– ರಾಜಕೀಯ ನಿವೃತ್ತಿ ಪಡೆಯಲು ಸಿದ್ಧ
– ಬಾಂಬೆಗೆ ಆಟವಾಡಲು ನಾವು ಬಂದಿಲ್ಲ
ಮುಂಬೈ: ಸಿದ್ದರಾಮಯ್ಯನವರು ನಮ್ಮ ಪಕ್ಷಕ್ಕೆ ಬರುವುದಕ್ಕೆ ಮೊದಲೇ ನಾನು ಕಾಂಗ್ರೆಸ್‍ನಲ್ಲಿದ್ದೇವೆ ಎಂದು ಭೈರತಿ ಬಸವರಾಜ್ ಖಡಕ್ ಆಗಿ ಹೇಳಿದ್ದಾರೆ.
Advertisement
ಹೋಟೆಲಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಗ್ರಾಮ ಪಂಚಾಯತ್‍ನಿಂದ ಸ್ಪರ್ಧಿಸಿ ಶಾಸಕನಾಗಿದ್ದೇನೆ. 30 ವರ್ಷಗಳಿಂದ ಪಕ್ಷ ಕಟ್ಟಿದ್ದೇನೆ. ನಾವು ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇವೆಯೇ ಹೊರತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ ಎಂದರು.
Advertisement
Advertisement
ಈ ವೇಳೆ ಮಾಧ್ಯಮವರು ನಿಮ್ಮ ಅನರ್ಹತೆ ಮಾಡಲು ದೂರು ನೀಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ ಎನ್ನುವ ವಿಚಾರಕ್ಕೆ, ಸಿದ್ದರಾಮಯ್ಯ ಬರುವುದಕ್ಕೆ ಮೊದಲೇ ನಾನು ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದೇವೆ. ಅನರ್ಹತೆ ಮಾಡಿದರೂ ನಮಗೂ ಕಾನೂನು ಏನು ಎನ್ನುವುದು ತಿಳಿದಿದೆ. ರಾಜಕೀಯದಲ್ಲೇ ಇರಬೇಕು ಎನ್ನುವ ಆಸೆಯೂ ನನಗಿಲ್ಲ. ಮನೆಯಲ್ಲೇ ಬೇಕಾದರೆ ಇರುತ್ತೇನೆ ಎಂದು ಹೇಳಿದರು.
Advertisement
ಬಾಂಬೆಗೆ ಆಟವಾಡಲು ನಾವು ಬಂದಿಲ್ಲ. ನಮ್ಮ ಕ್ಷೇತ್ರದ ಜನರು ಅಭಿವೃದ್ಧಿಯಾಗಿಲ್ಲ ಎಂದು ನಮಗೆ ಪ್ರಶ್ನೆ ಮಾಡುತ್ತಿದ್ದರು. ಇದರಿಂದ ನಮಗೆ ಬಹಳಷ್ಟು ನೋವಾಗಿದೆ. ಆ ನೋವನ್ನು ಸಹಿಸಿಕೊಳ್ಳಲಾಗದೇ ನಾವು ರಾಜೀನಾಮೆ ಕೊಟ್ಟಿದ್ದೇವೆ. ನಾವು ಇನ್ನೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದೀವಿ. ಕಾಂಗ್ರೆಸ್ ಪಕ್ಷ ಬಿಟ್ಟಿಲ್ಲ ಎಂದು ಹೇಳಿದರು.
ಸ್ಪೀಕರ್ ಬಗ್ಗೆ ನಮಗೆ ಅಪಾರ ನಂಬಿಕೆ ಇದೆ. ಅವರು ಅನರ್ಹ ಮಾಡುವುದಿಲ್ಲ. ನಮಗೆ ಬಹಳ ನೋವಿತ್ತು. ಆ ನೋವಿಗೆ ಶಾಸಕರ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇವೆ. ಪಾರ್ಟಿಗೆ ರಾಜೀನಾಮೆ ಕೊಟ್ಟಿಲ್ಲ. ಮುಂದೆ ಏನೇ ಆದರೂ ನಾವು ರಾಜೀನಾಮೆಯನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಅವರು ಅನರ್ಹ ಮಾಡಿದರೂ ನಾವು ರಾಜೀನಾಮೆ ವಾಪಸ್ ಪಡೆಯುವುದಿಲ್ಲ. ರಾಜಕಾರಣ ಇಲ್ಲದಿದ್ದದರು ಪರವಾಗಿಲ್ಲ, ನಾವು ನಮ್ಮ ಮನೆಯಲ್ಲಿ ಇರುತ್ತೇವೆ. ರಾಜಕಾರಣ ಮಾಡಿ ಬದುಕಬೇಕು ಎಂಬ ಅನಿವಾರ್ಯತೆ ಇಲ್ಲ ಎಂದು ಭೈರತಿ ಬಸವರಾಜು ಗರಂ ಆಗಿ ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ 35 ವರ್ಷ ಕೆಲಸ ಮಾಡಿಕೊಂಡು ಬಂದಿದ್ದೇನೆ. ಸಿದ್ದರಾಮಯ್ಯ ಅವರಿಗಿಂದ ಮುಂಚೆಯೇ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ನಮಗೆ ಎಷ್ಟು ನೋವಿದೆ ಎಂದು ಹೇಳಲು ಸಾಧ್ಯವಿಲ್ಲ. ಇಂದಿಗೂ ಕೂಡ ನಾನು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿಲ್ಲ. ನನ್ನ ನೋವು, ಕಷ್ಟಗಳನ್ನು ಅವರ ಬಳಿ ಹೇಳಿಕೊಂಡೆ. ಆದರೆ ಸರ್ಕಾರ ಯಾವುದಕ್ಕೂ ಸ್ಪಂದಿಸಲಿಲ್ಲ. ನಾನು ನೋವನ್ನು ಹೇಳಿಕೊಂಡು ತನ್ನ ತಾಯಿ ಮೇಲೆ ಆಣೆ ರಾಜೀನಾಮೆ ಕೊಡುತ್ತಿದ್ದೇನೆ ಎಂದು ಹೇಳಿ ಬಂದಿದ್ದೇನೆ ಎಂದರು.
ಈಗ ರಾಜೀನಾಮೆ ಕೊಟ್ಟು ಆಗಿದೆ. ಅದನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಮುನಿರತ್ನ ಅವರು, ಏಳು ಬಾರಿ ಗೆದ್ದ ರಾಮಲಿಂಗಾ ರೆಡ್ಡಿ ಅವರು ರಾಜೀನಾಮೆ ಕೊಟ್ಟಿದ್ದಾರೆ. ಅವರಿಗೆ ಎಷ್ಟು ನೋವಾಗಿರಬೇಕು. ಇಂದು ರೋಷನ್ ಬೇಗ್ ಕೂಡ ರಾಜೀನಾಮೆ ಕೊಟ್ಟಿದ್ದಾರೆ. ಹೀಗಾಗಿ ಈ ರಾಜಕಾರಣದಿಂದ ಎಲ್ಲರಿಗೂ ಸಾಕಾಗಿದೆ. ಅವರು ಅನರ್ಹಗೊಳಿಸಲಿ, ಏನೇ ಮಾಡಲಿ ರಾಜೀನಾಮೆ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿ ತಮ್ಮ ನಿರ್ಧಾರವನ್ನು ತಿಳಿಸಿದರು.
ನಮ್ಮನ್ನು ಯಾರು ಬಂಧನದಲ್ಲಿ ಇಟ್ಟಿಲ್ಲ. ಸ್ಪೀಕರ್ ಈಗ ಫೋನ್ ಮಾಡಿ ಕರೆದರೆ ತಕ್ಷಣ ಬೆಂಗಳೂರಿಗೆ ಹೋಗುತ್ತೇವೆ. ನಮ್ಮ ಸ್ವಂತಃ ಖರ್ಚಿನಿಂದ ಇಲ್ಲಿಗೆ ಬಂದಿರುವುದು. ಯಾರ ಆಶ್ರಯವನ್ನು ಪಡೆದುಕೊಂಡು ಬಂದಿಲ್ಲ. ಪಕ್ಷ ಕಟ್ಟಿ ಬೆಳೆಸಿದವರು ನಾವು. ನಾವು ಯಾಕೆ ಕುದುರೆ ವ್ಯಾಪರಕ್ಕೆ ಬಗ್ಗೋದು. ಅದರ ಅವಶ್ಯಕತೆ ನಮಗೆ ಇಲ್ಲ. 13 ಜನರು ಶಾಸಕರು ಯಾರು ರಾಜೀನಾಮೆ ವಾಪಸ್ ಪಡೆಯಲ್ಲ. ಸಭಾಧ್ಯಕ್ಷರು ಕರೆಯಲಿ ಅವರ ಬಳಿ ನಮ್ಮ ಮನವಿ ಹೇಳಿಕೊಳ್ಳುತ್ತೇವೆ. ನಾವು ರಾಜಕೀಯ ನಿವೃತ್ತಿ ಪಡೆಯಲು ಸಿದ್ಧರಿದ್ದೇವೆ. ಇಲ್ಲಿಯವರೆಗೂ ರಾಜಕಾರಣಲ್ಲಿ ಕೈ-ಬಾಯಿಯನ್ನು ಶುದ್ಧವಾಗಿಟ್ಟುಕೊಂಡು ಕೆಲಸ ಮಾಡಿಕೊಂಡು ಬಂದಿದ್ದೇನೆ. ನಾವು ಮಂತ್ರಿಯನ್ನು ಕೇಳಿಲ್ಲ ಎಂದು ಭೈರತಿ ಬಸವರಾಜ್ ಸ್ಪಷ್ಟಪಡಿಸಿದರು.