Connect with us

Districts

ಕಾವೇರಿ ಪ್ರತಿಮೆ ನಿರ್ಮಾಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಸಚಿವ ಪುಟ್ಟರಾಜು

Published

on

ಮಂಡ್ಯ: ಕಾವೇರಿ ಪ್ರತಿಮೆ ನಿರ್ಮಾಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದ್ದಾರೆ.

ಪಾಂಡವಪುರ ತಾಲೂಕಿನ ಸುಂಕಾತಣ್ಣೂರು ಗ್ರಾಮದಲ್ಲಿ ಮಾತನಾಡಿದ ಸಚಿವರು, ಇಂತಹ ಪ್ರತಿಭಟನೆಯಿಂದಾಗಿಯೇ ಜಿಲ್ಲೆಗೆ ಯಾವುದೇ ಐಟಿ ಕಂಪನಿ, ದೊಡ್ಡ ಕೈಗಾರಿಕೆಗಳು ಬರುತ್ತಿಲ್ಲ. ಇದು ನಮ್ಮ ಜಿಲ್ಲೆಗೆ ತಟ್ಟಿರುವ ಶಾಪವಾಗಿದೆ ಎಂದು ಕಿಡಿಕಾರಿದರು. ಇದನ್ನು ಓದಿ: ಕಾವೇರಿ ಪ್ರತಿಮೆ ನಿರ್ಮಾಣದಿಂದ ಕೆಆರ್‌ಎಸ್ ಗೆ ಕಂಟಕ – ಸರ್ಕಾರದ ನಿರ್ಧಾರಕ್ಕೆ ಎಂಜಿನಿಯರ್ಸ್ ವಿರೋಧ

ಆಣೆಕಟ್ಟು ನಿರ್ಮಾಣವಾದ ಬಳಿಕವೂ ಡ್ಯಾಂ ಸಮೀಪದ ಪ್ರದೇಶದಲ್ಲಿ ಬ್ಲಾಸ್ಟ್ ಮಾಡಿ ಕಾಲುವೆ, ವಿವಿಧ ಕಾಮಗಾರಿಗಳನ್ನು ಮಾಡಲಾಗಿದೆ. ದೊಡ್ಡ ಸುರಂಗವನ್ನೇ ನಿರ್ಮಾಣ ಮಾಡಿರುವಾಗ 30 ಅಡಿ ಗುಂಡಿ ತೋಡಿ ಪ್ರತಿಮೆ ನಿಲ್ಲಿಸುವುದು ದೊಡ್ಡ ವಿಷಯವೇ? ಪರಿಣಿತ ಎಂಜಿನಿಯರ್ ಗಳನ್ನು ಕರೆಸಿಕೊಂಡು, ಚರ್ಚೆ ಮಾಡಿಯೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದರು.

ಪ್ರತಿಭಟನಾಕಾರರು ಹೇಳುವ ರಾಜ್ಯ, ದೇಶ ಯಾವುದಾದರೂ ಸರಿ ಅಲ್ಲಿಂದ ತಜ್ಞರ ತಂಡವನ್ನು ಕರೆಸುತ್ತೇವೆ. ಅವರಿಂದಲೇ ಕಾವೇರಿ ಪ್ರತಿಮೆ ನಿರ್ಮಾಣ ಮಾಡಿಸಲಾಗುತ್ತದೆ. ಇಂದು ಜಗತ್ತಿನಲ್ಲಿ ಅನೇಕ ತಜ್ಞರ ತಂಡಗಳಿವೆ ಎಂದ ಸಚಿವರು, ಕಾವೇರಿ ಪ್ರತಿಮೆ ನಿರ್ಮಾಣದಲ್ಲಿ ರೈತರ ಜಮೀನು ವಶಪಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಸರ್ಕಾರದ ಜಾಗವೇ 400 ಎಕರೆಯಿದೆ. ಡ್ಯಾಂ ಸಮೀಪದಲ್ಲಿ ನನ್ನದೂ 10 ಎಕರೆ ಜಾಗವಿದೆ. ಒಂದು ವೇಳೆ ಸರ್ಕಾರ ಕೇಳಿದರೆ ನಾನೂ ಕೂಡ ಕೊಡಬೇಕಾಗುತ್ತದೆ. ನಾವು ಪುಕ್ಸಟ್ಟೆ ಕೊಡುತ್ತೇವಾ ಎಂದು ಸಚಿವರು ಪ್ರಶ್ನಿಸಿದರು.

ರಾಜ್ಯ ಸರ್ಕಾರ ರೈತ ಪರವಾದ ಸರ್ಕಾರ. ರೈತರ ಮನಸ್ಸಿಗೆ ಎಳ್ಳಷ್ಟೂ ನೋವಾಗದ ರೀತಿ ಕೆಲಸ ಮಾಡುತ್ತಿದೆ. ಕೆಆರ್‌ಎಸ್ ನಿರ್ಮಾಣಕ್ಕೆ ವಿರೋಧವಿತ್ತು. ಅದರಂತೆ ಈಗಲೂ ವಿರೋಧ ಇರುವುದು ಸಾಮಾನ್ಯ ಎಂದು ಹೇಳುವ ಮೂಲಕ ಸಚಿವರು, ಹೋರಾಟಗಾರಿಗೆ ಟಾಂಗ್ ಕೊಟ್ಟರು.

ಏನಿದು ಯೋಜನೆ?:
ಏಕತಾ ಪ್ರತಿಮೆ ಮಾದರಿಯಲ್ಲಿ ಕಾವೇರಿ ಮಾತೆಯ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಸಮ್ಮಿಶ್ರ ಸರ್ಕಾರ ಕೈ ಹಾಕಿದೆ. ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಜಾಗತಿಕ ಮಟ್ಟದ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಮಂಡ್ಯ ಜಿಲ್ಲೆಯ ಕೆಆರ್‍ಎಸ್ ಉದ್ಯಾನದಲ್ಲಿ 125 ಅಡಿ ಎತ್ತರದ ಕಾವೇರಿ ಮಾತೆಯ ಪ್ರತಿಮೆ, 360 ಅಡಿ ಎತ್ತರದ ಮ್ಯೂಸಿಯಂ ನಿರ್ಮಿಸಲು ಯೋಜನೆ ರೂಪಿಸಿದೆ.

ಕೆಆರ್‌ಎಸ್ ಉದ್ಯಾನ `ಬೃಂದಾವನ’ವನ್ನು 1,200 ಕೋಟಿ ರೂ. ವೆಚ್ಚದಲ್ಲಿ ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಥೇಮ್ಸ್ ನದಿಯ ತಟದಲ್ಲಿ ಇರುವಂತೆ ರೀತಿ ಪಾರ್ಕ್ ನಿರ್ಮಾಣವಾಗಲಿದ್ದು, ಇದಕ್ಕೆ 400 ಎಕರೆ ಪ್ರದೇಶ ಬಳಕೆಯಾಗಲಿದೆ. 1200 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯ ಕಾಮಗಾರಿಯನ್ನು 2 ವರ್ಷದಲ್ಲಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ. ವಾರ್ಷಿಕ 300 ಕೋಟಿ ರೂ. ಆದಾಯ, ಸರ್ಕಾರಕ್ಕೆ 30 ಕೋಟಿ ರೂ. ವರಮಾನ ಬರುವ ನಿರೀಕ್ಷೆಯಿದೆ.

ಹೇಗಿರಲಿದೆ ಪ್ರತಿಮೆ?:
ಉದ್ದೇಶಿತ ಮಾದರಿಯಂತೆ ಸದ್ಯದ ದೋಣಿ ವಿಹಾರ ಸರೋವರದ ಪಕ್ಕದಲ್ಲಿ ಮತ್ತೊಂದು ಸರೋವರ ನಿರ್ಮಿಸಿ ಅದರ ಮಧ್ಯ ಭಾಗದಲ್ಲಿ 360 ಅಡಿ ಎತ್ತರದ ಮ್ಯೂಸಿಯಂ ಸಮುಚ್ಛಯ ನಿರ್ಮಾಣವಾಗಲಿದೆ. ಈ ಸಮುಚ್ಛಯದ ಮೇಲ್ಭಾಗದಲ್ಲಿ ಕಾವೇರಿ ಮಾತೆಯ 125 ಅಡಿ ಎತ್ತರದ ಪ್ರತಿಮೆ ಇರಲಿದ್ದು, ಕಾವೇರಿ ಮಾತೆ ಪದತಲದಲ್ಲಿ ಮ್ಯೂಸಿಯಂ ಕಟ್ಟಡ ಇರಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *