ಸಿಎಎ ಜಾರಿಯಿಂದ ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆಯಾಗಲ್ಲ: ಬಿ.ವೈ.ರಾಘವೇಂದ್ರ

Public TV
2 Min Read
smg bjp caa

ಶಿವಮೊಗ್ಗ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ನಾಗರಿಕರಲ್ಲಿ ಗೊಂದಲವನ್ನು ಉಂಟು ಮಾಡುತ್ತಿವೆ. ಈ ಕಾಯ್ದೆ ಜಾರಿಯಿಂದ ಅಲ್ಪಸಂಖ್ಯಾತರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗುವುದಿಲ್ಲ. ಎಲ್ಲಾ ಧರ್ಮಿಯರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವಂತಹ ಪ್ರಯತ್ನ ಇದಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.

ಇಂದು ನಗರದ ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೌರತ್ವ ತಿದ್ದುಪಡಿ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದ್ದಾರೆ. ಡಿ. 11, 2019ರ ದಿನವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾಗಿದೆ. ಲೋಕಸಭೆ ಹಾಗೂ ರಾಜ್ಯಸಭೆ ಎರಡಲ್ಲೂ ಸಹ ಈ ಕಾಯ್ದೆ ಜಾರಿಯಾಗಿದ್ದು, ಇದು ದೇಶದ ನಾಗರಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಜಾರಿಯಾಗಿರುವಂತಹ ಕಾನೂನಾಗಿದೆ ಎಂದರು

ಲೋಕಸಭೆಯ 543 ಸದಸ್ಯರ ಬಲದಲ್ಲಿ ಎನ್‍ಡಿಎ ಒಕ್ಕೂಟ 336 ಸದಸ್ಯರನ್ನು ಹೊಂದಿದೆ. ಇದರಲ್ಲಿ ನಮ್ಮ ಪಕ್ಷ 303 ಸದಸ್ಯರನ್ನು ಹೊಂದಿದ್ದು, ಕಾಯ್ದೆ ಮತಕ್ಕೆ ಹಾಕಿದಾಗ ಸದನದಲ್ಲಿದ್ದ ಸದಸ್ಯರ ಪೈಕಿ ಕಾಯ್ದೆಯ ಪರವಾಗಿ 311 ಮತಗಳು ಬಂದಿದ್ದು, ವಿರುದ್ಧವಾಗಿ ಕೇವಲ 40 ಮತಗಳು ಲಭಿಸಿದವು. ರಾಜ್ಯಸಭೆಯಲ್ಲಿ ನಮ್ಮ ಪಕ್ಷಕ್ಕೆ ಬಹುಮತ ಇಲ್ಲದಿದ್ದರೂ ಸಹ ಕಾಯ್ದೆಯ ಪರವಾಗಿ 125 ಮತಗಳು ಲಭಿಸಿವೆ. ವಿರುದ್ಧವಾಗಿ ಕೇವಲ 105 ಮತಗಳು ಬಂದವು. ಇದು ಕಾಯ್ದೆಯ ಬಗ್ಗೆ ಇರುವಂತಹ ಜನಾಭಿಪ್ರಾಯವನ್ನು ತಿಳಿಸುತ್ತದೆ ಎಂದಿದ್ದಾರೆ.

ಇನ್ನು ಈ ಬಗ್ಗೆ ಕೆಲವು ಕಾಣದ ಕೈಗಳು ಕಾಯ್ದೆ ವಿರುದ್ಧ ಅಪಪ್ರಚಾರ ಮಾಡುತ್ತಾ, ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡುತ್ತಿವೆ. ಕೆಲವು ರಾಜಕೀಯ ವ್ಯಕ್ತಿಗಳು ಸಹ ಇದಕ್ಕೆ ಬೆಂಬಲ ಸೂಚಿಸುತ್ತಿರುವುದು ದುರಾದೃಷ್ಟಕರ ಎಂದು ಸಂಸದ ಬಿ.ವೈ. ರಾಘವೇಂದ್ರ ಬೇಸರ ವ್ಯಕ್ತಪಡಿಸಿದರು.

ಜನಜಾಗೃತಿ ಅಭಿಯಾನ: ಸಮಾಜದಲ್ಲಿನ ಶಾಂತಿಯನ್ನು ಕದಡುವ ದೃಷ್ಟಿಯಿಂದ ಜನರಿಗೆ ಕಾಯ್ದೆ ಬಗ್ಗೆ ತಪ್ಪು ತಿಳುವಳಿಕೆ ನೀಡುತ್ತಿರುವವರ ವಿರುದ್ಧವಾಗಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜ.1 ರಿಂದಲೇ ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜನಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಜ. 1 ರಿಂದ ಜ.5 ರವರೆಗೆ ಮನೆ ಮನೆ ಸಂಪರ್ಕ, ಜ.6 ರಿಂದ ಜ.8 ರವರೆಗೆ ಚಹಾ ಕೂಟ ಹಾಗೂ ಚರ್ಚೆ, ಜ. 9 ರಿಂದ 10 ರವರೆಗೆ ಸಂವಾದ, ಜ. 11 ಮತ್ತು ಜ. 12 ರಂದು ಪತ್ರ ಚಳವಳಿ, ಸಹಿ ಸಂಗ್ರಹ ಕಾರ್ಯಕ್ರಮಗಳು ನಡೆಯಲಿವೆ. ಜ. 13 ರಿಂದ ಜ. 15 ರವರೆಗೆ ಸಮಾವೇಶಗಳು, ಸಾರ್ವಜನಿಕ ಸಭೆಗಳು ನಿರಂತರವಾಗಿ ನಡೆಯಲಿದ್ದು, ಮನೆ ಮನೆ ಭೇಟಿಯ ಸಂದರ್ಭದಲ್ಲಿ ಕಾಯ್ದೆ ಕುರಿತು ಎಲ್ಲಾ ವರ್ಗದ ಜನ ಸಾಮಾನ್ಯರಿಗೆ ತಿಳಿಸಲಾಗುವುದೆಂದು ಹೇಳಿದ್ದಾರೆ. ಅದರಂತೆ, ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ, ನೇತೃತ್ವದ ತಂಡ ಕಾರ್ಯ ನಿರ್ವಹಿಸಲಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ.

ಕಾರ್ಯಾಗಾರದಲ್ಲಿ, ವಿಧಾನಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ, ಮಾಜಿ ಎಂ.ಎಲ್.ಸಿ. ಭಾನುಪ್ರಕಾಶ್, ಗಿರೀಶ್ ಪಟೇಲ್, ಗಣೇಶ್, ಕೆ.ಜಿ. ನಾಯಕ್ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *