– ಚನ್ನಪಟ್ಟಣದ ಜನ ನನ್ನನ್ನ ತಿರಸ್ಕರಿಸಿದ್ದಾರೆ, ಹೈಕಮಾಂಡ್ ಟಿಕೆಟ್ ಕೊಟ್ರೆ ಸ್ಪರ್ಧೆ
– ಲೋಕಸಭಾ ಚುನಾವಣೆ ಟಿಕೆಟ್ ಆಕಾಂಕ್ಷೆ ಬಿಚ್ಚಿಟ್ಟ ಮಾಜಿ ಶಾಸಕ
ರಾಮನಗರ: ಡಿ.ಕೆ ಶಿವಕುಮಾರ್ ಅವರು ಜಿಲ್ಲೆಗೆ ನೀರು ಹರಿಸದಿದ್ದರೂ ಚುನಾವಣೆ ವೇಳೆ ಹಣದ ಹೊಳೆ ಹರಿಸಲಿದ್ದಾರೆ ಎಂದು ಬಿಜೆಪಿಯ ಮಾಜಿ ಶಾಸಕ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ.
ನಗರ ಹೊರವಲಯದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಶಾಸಕರು, ಶಿವಕುಮಾರ್ ಅವರ ದುರಹಂಕಾರ, ದೌರ್ಜನ್ಯಕ್ಕೆ ಜನ ತಿರುಗೇಟು ನೀಡುತ್ತಾರೆ. ಅಲ್ಲದೇ ಕಾಂಗ್ರೆಸ್, ಜೆಡಿಎಸ್‍ನ ಮುಖಂಡರು ಕಾರ್ಯಕರ್ತರು ಕೂಡ ಬಿಜೆಪಿಗೆ ಬೆಂಬಲ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
Advertisement
ಚನ್ನಪಟ್ಟಣದ ಜನ ನನ್ನನ್ನ ತಿರಸ್ಕರಿಸಿದ್ದಾರೆ. ಐದು ವರ್ಷಗಳ ಕಾಲ ನಾನು ಚುನಾವಣೆಗೆ ನಿಲ್ಲುವುದಿಲ್ಲವೆಂದು ತೀರ್ಮಾನಿಸಿದ್ದೇನೆ. ಆದರೆ ಹೈಮಾಂಡ್ ಸ್ಪರ್ಧೆಗೆ ಇಳಿಯುವಂತೆ ಆದೇಶ ನೀಡಿದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದರು.
Advertisement
ಸಂಸದ ಡಿ.ಕೆ.ಸುರೇಶ್ ಅವರ ಬೆಂಬಲಕ್ಕೆ ಚನ್ನಪಟ್ಟಣದ ಜನತೆ ನಿಂತಿದ್ದರು. ಹೀಗಾಗಿ 2014ರ ಚುನಾವಣೆಯಲ್ಲಿ ಜಯಗಳಿಸಿದರು. ಕ್ಷೇತ್ರದ ಅಭಿವೃದ್ಧಿ ಉದ್ದೇಶದಿಂದ ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಡಿ.ಕೆ.ಸುರೇಶ್ ಅವರಿಗೆ ಬೆಂಬಲ ನೀಡುವಂತೆ ಕೇಳಿಕೊಂಡರು. ಕ್ಷೇತ್ರಕ್ಕೆ ಒಳ್ಳೆಯದಾಗುತ್ತದೆ ಎಂದು ಅವರ ಬೆಂಬಲಕ್ಕೆ ನಿಂತೆ. ಆದರೆ ಆಯ್ಕೆಯಾದ ಡಿ.ಕೆ.ಸುರೇಶ್ ಅವರು ಚನ್ನಪ್ಪಟ್ಟಣಕ್ಕೆ ಯಾವುದೇ ಕೆಲಸ ಮಾಡಲಿಲ್ಲ ಎಂದು ದೂರಿದರು.
Advertisement
ಬೆಂಗಳೂರು ಗ್ರಾಮಾಂತರ ಕ್ಷೇತದ ಬಿಜೆಪಿ ಅಭ್ಯರ್ಥಿಯ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಬಿಜೆಪಿ ಮುಖಂಡ ರುದ್ರೇಶ್ ಅಥವಾ ಯಾರಿಗೆ ಟಿಕೆಟ್ ನೀಡಿದರೂ ನಾವು ಬೆಂಬಲ ನೀಡಿ ಕೆಲಸ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕೆಲಸಗಳಿಗೆ ಜನ ಮನ್ನಣೆ ನೀಡಲಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಯಾರಿಗೇ ಟಿಕೆಟ್ ನೀಡಿದರೂ ಅವರು ಜಯಗಳಿಸುತ್ತಾರೆ ಎಂದರು.
ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ಎರಡರಲ್ಲೂ ಸ್ಪರ್ಧಿಸುವ ಉದ್ದೇಶ ನನಗಿಲ್ಲ. ಈ ಹಿಂದೆ ಚುನಾವಣೆಗಳನ್ನು ಎದುರಿಸಿದ್ದೇನೆ. ಕೇವಲ ಅಭಿವೃದ್ಧಿ ಕೆಲಸಗಳಿಂದ ಗೆಲ್ಲಲು ಸಾಧ್ಯವಿಲ್ಲ ಎನ್ನುವುದು ಮನದಟ್ಟಾಗಿದೆ. ಸಚಿವ ಡಿ.ಕೆ.ಶಿವಕುಮಾರ್ ಕುಟುಂಬದ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಯಾರೇ ಸ್ಪರ್ಧಿಸಿದರೂ ಗೆಲುವು ಸಾಧಿಸುತ್ತಾರೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv