ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಪಂದ್ಯಾವಳಿಯ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಕರ್ನಾಟಕ ತಂಡದ 2 ಆಟಗಾರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
2019ರ ಕೆಪಿಎಲ್ ಫೈನಲ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿತ್ತು ಎಂಬ ಆರೋಪವಿದೆ. ಈ ಹಿನ್ನೆಲೆ ತನಿಖೆ ತೀವ್ರಗೊಳಿಸಿದ ಸಿಸಿಬಿ ಪೊಲೀಸರ ಬಲೆಗೆ ಬಳ್ಳಾರಿ ಟಸ್ಕರ್ಸ್ ತಂಡದ ಇಬ್ಬರು ಆಟಗಾರರು ಸಿಕ್ಕಿಬಿದ್ದಿದ್ದಾರೆ. ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿಎಂ ಗೌತಮ್ ಹಾಗೂ ಅಬ್ರರ್ ಖಾಜಿ ಬಂಧನಕ್ಕೊಳಗಾದ ಆಟಗಾರರು. ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡುವುದಾಗಿ ಆಟಗಾರರು 20 ಲಕ್ಷ ರೂ. ಹಣ ಪಡೆದಿದ್ದರು. ಬುಕ್ಕಿಗಳ ಬಳಿ ಹಣ ಪಡೆದು ಇಬ್ಬರು ಆಟಗಾರರು ನಿಧಾನಗತಿಯ ಬ್ಯಾಟಿಂಗ್ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು.
Advertisement
Advertisement
ಸಿಎಂ ಗೌತಮ್ ಅವರು ಕರ್ನಾಟಕದ ಪರವಾಗಿ ರಣಜಿ ಪಂದ್ಯಗಳಲ್ಲಿ, ಐಪಿಎಲ್‌ನಲ್ಲಿ ಮುಂಬೈ, ಆರ್‌ಸಿಬಿ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಟವಾಡಿದ್ದರು. ಇತ್ತ ಅಬ್ರರ್ ಖಾಜಿ ಕೂಡ ಕರ್ನಾಟಕ ತಂಡದ ರಣಜಿ ಆಟಗಾರರಾಗಿದ್ದಾರೆ. ಸದ್ಯ ಇಬ್ಬರು ಆಟಗಾರರನ್ನು ಬಂಧಿಸಿದ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Advertisement
Advertisement
ಆಗಸ್ಟ್ 31ರಂದು ಮೈಸೂರಿನಲ್ಲಿ ಬಳ್ಳಾರಿ ಟಸ್ಕರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ನಡುವೆ ಕೆಪಿಎಲ್ ಫೈನಲ್ ಪಂದ್ಯ ನಡೆದಿತ್ತು. ಇದೇ ವೇಳೆ ಪಂದ್ಯದಲ್ಲಿ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪವಿದೆ. ಈಗಾಗಲೇ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಫ್ಯಾಂಥರ್ಸ್ ತಂಡದ ಮಾಲೀಕ ಅಶ್ಪಾಕ್ ಅಲಿ ತಾರ್, ಬಳ್ಳಾರಿ ಟಸ್ಕರ್ಸ್ ತಂಡದ ಡ್ರಮ್ಮರ್ ಭವೇಶ್, ಬೆಂಗಳೂರು ಬ್ಲಾಸ್ಟರ್ ತಂಡದ ಬೌಲಿಂಗ್ ಕೋಚ್ ವಿನು ಪ್ರಸಾದ್ ಹಾಗೂ ಬ್ಯಾಟ್ಸ್‌ಮನ್ ವಿಶ್ವನಾಥನ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ದೆಹಲಿಯ ಇಬ್ಬರು ಬುಕ್ಕಿಗಳ ಬಂಧನಕ್ಕೆ ಲುಕ್ ಔಟ್ ನೋಟಿಸ್ ಹೊರಡಿಸಿದ್ದಾರೆ. ಈ ಹಿನ್ನೆಲೆ ಬುಕ್ಕಿಗಳಾದ ಜತ್ತಿನ್, ಸಯ್ಯಾಂ ವಿದೇಶದಲ್ಲಿ ತಲೆ ಮರಿಸಿಕೊಂಡಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.