದ್ದು, ಈ ವೇಳೆ ಪೊಲೀಸರು ಮನವೊಲಿಸಲು ಯತ್ನಿಸಿದ್ದಾರೆ. ಇದ್ಯಾವುದಕ್ಕೂ ಒಪ್ಪದ ವಿದ್ಯಾರ್ಥಿಗಳು ಧರಣಿ ಮಾಡಿಯೇ ಸಿದ್ಧ ಎಂದು ಪಟ್ಟು ಹಿಡಿದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋಡ್, ಪ್ರತಿಭಟನೆ ಸ್ಥಳಗಳಾದ ಟೌನ್ ಹಾಲ್, ಮೈಸೂರು ಬ್ಯಾಂಕ್ ವೃತ್ತದ ಬಳಿ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ನಿನ್ನೆ ಮಧ್ಯಾಹ್ನ ಕೇಂದ್ರ ವಿಭಾಗಕ್ಕೆ ಪರ-ವಿರೋಧ ಪ್ರತಿಭಟನೆಗೆ ಸಾಕಷ್ಟು ಅರ್ಜಿ ಬಂದಿತ್ತು. ಇದನ್ನು ಆಧರಿಸಿಯೇ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಇದನ್ನು ತಪ್ಪಿ ನಡೆದರೆ ಸೂಕ್ತ ಕ್ರಮಕ್ಕೆ ಪೋಲಿಸರು ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.