– ವಿಧಾನ ಸೌಧದಲ್ಲಿ ಅಶೋಕ್, ಸಿಟಿ ರವಿ ಪ್ರತಿಕ್ರಿಯೆ
– ಇಷ್ಟು ದಿನ ಸುಮ್ಮನೆ ಇದ್ದದ್ದನ್ನ ಕೆಣಕಿದ್ದು ಯಾಕೆ?
ಬೆಂಗಳೂರು: ಏಸು ಪ್ರತಿಮೆ ನಿರ್ಮಾಣದ ಬಗ್ಗೆ ನಮ್ಮ ವಿರೋಧ ಇಲ್ಲ. ಡಿಕೆ ಶಿವಕುಮಾರ್ ಏನಾದ್ರೂ ಮಾಡಿಕೊಳ್ಳಲಿ. ಆದರೆ ಜಾಗ ಯಾವುದು ಎನ್ನುವುದನ್ನು ನೋಡಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ವಿಧಾನ ಸೌಧದಲ್ಲಿ ಕ್ಯಾಬಿನೆಟ್ ಸಭೆಗೂ ಮುನ್ನ ಮಾತನಾಡಿದ ಅವರು, ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ಸಂಬಂಧಿಸಿದಂತೆ ಇವತ್ತು ಅಥವಾ ನಾಳೆ ಜಿಲ್ಲಾಧಿಕಾರಿಗಳು ವರದಿ ಸಲ್ಲಿಸಲಿದ್ದಾರೆ. ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬೆಟ್ಟ ಇದೆ, ಪಕ್ಕದಲ್ಲಿ ಡ್ಯಾಮ್ ಇದೆ. ಆದರೆ ಜಾಗ ಯಾವುದು ಎನ್ನುವುದನ್ನು ನೋಡಬೇಕು. ಇಷ್ಟು ದಿನ ಸುಮ್ಮನೆ ಇದ್ದದ್ದನ್ನ ಕೆಣಕಿದ್ದು ಯಾಕೆ ಎನ್ನುವುದು ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.
Advertisement
Advertisement
ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿ, ಇಸ್ಕಾನ್‍ನವರು ಥೀಮ್ ಪಾರ್ಕ್ ಮಾಡಲು ಹೊರಟಾಗ ಡಿ.ಕೆ.ಶಿವಕುಮಾರ್ ಇಲ್ಲ ಸಲ್ಲದ ಕಿರುಕುಳ ನೀಡಿ ಆ ಯೋಜನೆ ನಿಲ್ಲುವ ಹಾಗೆ ಮಾಡಿದ್ದರು. ಆದರೆ ನಾವು ಹಾಗೆ ಮಾಡುವುದಿಲ್ಲ. ನಮಗೆ ಕೃಷ್ಣನೂ ಒಂದೇ ಏಸುವೂ ಒಂದೇ. ಆದರೆ ಗೋಮಾಳ ಜಮೀನು ದುರುಪಯೋಗದ ಬಗ್ಗೆ ಈಗಾಗಲೇ ಕಂದಾಯ ಸಚಿವರು ತನಿಖೆಗೆ ಆದೇಶಿಸಿದ್ದಾರೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.
Advertisement
Advertisement
ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲ ಬೆಟ್ಟದಲ್ಲಿ 114 ಅಡಿಯ ಏಕಶಿಲಾ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಶಿವಕುಮಾರ್ ಡಿ.25ರ ಕ್ರಿಸ್‍ಮಸ್ ದಿನದಂದು ಶಂಕುಸ್ಥಾಪನೆ ಮಾಡಿದ್ದಾರೆ. ಕ್ರಿಸ್ ಮಸ್ ಶುಭ ದಿನದ ಹಿನ್ನೆಲೆಯಲ್ಲಿ ಪ್ರತಿಮೆಗೆ ಸಿದ್ಧವಾಗಿರುವ ಕಲ್ಲಿಗೆ ಉಳಿ ಪೆಟ್ಟು ಹಾಕುವ ಮೂಲಕ ಶಿಲಾನ್ಯಾಸ ನೆರವೇರಿಸಿದ್ದರು.
ಅದರಲ್ಲಿ 13 ಅಡಿ ಮೆಟ್ಟಿಲುಗಳು ಇದ್ದು, ಅದರ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಹಾರೋಬೆಲೆ ಗ್ರಾಮದಲ್ಲಿ ಶೇಕಡಾ 99 ರಷ್ಟು ಮಂದಿ ಕ್ರೈಸ್ತ ಸಮುದಾಯದವರಿದ್ದಾರೆ. ಪ್ರತಿಮೆ ನಿರ್ಮಾಣಕ್ಕೆ ಭೂಮಿ ನೀಡಿದ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಸಹೋದರರಿಗೆ ಕ್ರಿಶ್ಚಿಯನ್ನರು ಕೃತಜ್ಞತೆ ಸಲ್ಲಿಸಿದ್ದರು.
ಬಿಜೆಪಿ ವಿರೋಧ: ಇತ್ತ ಏಸು ಪ್ರತಿಮೆ ಸ್ಥಾಪನೆ ಬಗ್ಗೆ ಬಿಜೆಪಿ ಕಟು ಟೀಕೆ ಮಾಡಿದೆ. ಯಾವುದೋ ಆಸೆಗಾಗಿ ತಿಹಾರ್ ಜೈಲಿನಲ್ಲಿದ್ದು ಬಂದಿರೋ ಡಿಕೆಶಿ, ಇಟಲಿಯಮ್ಮನನ್ನು ಪ್ರಸನ್ನಗೊಳಿಸಲು ಇಂತಹ ಕೆಲಸ ಮಾಡಿದ್ದಾರೆ ಎಂದು ಉತ್ತರ ಕನ್ನಡ ಸಂಸದ ಅನಂತ್‍ಕುಮಾರ್ ಹೆಗ್ಡೆ ಟೀಕಿಸಿದ್ದಾರೆ. ಇತ್ತ ಡಿಕೆ ಶಿವಕುಮಾರ್ ಕೆಂಪೇಗೌಡರ ಅನುಯಾಯಿ ಅಂತಾರೆ. ನಿರ್ಮಾಲಾನಂದ ಸ್ವಾಮಿಗಳ ಭಕ್ತ ಅಂತಾರೆ. ಯೇಸು ಪ್ರತಿಮೆ ಮಾಡೋವಾಗ ಕೇಂಪೆಗೌಡರ ನೆನಪು ಯಾಕೆ ಆಗಿಲ್ಲ? ಸ್ವಾಮೀಜಿಗಳ ನೆನಪು ಯಾಕೆ ಆಗಿಲ್ಲ. ಡಿಕೆ ಶಿವಕುಮಾರ್ ಹಿಂದೂ ಸಮಾಜದ ದೇವರ ಬಗ್ಗೆಯೂ ಚಿಂತಿಸಲಿ ಅಂತ ಮಂಗಳೂರಲ್ಲಿ ಸಚಿವ ಕೆಎಸ್ ಈಶ್ವರಪ್ಪ ಪ್ರಶ್ನಿಸಿದ್ದರು.