ಮೈಸೂರು: ನಂಜನಗೂಡು ಉಪ ಚುನಾವಣೆಯಲ್ಲಿ ಮತದಾನ ಆರಂಭವಾಗಿದೆ. ಸಚಿವ ಸ್ಥಾನ ಕಳೆದುಕೊಂಡು ಕುಪಿತಗೊಂಡ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಳಿಕ ನಂಜನಗೂಡಿನಲ್ಲಿ ಬಿಜೆಪಿಯಿಂದ ಸ್ಫರ್ಧೆಗೆ ಇಳಿದಿದ್ದಾರೆ.
ಸ್ವತಃ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಡೀ ಸರ್ಕಾರವೇ ಪ್ರಚಾರ ನಡೆಸಿದ್ರೆ, ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಪಾಳಯ ಪ್ರತಿಷ್ಠೆಯ ಕಣದಲ್ಲಿ ಸವಾಲೊಡ್ಡಿದೆ.
ಬಿಜೆಪಿ ಚಿಹ್ನೆಯ ಅಡಿಯಲ್ಲಿ ಶ್ರೀನಿವಾಸ್‍ಪ್ರಸಾದ್ ಮತ್ತೊಮ್ಮೆ ಅದೃಷ್ಟ ಮತ್ತು ಶಕ್ತಿ ಪ್ರದರ್ಶನಕ್ಕೆ ಇಳಿದಿದ್ದಾರೆ. ಇತ್ತ ಜೆಡಿಎಸ್‍ನಿಂದ ಪಕ್ಷಾಂತರಗೊಂಡಿದ್ದ ಕಳಲೆ ಕೇಶವಮೂರ್ತಿರನ್ನು ಕಾಂಗ್ರೆಸ್ ಅಖಾಡಕ್ಕೆ ಇಳಿಸಿದೆ. ಉಪ ಯುದ್ಧದಿಂದ ಜೆಡಿಎಸ್ ದೂರ ಸರಿದಿದೆ. ಕ್ಷೇತ್ರದಲ್ಲಿ ಒಟ್ಟು 2 ಲಕ್ಷದ 506 ಮತದಾರರಿದ್ದಾರೆ. ಅವರಲ್ಲಿ 1 ಲಕ್ಷದ 1 ಸಾವಿರದ 267 ಮಂದಿ ಪುರುಷರು, 99 ಸಾವಿರದ 231 ಮಹಿಳೆಯರಿದ್ದಾರೆ. ಒಟ್ಟು 236 ಮತಗಟ್ಟೆಗಳಲ್ಲಿ ಮತ ಹಕ್ಕಿನ ಚಲಾವಣೆಯಾಗಲಿದೆ.
ಕಳಲೆಯಿಂದ ನೀತಿ ಸಂಹಿತೆ ಉಲ್ಲಂಘನೆ: ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕಳಲೆ ಕೇಶವಮೂರ್ತಿ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಆದ್ರೆ ಮತದಾನದ ವೇಳೆ ಮತಗಟ್ಟೆಯೊಳಗೆ ಪಕ್ಷದ ಶಾಲು ಧರಿಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ.