ಚಿಕ್ಕಮಗಳೂರು: ಸಚಿವ ಸಿ.ಟಿ.ರವಿ ನೋಡಿ ನನಗೆ ಹೊಟ್ಟೆ ಕಿಚ್ಚು ಬಂದಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ. ಚಿಕ್ಕಮಗಳೂರಿನ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ವಿವಿಧ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಡಿಸಿಎಂ ಈ ಮಾತನಾಡಿದ್ದಾರೆ.
ನಾನು ಸಮಾಜ ಕಲ್ಯಾಣ ಸಚಿವನಾಗಿ ನನ್ನ ಜಿಲ್ಲೆಗೆ ಇಷ್ಟೊಂದು ಹಣ ಅನುದಾನ ತೆಗೆದುಕೊಂಡಿಲ್ಲ, ಆದರೆ ಸಿ.ಟಿ ರವಿ ಅವರು ಜಿಲ್ಲೆಯ ಅಭಿವೃದ್ಧಿಗೆ 959 ಕೋಟಿ ರೂ. ಹಣ ಅನುದಾನ ತಂದಿದ್ದಾರೆ. ನನಗೆ ಅವರನ್ನ ನೋಡಿ ಹೊಟ್ಟೆ ಕಿಚ್ಚು ಬಂದಿದೆ ಎಂದು ಗೋವಿಂದ ಕಾರಜೋಳ ಅವರು ಹೇಳಿದರು.
ಇಂದು ಚಿಕ್ಕಮಗಳೂರಿನಲ್ಲಿ ಸಮಾಜ ಕಲ್ಯಾಣ ಹಾಗೂ ಲೊಕೋಪಯೋಗಿ ಇಲಾಖೆ ವ್ಯಾಪ್ತಿಯ 90 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ನಾನು ಇವತ್ತು ಬರುತ್ತಿರಲಿಲ್ಲ. ಸಾಕಷ್ಟು ಕೆಲಸ ಇತ್ತು. ರೈಲ್ವೆ ಇಲಾಖೆ ಸಭೆಗೆ ಹೋಗಬೇಕಿತ್ತು. ಆದರೆ ಸೋಮವಾರ ಸಿ.ಟಿ ರವಿಯವರು ಬೈದದ್ದನ್ನ ನೋಡಿ ಇವತ್ತು ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿ ಕೆಲಸಕ್ಕೆ ಸರ್ಕಾರದ ಸಂಪೂರ್ಣ ಸಹಮತ ಇರುತ್ತೆ ಎಂದು ಡಿಸಿಎಂ ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿ, ವಿಧಾನ ಪರಿಷತ್ ಶಾಸಕ ಬೋಜೇಗೌಡ, ಪ್ರಾಣೇಶ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಸೇರಿ ವಿವಿಧ ಶಾಸಕರು, ಅಧಿಕಾರಿಗಳು ಉಪಸ್ಥಿತರಿದ್ದರು.