ಬೆಂಗಳೂರು : ಸಿ.ಟಿ.ರವಿ (C.T Ravi) ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ನಡುವಿನ ಪ್ರಕರಣವನ್ನು ವಿಧಾನ ಪರಿಷತ್‌ನ ಎಥಿಕ್ಸ್ ಕಮಿಟಿಗೆ ಕೊಡಲಾಗಿದೆ ಎಂದು ಸಭಾಪತಿ ಬಸವರಾಜ್ ಹೊರಟ್ಟಿ (Bsavaraj Horatti) ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿ.ಟಿ ರವಿ – ಲಕ್ಷ್ಮಿ ಹೆಬ್ಬಾಳ್ಕರ್ ಗಲಾಟೆ ಕೇಸ್, ಈಗಾಗಲೇ ಅಂತ್ಯ ಆಗಿದೆ. ಬೆಳಗಾವಿಯಲ್ಲೇ ನಾನು ಅದಕ್ಕೆ ರೂಲಿಂಗ್ ಕೊಟ್ಟಿದ್ದೆ. ಆದರೆ ಇಬ್ಬರೂ ಮತ್ತೆ ದೂರು ಕೊಟ್ಟಿದ್ದಾರೆ. ಇದರ ಮಧ್ಯೆ ಇಬ್ಬರಿಗೂ ಸಂಧಾನ ಮಾಡೋ ಕೆಲಸಕ್ಕೆ ಮುಂದಾಗಿದ್ದೆ. ಆದರೆ ಇದಕ್ಕೆ ಯಾರು ಒಪ್ಪಿಲ್ಲ. ಹೀಗಾಗಿ ಪ್ರಕರಣವನ್ನ ಎಥಿಕ್ಸ್ ಕಮಿಟಿಗೆ ನೀಡಿದ್ದೇನೆ. ಎಥಿಕ್ಸ್ ಕಮಿಟಿ ವರದಿ ಕೊಟ್ಟ ಮೇಲೆ ಮುಂದಿನ ತೀರ್ಮಾನ ಮಾಡುತ್ತೇನೆ. ಒಂದು ತಿಂಗಳಲ್ಲಿ ವರದಿ ಕೊಡಲು ಹೇಳಿದ್ದೇನೆ. ಈ ವಿಷಯ ಸದನದಲ್ಲಿ ಚರ್ಚೆ ಆಗುವುದಿಲ್ಲ. ಎಥಿಕ್ಸ್ ಕಮಿಟಿಯಲ್ಲಿ ಸಿ.ಟಿ ರವಿ ಇದ್ದರೂ, ಈಗ ಅವರದ್ದೇ ಕೇಸ್ ಬಂದಿರೋದ್ರೀಂದ ಅವರನ್ನು ಎಥಿಕ್ಸ್ ಕಮಿಟಿಯಿಂದ ಕೈ ಬಿಡಲಾಗಿದೆ ಎಂದು ತಿಳಿಸಿದ್ದಾರೆ.
ಸದನದಲ್ಲಿ ಮುಗಿದದ್ದನ್ನ ಅಲ್ಲೇ ಮುಗಿಸಬೇಕಿತ್ತು. ಸದನ ನಡೆದಾಗ ನಡೆದಿದ್ದರೆ ಹೀಗೆ ಆಗ್ತಿರಲಿಲ್ಲ. ಸದನ ನಡಯದೇ ಇದ್ದಾಗ ಇದು ನಡೆದಿರೋದಕ್ಕೆ ಇಷ್ಟು ದೊಡ್ಡದು ಆಗಿದೆ. ಹೀಗಾಗಿ ಎಥಿಕ್ಸ್ ಕಮಿಟಿಗೆ ಕೊಡಲಾಗಿದೆ. ಎಥಿಕ್ಸ್ ಕಮಿಟಿ ವರದಿ ಕೊಡಲಿ ನೋಡೋಣ. ಎಥಿಕ್ಸ್ ಕಮಿಟಿಯಲ್ಲಿಯೇ 99% ಸಮಸ್ಯೆ ಪರಿಹಾರ ಆಗೋ ವಿಶ್ವಾಸ ಇದೆ. ಇಲ್ಲದೇ ಹೋದ್ರೆ ಎಥಿಕ್ಸ್ ಕಮಿಟಿ ವರದಿಯನ್ನು ಅಧಿವೇಶನದಲ್ಲಿ ಮಂಡನೆ ಮಾಡ್ತೀವಿ ಎಂದು ತಿಳಿಸಿದ್ದಾರೆ.