ಚಿಕ್ಕಮಗಳೂರು: ಹೊಟ್ಟೆಯೊಳಗೆ ವಿಷ ಇಟ್ಕೊಂಡಿರೋ ಎರಡು ಪಕ್ಷ ಒಟ್ಟಾಗಿ ಅಧಿಕಾರ ಮಾಡಿದ್ರೆ ಹೀಗೆ ಆಗುತ್ತೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮೈತ್ರಿ ಮಾಡಿಕೊಂಡು ಈಗ ಬಿಜೆಪಿಯನ್ನೇ ದೋಷಿಸುತ್ತಿದ್ದಾರೆ ಅಂತ ಶಾಸಕ ಸಿ.ಟಿ ರವಿ ಮೈತ್ರಿ ಸರ್ಕಾರದ ಮೇಲೆ ಕಿಡಿ ಕಾರಿದ್ದಾರೆ.
ಜಿಲ್ಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಮೈತ್ರಿ ಸರ್ಕಾರ ಜನ ಬಯಸಿದ್ದಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ದೇವೇಗೌಡರು ಸಿದ್ದರಾಮಯ್ಯ ಅವರನ್ನು ನೀಚ ಮುಖ್ಯಮಂತ್ರಿ ಅಂತ ಹೇಳಿದ್ದರು. ನಾನು ಎಂದಿಗೂ ಸಿದ್ದರಾಮಯ್ಯಗೆ ಆ ರೀತಿ ಹೇಳುವುದಿಲ್ಲ. ರಾಜಕೀಯವಾಗಿ ವಿರೋಧ ಇರಬಹುದು ಆದ್ರೆ ವೈಯಕ್ತಿಕವಾಗಿ ಇಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಇರಡು ಪಕ್ಷ ಮೈತ್ರಿ ಮಾಡಿಕೊಂಡಿದೆ ಅಷ್ಟೇ. ಹೊಟ್ಟೆಯೊಳಗೆ ವಿಷ ಇಟ್ಕೊಂಡು ಅಧಿಕಾರ ಮಾಡಿದ್ರೆ ಹೀಗೆ ಆಗುತ್ತದೆ. ಅವರವರ ಒಳ ಮುನಿಸುಗಳನ್ನು ಮುಚ್ಚಿಟ್ಟು ಎಲ್ಲದಕ್ಕೂ ಬಿಜೆಪಿ ಅವರನ್ನು ದೂರುತ್ತಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಮೈತ್ರಿ ಸರ್ಕಾರ ಬಂದ ಮೇಲೆ ನಾನೊಬ್ಬ ಸಾಂದರ್ಭಿಕ ಶಿಶು, ಅಸಹಾಯಕತೆಯಲ್ಲಿದ್ದೇನೆ, ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೇನೆ, ಕ್ಲರ್ಕ್‍ಗಿಂತ ಕಡೆಯಾಗಿದ್ದೇನೆ ಅಂತ ಸಿಎಂ ಕುಮಾರಸ್ವಾಮಿಯವರೇ ಹೇಳಿದ್ದರು. ಇತೀಚೆಗೆ ಎ.ಟಿ ರಾಮಸ್ವಾಮಿ ಅವರು ಕಾಂಗ್ರೆಸ್ ಲಕ್ಷ್ಮಣ ರೇಖೆ ದಾಟಿದ್ರೆ ಹುಷಾರ್ ಅಂತ ಹೇಳಿದ್ದರು. ರೇವಣ್ಣ ಅವರು ನಮ್ಮ ಸಚಿವ ಖಾತೆ ಬಗ್ಗೆ ಒತ್ತಡ ಹೇರೋಕೆ ಅವರ್ಯಾರು ಅಂತ ಹೇಳಿಕೆ ನೀಡಿದ್ದರು. ರಾಜಕೀಯ ಹೇಗೆ ಮಾಡಬೇಕು ಗೊತ್ತಿದೆ ಅದನ್ನ ಜೆಡಿಎಸ್‍ನಿಂದ ಕಲಿಯಬೇಕಾಗಿಲ್ಲ ಅಂತ ದಿನೇಶ್ ಗುಂಡುರಾವ್ ಹೇಳಿದ್ದರು. ಇದ್ಯಾವುದನ್ನು ನಾವು ಹೇಳಿದ್ದಲ್ಲ ಮೈತ್ರಿ ನಾಯಕರೇ ಮಾತನಾಡಿದ್ದು. ಇಷ್ಟೆಲ್ಲ ಪರಸ್ಪರ ವಿರೋಧ ಇಟ್ಟುಕೊಂಡಿರುವವರು ಹೇಗೆ ಉತ್ತಮ ಸರ್ಕಾರ ನಡೆಸ್ತಾರೆ ಅಂತ ಪ್ರಶ್ನಿಸಿದರು.
Advertisement
Advertisement
ಸರ್ಕಾರ ಉರುಳಿಸುವ ಕೆಲಸ ನಾವು ಮಾಡ್ತಿಲ್ಲ. ಅವರೇ ಮಾಡಿಕೊಳ್ಳುತ್ತಿದ್ದಾರೆ. ನಾವು ಸರ್ಕಾರ ಬೀಳಲಿ ಅಂತನೇ ಕಾಯುತ್ತಿದ್ದೇವೆ. ಅದನ್ನೆ ಜನರು ಬಯಸುತ್ತಿದ್ದಾರೆ. ಶಾಸಕರು ಸಭೆಗಳಿಗೆ ಹೋಗಿಲ್ಲ ಅಂದರೆ ನಮ್ಮನ್ನ ಯಾಕೆ ದೂರುವುದು. ಬಿಜೆಪಿಯವರು ಗುರುಗ್ರಾಮಕ್ಕೆ ಹೋದರೆ ಮೈತ್ರಿ ನಾಯಕರಿಗೆ ಭಯ ಯಾಕೆ? ಅವರಲ್ಲಿನ ಬಂಡಾಯ ಶಮನ ಮಾಡುವುದು ನಮ್ಮ ಕೆಲಸವಲ್ಲ. ನಾವು ಕಾಂಗ್ರೆಸ್ ಹೈಕಮಾಂಡಲ್ಲ. ಸರ್ಕಾರ ಬಿದ್ರೆ ಜನರಿಗೂ ಖುಷಿಯಾಗುತ್ತೆ ಜೊತೆಗೆ ನಮಗೂ ಖುಷಿಯಾಗುತ್ತೆ ಎಂದರು.
ಬಳಿಕ ಬಿಜೆಪಿ ಶಾಸಕರು ಮೈತ್ರಿ ನಾಯಕರ ಜೊತೆ ಸೇರುವ ಕುರಿತಾಗಿ ಪ್ರತಿಕ್ರಿಯಿಸಿ, ಮೈತ್ರಿ ನಾಯಕರಿಗೆ ಅವರ ಶಾಸಕರನ್ನೇ ಉಳಿಸಿಕೊಳ್ಳಲು ಆಗುತ್ತಿಲ್ಲ. ಮತ್ತೆ ನಮ್ಮ ಶಾಸಕರ ಮೇಲೆ ಹೇಗೆ ಕೈಹಾಕುತ್ತಾರೆ. ಮೈತ್ರಿ ಸರ್ಕಾರ 7 ತಿಂಗಳುಗಳಲ್ಲಿ ಮಾಡಿರುವ ಒಳ್ಳೆ ಕೆಲಸಗಳನ್ನು ಪಟ್ಟಿ ಮಾಡಿಸಿ. ಜಗಳ ಮಾಡುವುದನ್ನು ಬಿಟ್ಟರೆ ಏನೂ ಕೆಲಸ ಮಾಡಿಲ್ಲ ಅಂತ ಸಿ.ಟಿ ರವಿ ವ್ಯಂಗ್ಯವಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv