ಚಿಕ್ಕಮಗಳೂರು: ಪೊಲೀಸ್ ಕಸ್ಟಡಿಯಲ್ಲಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ (C.T. Ravi) ಬಿಡುಗಡೆಯಾಗಿ ಶನಿವಾರ ರಾತ್ರಿ ಚಿಕ್ಕಮಗಳೂರಿಗೆ (Chikkamagaluru) ಬರುತ್ತಿದ್ದಂತೆ ಬಿಜೆಪಿ (BJP) ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದ್ದಾರೆ.
ಈ ವೇಳೆ ಸ್ವಕ್ಷೇತ್ರದಲ್ಲಿ ಕಾರ್ಯಕರ್ತರ ಪ್ರೀತಿ ಕಂಡು ಅವರು ಕಣ್ಣೀರಿಟ್ಟಿದ್ದಾರೆ. ಬಳಿಕ ಮಾತನಾಡಿ, ನನ್ನ ಕಷ್ಟದ ಜೊತೆ ನೀವಿದ್ದೀರಿ. ನಿಮ್ಮ ಕಷ್ಟದ ಜೊತೆ ನಾನೂ ಇರುತ್ತೇನೆ. ನಿಮ್ಮ ಪ್ರೀತಿ ಪೂರ್ವಜನ್ಮದ ಪುಣ್ಯ. ತಾಯಿ ಮಕ್ಕಳಿಗೆ ತೋರಿಸುವಂತಹಾ ಪ್ರೀತಿ ತೋರಿಸಿದ್ದೀರಿ. ನಿಮ್ಮ ಪ್ರೀತಿಗೆ ನಾನು ಋಣಿ. ನೀವು ನನಗೆ ಬೆನ್ನು ತೋರಿಸುವುದನ್ನು ಹೇಳಿಕೊಟ್ಟಿಲ್ಲ. ಕಷ್ಟಕ್ಕೆ ಎದೆ ತೋರಿಸುವುದನ್ನು ಹೇಳಿಕೊಟ್ಟಿದ್ದೀರಿ. ನಾನು ಯಾವತ್ತೂ ಯಾರಿಗೂ ಕೆಟ್ಟದ್ದು ಮಾಡಿಲ್ಲ. ಕೆಟ್ಟದ್ದು ಬಯಸಿಲ್ಲ. ಬಂದ ಕಷ್ಟವನ್ನೆಲ್ಲಾ ಎದುರಿಸಿದ್ದೇವೆ. ಆದರೆ, ಎಂದಿಗೂ ಬೆನ್ನು ತೋರಿಸಿ ಹೋಗಿಲ್ಲ ಎಂದಿದ್ದಾರೆ.
Advertisement
“ನನ್ನೂರು ನನ್ನ ಜನ”
ಹೆತ್ತಬ್ಬೆಯ ಮಡಿಲು ನನ್ನ ಚಿಕ್ಕಮಗಳೂರಿನಲ್ಲಿ… pic.twitter.com/GntffXxozQ
— C T Ravi 🇮🇳 ಸಿ ಟಿ ರವಿ (@CTRavi_BJP) December 21, 2024
Advertisement
ರಾತ್ರಿ 1 ಗಂಟೆಯಾದರೂ ಸಹಸ್ರಾರು ಸಂಖ್ಯೆಯಲ್ಲಿರೋ ನಿಮ್ಮನ್ನು ನೋಡಿದ್ರೆ ಪುಣ್ಯ ಮಾಡಿದ್ದೇನೆ ಅನ್ನಿಸುತ್ತಿದೆ ಎಂದು ಸಾವಿರಾರು ಕಾರ್ಯಕರ್ತರ ಮಧ್ಯೆ ಕಣ್ಣೀರಿಟ್ಟಿದ್ದಾರೆ. ಇದನ್ನ ಕಣ್ಣೀರು ಎಂದು ತಿಳಿಯಬೇಡಿ. ನಿಮ್ಮ ಪ್ರೀತಿ ನೋಡಿ ಬರುತ್ತಿರುವ ಆನಂದಭಾಷ್ಪ. ರಾಜ್ಯದ ಉದ್ದಗಲಕ್ಕೂ ಕಾರ್ಯಕರ್ತರು, ಪಕ್ಷದ ಮುಖಂಡರು, ಕೇಂದ್ರ ಸಚಿವರು ಧೈರ್ಯ ತುಂಬಿದ್ದಾರೆ. ಯಡಿಯೂರಪ್ಪನವರು ಕೂಡ ಹೆದರಬೇಡ ಎಂದು ವಿಶ್ವಾಸ ತುಂಬಿದ್ದರು. ನನ್ನಮ್ಮ ಕೂಡ ಹೆದರೋದ ಹೇಳಿಕೊಟ್ಟಿಲ್ಲ. ಹೋರಾಡೋದು-ಕಷ್ಟ ಪಡೋದು ಹೇಳಿಕೊಟ್ಟಿದ್ದಾರೆ ಎಂದು ಭಾವುಕರಾಗಿದ್ದಾರೆ.
Advertisement
Advertisement
ಪತಿಯನ್ನು ತಬ್ಬಿ ಕಣ್ಣೀರಿಟ್ಟ ಪತ್ನಿ: ಪತಿಯನ್ನು ನೋಡಿ ಅವರ ಪತ್ನಿ ಪಲ್ಲವಿ ಕೂಡ ಕಣ್ಣೀರಿಟ್ಟಿದ್ದಾರೆ. ಮೆರವಣಿಗೆಯಲ್ಲಿ ಮನೆಗೆ ಬಂದ ಕೂಡಲೇ ಪತ್ನಿ ಪಲ್ಲವಿ, ಸಿ.ಟಿ.ರವಿಯವರನ್ನ ನೋಡಿ ಕಣ್ಣೀರಿಟ್ಟಿದ್ದಾರೆ. ಬಳಿಕ ಐವರು ಮುತ್ತೈದೆಯರು ಸಿ.ಟಿ.ರವಿಗೆ ಆರತಿ ಮಾಡಿದರು. ಆರತಿ ಬಳಿಕ ಗಂಡ-ಹೆಂಡತಿ ಇಬ್ಬರು ಒಬ್ಬರಿಗೊಬ್ಬರು ತಬ್ಬಿಕೊಂಡು ಕಣ್ಣೀರಿಟ್ಟರು. ಇದೇ ವೇಳೆ, ಅಜ್ಜಿಯೊಬ್ಬರು ಸಿ.ಟಿ.ರವಿಯನ್ನು ಆತ್ಮೀಯವಾಗಿ ತಬ್ಬಿ, ನಿಂಬೆಹಣ್ಣಿನಲ್ಲಿ ದೃಷ್ಠಿ ತೆಗೆದು ಅದೇ ನಿಂಬೆಹಣ್ಣನ್ನ ರವಿಯವರ ಎಡಗಾಲಿನಲ್ಲಿ ತುಳಿಸಿದರು.
ಕಾರ್ಯಕರ್ತರಿಗೆ 24 ಗಂಟೆಯ ಕಥೆ ಬಿಚ್ಚಿಟ್ಟ ರವಿ: ಮಧ್ಯ ರಾತ್ರಿ 1.30ರ ಸುಮಾರಿಗೆ ಮನೆಗೆ ಬಂದ ಸಿ.ಟಿ.ರವಿ ಕಾರ್ಯಕರ್ತರ ಪ್ರೀತಿ, ಹರ್ಷೋಧ್ಘಾರ, ಹಾರೈಕೆ ಕಂಡು ಭಾವುಕರಾಗಿ ಪೊಲೀಸರ ಜೊತೆಗಿದ್ದ ತನ್ನ 24 ಗಂಟೆ ನರಕವನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅವರ ನಡೆ ನಿಗೂಢ, ಅನುಮಾನಸ್ಪದವಾಗಿತ್ತು. ಮಧ್ಯರಾತ್ರಿ ನನ್ನನ್ನ ಕ್ರಷರ್‌ಗೆ ಕರೆದುಕೊಂಡು ಹೋಗಿದ್ದರು. ಸೇಫ್ಟಿ ಕೊಡೋಕೆ ಕರೆದುಕೊಂಡು ಹೋಗಿದ್ರಾ ಎಂದು ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಕಬ್ಬಿನ ಗದ್ದೆ, ಕಾಡಿನಲ್ಲಿ ನನ್ನ ರಕ್ಷಣೆ ಮಾಡಲು ಮುಂದಾಗಿದ್ದರಾ. ನನ್ನ ಹಿಂದೆ ಬರುತ್ತಿದ್ದ 50ಕ್ಕೂ ಹೆಚ್ಚು ವಾಹನಗಳನ್ನ ಬ್ಯಾರಿಕೇಡ್ ಹಾಕಿ ತಡೆದಿದ್ದಾರೆ. ಆದರೆ, ಜೀವದ ಹಂಗು ತೊರೆದು ಮಾಧ್ಯಮದವರು ಅವರಿಗೆ ಅಗೋ ನಷ್ಟವನ್ನು ಲೆಕ್ಕಿಸದೇ ನನ್ನನ್ನ ಬೆನ್ನತ್ತಿದ್ದರು. ಮಾಧ್ಯಮ ಬೆನ್ನತ್ತಿ-ಬೆನ್ನತ್ತಿ ಎಲ್ಲಾ ಕಡೆ ಪ್ರತ್ಯಕ್ಷ ಆಗಿದ್ರಿಂದ ನನ್ನನ್ನು ಏನೂ ಮಾಡಲು ಆಗಲಿಲ್ಲ. ಹಾಗಾಗಿ, ಅನಿವಾರ್ಯವಾಗಿ ಬೆಳಗ್ಗೆ ಕೋರ್ಟಿಗೆ ಕರೆದುಕೊಂಡು ಬಂದಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆ ಒಳಗೆ ಸರ್ವಾಧಿಕಾರ ಆಡಳಿತ ನಡೆಸ್ತಾ ಇದೆ. ಈ ಸರ್ವಾಧಿಕಾರ ಕೊನೆಯಾಗಲೇಬೇಕು ಎಂದು ಕಿಡಿಕಾರಿದ್ದಾರೆ.
ಬೆಳಗಾವಿ ಚಲೋ: ಓರ್ವ ದೊಡ್ಡ ಮನುಷ್ಯ ಬೆಳಗಾವಿಯಿಂದ ಬದುಕಿ ಬಂದದ್ದೇ ಪುಣ್ಯ ಎಂದಿದ್ದಾರೆ. ಆದರೆ, ಬೆಳಗಾವಿ ಜನ ನೀನು ಬಾ. ಯಾರು ಏನು ಮಾಡ್ತಾರೆ ನೋಡೋಣ ಎನ್ನುತ್ತಿದ್ದಾರೆ. ನಾನು ಕೊಟ್ಟ ದೂರಿಗೆ ಯಾವುದೇ ಕ್ರಮಕೈಗೊಂಡಿಲ್ಲ. ಯಾರು ಕೊಲೆ ಪ್ರಯತ್ನ ಮಾಡಿದರು, ಯಾರು ಕುಮ್ಮಕ್ಕು ನೀಡಿದರು ಅವರನ್ನೂ ಬಂಧಿಸಿ ಕ್ರಮಕೈಗೊಳ್ಳಬೇಕು. ತಪ್ಪು ಮಾಡಿದ ಮೇಲೆ ಶಿಕ್ಷೆ ಆಗಬೇಕು. ಇಲ್ಲವಾದರೆ, ನಮ್ಮ ಅಧ್ಯಕ್ಷರು, ವಿಪಕ್ಷ ನಾಯಕರು ಹೇಳಿದ್ದಾರೆ. ಹೈಕಮಾಂಡ್ ಗಮನಕ್ಕೆ ತಂದು. ದೊಡ್ಡವರ ಸಲಹೆ ಪಡೆದು ಬೆಳಗಾವಿ ಚಲೋ ಮಾಡೋದಾಗಿ ತಿಳಿಸಿದ್ದಾರೆ. ಕಾನೂನು ಕ್ರಮ ಕೈಗೊಳ್ತೀವಿ, ಹಕ್ಕು ಚ್ಯುತಿ ಮಂಡಿಸ್ತೀವಿ, ಮಾನವ ಹಕ್ಕು ಆಯೋಗಕ್ಕೂ ದೂರು ನೀಡುತ್ತೇವೆ ಎಂದು ಎಚ್ಚರಿಸಿದ್ದಾರೆ.