ಪ್ರಾಮಾಣಿಕವಾಗಿ ದುಡಿಯುವ ಎತ್ತುಗಳು ಐಟಿ ದಾಳಿಗೆ ಹೆದರಲ್ಲ: ಸಿಎಂಗೆ ಸಿಟಿ ರವಿ ಟಾಂಗ್

Public TV
2 Min Read
ct ravi

ಬೆಂಗಳೂರು: ಮಂಡ್ಯ ಚುನಾವಣೆಯಲ್ಲಿ ಸದ್ಯ ಜೋರಾಗಿ ಸದ್ದು ಮಾಡುತ್ತಿರುವ ‘ಎತ್ತು’ಗಳ ವಿಚಾರವನ್ನು ಪ್ರಸ್ತಾಪಿಸಿ ಶಾಸಕ ಸಿಟಿ ರವಿ ಅವರು ಐಟಿ ದಾಳಿ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ದೂರಿದ ಸಿಎಂಗೆ ಟಾಂಗ್ ಕೊಟ್ಟಿದ್ದಾರೆ.

ಸಿಟಿ ರವಿ “ಪ್ರಾಮಾಣಿಕವಾಗಿ ದುಡಿಯುವ ಎತ್ತುಗಳು ಎಂದಿಗೂ ಐಟಿ ದಾಳಿಗೆ ಹೆದರುವುದಿಲ್ಲ. ಕದಿಯುವ ಎತ್ತುಗಳು ಮಾತ್ರ ಐಟಿ ದಾಳಿಗೆ ಹೆದರುತ್ತವೆ” ಎಂದು ಟ್ವೀಟ್ ಮಾಡುವ ಮೂಲಕ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ರಾಮನಗರದಲ್ಲಿ ಮಾತನಾಡಿದ್ದ ಸಿಎಂ, ಜನರು ದುಡಿಯುವ ಎತ್ತುಗಳನ್ನು ಉಳಿಸಬೇಕು. ಮೇವು ಹಾಕುವುದು ನಿಮ್ಮ ಕರ್ತವ್ಯ. ಈಗ ಹಲವಾರು ಎತ್ತುಗಳು ಬರುತ್ತೆ ಎಂದು ಹೇಳುತ್ತಾರೆ. ಆದರೆ ಆ ಎತ್ತುಗಳಿಗೆ ಹೊಲ ಉಳುವುದಕ್ಕೆ ಬರುವುದಿಲ್ಲ. ಕಳ್ಳ ಎತ್ತುಗಳು. ನೀವು ಹಾಕಿರುವ ಬೆಳೆಯನ್ನು ತಿಂದುಕೊಂಡು ಹೋಗಲು ಬರುತ್ತಿವೆ. ದುಡಿಯುವ ಎತ್ತುಗಳು ಯಾವುದು ಕಳ್ಳ ಎತ್ತುಗಳ ಯಾವುದು ಎನ್ನುವುದು ನೀವೇ ಯೋಚನೆ ಮಾಡಿ. ಈಗ ನಿಮ್ಮ ಅಭಿವೃದ್ಧಿಗೆ ನಾವು ಒಂದಾಗಿದ್ದೇವೆ. ಇಲ್ಲಿ ಯಾವುದೇ ರಾಜಕೀಯ ಇಲ್ಲ ಹೇಳಿ ದರ್ಶನ್ ಮತ್ತು ಯಶ್ ಅವರಿಗೆ ಟಾಂಗ್ ಕೊಟ್ಟಿದ್ದರು. ಸಿಟಿ ರವಿ ಅವರು ಸಿಎಂ ಅವರು ನೀಡಿದ್ದ ಹೇಳಿಕೆಯನ್ನು ಬಳಸಿಕೊಂಡು ಟಾಂಗ್ ನೀಡಿದ್ದಾರೆ.

ct ravi

ಮಾಜಿ ಸಿಎಂಗೂ ಟಾಂಗ್: ಸಿಎಂ ಸಿದ್ದರಾಮಯ್ಯ ಕೂಡ ಐಟಿ ದಾಳಿ ಬಗ್ಗೆ ತಮ್ಮ ಟ್ವಿಟ್ಟರಿನಲ್ಲಿ, ಈಗಾಗಲೇ ಹೇಳಿದಂತೆ, ಹೋರಾಟವು ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರದ ನಡುವೆ ಇದೆ. ವಿರೋಧ ಪಕ್ಷದ ನಾಯಕರ ಮೇಲೆ ಯಾವುದೇ ಐಟಿ ದಾಳಿ ನಡೆದಿಲ್ಲ. ಚುನಾವಣಾ ಸಂದರ್ಭದಲ್ಲಿ ನಮ್ಮ ಬೆಂಬಲಿಗರನ್ನು ಹೆದರಿಸಲು ಪ್ರಯತ್ನ ನಡೆಸಲಾಗುತ್ತದೆ ಎಂದು ಟ್ವೀಟ್ ಮಾಡಿದ್ದರು.

ಈ ಟ್ವೀಟ್‍ಗೆ ಸಿ.ಟಿ ರವಿ, “ಆದಾಯ ತೆರಿಗೆ ಇಲಾಖೆಯನ್ನು ‘ಸರ್ವಾಧಿಕಾರಿ ನೆಹರು’ ಸೃಷ್ಟಿ ಮಾಡಿದ್ದು. ಐಟಿ ದಾಳಿ ಮೂಲಕ ಎಲ್ಲರನ್ನು ಹೆದರಿಸುತ್ತಿರುವುದಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ನೆಹರು ಅವರನ್ನು ದೂಷಿಸಬೇಕು” ಎಂದು ಬರೆದು ರೀ-ಟ್ವೀಟ್ ಮಾಡಿದ್ದಾರೆ.

‘ಮಿಶನ್ ಶಕ್ತಿ’ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು, ಮೋದಿಗೆ ಕ್ರೆಡಿಟ್ ನೀಡುವ ಅಗತ್ಯವಿಲ್ಲ. ಇಸ್ರೋವನ್ನು ಸ್ಥಾಪನೆ ಮಾಡಿದ್ದು ನೆಹರು ಎಂದು ಹೇಳಿ ತಿರುಗೇಟು ನೀಡಿದ್ದರು. ಈ ವಿಚಾರವನ್ನೇ ಸಿಟಿ ರವಿ ಪ್ರಸ್ತಾಪ ಮಾಡಿ ಟಾಂಗ್ ಕೊಟ್ಟಿದ್ದಾರೆ.

ಬಿಜೆಪಿ ಟಾಂಗ್: ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಆದಾಯ ತೆರಿಗೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಬಿಜೆಪಿ, ರಾಜಕೀಯ ಮತ್ತು ಸಿದ್ಧಾಂತದಲ್ಲಿ ಬೇರೆ ಬೇರೆಯಾಗಿದ್ದರು ಭ್ರಷ್ಟಾಚಾರದಲ್ಲಿ ಒಂದಾಗುವುದು ಮಹಾಘಟಬಂದನ ಗುಣಲಕ್ಷ್ಮಣ. ಈಗ ಇದು ಆದಾಯ ತೆರಿಗೆ ಕಚೇರಿ ಮುಂಭಾಗ ನಿಜವಾಗಿದೆ ಎಂದು ಬರೆದು ಜೆಡಿಎಸ್ ಕಾಂಗ್ರೆಸ್ ಚೋರ್‍ಹೇ ಎಂದು ಹ್ಯಾಶ್ ಟ್ಯಾಗ್ ಹಾಕಿ ಕರ್ನಾಟಕ ಬಿಜೆಪಿ ಟಾಂಗ್ ಕೊಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *