ಬೆಂಗಳೂರು: ಮಾಜಿ ಸಚಿವ ರೇವಣ್ಣ (H.D Revanna) ಅವರು ಜಾಮೀನು ಅರ್ಜಿ ವಜಾ ಆಗಿದ್ದರಿಂದ ಅವರೇ ದೇವೇಗೌಡರ ಆಶೀರ್ವಾದ ಪಡೆದು ಎಸ್‍ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ಇನ್ನೂ ಸಂಸದ ಪ್ರಜ್ವಲ್ ರೇವಣ್ಣ ಅವರು ಶರಣಾಗಲಿದ್ದಾರೆ ಎಂದು ಮಾಜಿ ಶಾಸಕ ಸಿ.ಎಸ್ ಪುಟ್ಟರಾಜು (C.S Puttaraju) ಅವರು ಸುಳಿವು ಕೊಟ್ಟಿದ್ದಾರೆ.
ಜಿ.ಟಿ ದೇವೇಗೌಡರು (G.T Devegowda) ಪ್ರತಿಕ್ರಿಯಿಸಿ, ರೇವಣ್ಣ ಎಸ್‍ಐಟಿ ತನಿಖೆಗೆ ಹಾಜರಾಗಿದ್ದಾರೆ. ಅವರೇ ಮಹಿಳೆಯನ್ನು ಅಪಹರಿಸಿದ್ದರಾ? ಅಥವಾ ಯಾರು ಅಪಹರಣ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯಲಿದೆ. ಈ ಬಗ್ಗೆ ಮಹಿಳೆಯ ಮಗ ದೂರು ದಾಖಲಿಸಿದ್ದ. ಇದರ ಪ್ರಕಾರ ತನಿಖೆ ನಡೆಯಲಿದೆ.
ಕಾನೂನು ಏನಿದೆಯೋ ಅದರ ಪ್ರಕಾರ ಅವರು ನಡೆದುಕೊಳ್ಳಲಿದ್ದಾರೆ. ಈ ಬಗ್ಗೆ ಬಿಜೆಪಿ (BJP) ನಾಯಕರು ಹಾಗೂ ಜೆಡಿಎಸ್ (JDS) ನಾಯಕರು ಚರ್ಚೆ ನಡೆಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಏನಿದು ಪ್ರಕರಣ?: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋಗಳ ಪೆನ್‍ಡ್ರೈವ್ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ವೀಡಿಯೋಗಳು ವೈರಲ್ ಆಗುತ್ತಿದ್ದಂತೆ ಸಂತ್ರಸ್ತೆಯರು ಮಹಿಳಾ ಆಯೋಗದ ಮೊರೆ ಹೋಗಿದ್ದು, ಸರ್ಕಾರ ಪ್ರಕರಣದ ತನಿಖೆಗೆ ಎಸ್‍ಐಟಿ ರಚನೆ ಮಾಡಿತ್ತು. ಇದಾದ ಬೆನ್ನಲ್ಲೇ ಮಾಜಿ ಸಚಿವ ರೇವಣ್ಣ ವಿರುದ್ಧ ಸಹ ಲೈಂಗಿಕ ದೌರ್ಜನ್ಯ ಹಾಗೂ ಸಂತ್ರಸ್ತೆಯ ಅಪಹರಣದ ಆರೋಪದಡಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಎಸ್‍ಐಟಿ ತನಿಖೆ ನಡೆಸುತ್ತಿದೆ. ಇನ್ನೂ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿದ್ದು, ಅವರಿಗೆ ಲುಕೌಟ್ ನೋಟಿಸ್ ಜಾರಿಗೊಳಿಸಲಾಗಿದೆ. ಅಲ್ಲದೇ ರೇವಣ್ಣ ಸಹ ವಿದೇಶಕ್ಕೆ ತೆರಳುವ ಶಂಕೆಯ ಮೇಲೆ ಅವರ ಮೇಲೂ ಲುಕ್‍ಔಟ್ ನೋಟಿಸ್ ಜಾರಿಗೊಳಿಸಲಾಗಿದೆ.
ಇಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ಕಿರುಕುಳ ಪ್ರಕರಣದ ತನಿಖೆ ಆರಂಭಿಸಿರುವ ಎಸ್‍ಐಟಿ ಅಧಿಕಾರಿಗಳು, ಹೊಳೆನರಸೀಪುರದ ಅವರ ನಿವಾಸದಲ್ಲಿ ಸಂತ್ರಸ್ತೆಯ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಿದ್ದು, ಪ್ರಕರಣದಲ್ಲಿ ಇಂದು ರೇವಣ್ಣ ಅವರನ್ನು ಎಸ್‍ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.