ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ಉಪಚುನಾವಣೆಯ ಹಿನ್ನೆಲೆಯಲ್ಲಿ ಕ್ಷೇತ್ರ ಬಿಟ್ಟು ಬೆಂಗಳೂರಿನಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತರು ಠಿಕಾಣಿ ಹೂಡಿದ್ದಾರೆ. ಟಿಕೆಟ್‍ಗಾಗಿ ಕಾಂಗ್ರೆಸ್ಸಿನ ರಾಜ್ಯ ನಾಯಕರ ಮುಂದೆ ಆಕಾಂಕ್ಷಿಗಳು ಪೆರೇಡ್ ನಡೆಸುತ್ತಿದ್ದಾರೆ.
ಕೆ.ಆರ್.ಪೇಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಎರಡು ಬಾರಿ ಸೋಲಿನ ಬಳಿಕ ಗೆಲ್ಲುವಿನ ನಿರೀಕ್ಷೆಯಲ್ಲಿರುವ ಕೈಗೆ ಬಂಡಾಯದ ಬಿಸಿ ತಟ್ಟುತ್ತಿದೆ. ಕಾಂಗ್ರೆಸ್ ವರಿಷ್ಠರಿಗೆ ಟಿಕೆಟ್ ಆಕಾಂಕ್ಷಿಗಳ ದಂಡು ತಲೆನೋವು ತಂದಿಟ್ಟಿದೆ. ತಮಗೆ ಉಪಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡಿ ಎಂದು ಆಕಾಂಕ್ಷಿಗಳು ಕ್ಷೇತ್ರ ಬಿಟ್ಟು ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾರೆ.
ಯಾರಿಗೇ ಟಿಕೆಟ್ ನೀಡಿದರೂ ಉಳಿದವರು ಬಂಡಾಯ ಏಳುವ ಸಾಧ್ಯತೆ ಇದ್ದು, ಅಸಮಾಧಾನಗೊಂಡ ಆಕಾಂಕ್ಷಿತರು ಬಂಡಾಯವಾಗಿ ಸ್ಪರ್ಧೆಗಿಳಿದರೆ ಏನು ಗತಿ ಎಂದು ಕಾಂಗ್ರೆಸ್ಸಿನಲ್ಲಿ ಮತ್ತೊಮ್ಮೆ ಸೋಲಿನ ಆತಂಕ ಮನೆ ಮಾಡಿದೆ. ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಡಿಕೆ ಶಿವಕುಮಾರ್ ಅವರ ಆಪ್ತ ಹರಳಹಳ್ಳಿ ವಿಶ್ವನಾಥ್, ಕಿಕ್ಕೇರಿ ಸುರೇಶ್, ಎಂ.ಡಿ.ಕೃಷ್ಣಮೂರ್ತಿ, ಜಿಪಂ ಸದಸ್ಯ ಕೆ.ಎಲ್.ದೇವರಾಜು ಸೇರಿದಂತೆ 10ಕ್ಕೂ ಹೆಚ್ಚು ಮಂದಿಯಿಂದ ಟಿಕೆಟ್‍ಗಾಗಿ ಲಾಭಿ ನಡೆಯುತ್ತಿದೆ ಎನ್ನಲಾಗಿದೆ.
ಈಗಾಗಲೇ ಕೆ.ಆರ್.ಪೇಟೆ ಉಪಚುನಾವಣೆಗೆ ಕಾಂಗ್ರೆಸ್ಸಿನಿಂದ ಸ್ಪರ್ಧಿಸುತ್ತಿರುವುದಾಗಿ ಜಿಪಂ ಸದಸ್ಯ ದೇವರಾಜು ನಾಮಪತ್ರ ಸಲ್ಲಿಸಿದ್ದಾರೆ. ಇತ್ತ ಟಿಕೆಟ್ ನೀಡದಿದ್ದರೆ ಬಂಡಾಯವಾಗಿ ಸ್ಪರ್ಧಿಸುವುದಾಗಿ ಆಕಾಂಕ್ಷಿಗಳು ಕಾಂಗ್ರೆಸ್ಸಿಗೆ ಎಚ್ಚರಿಕೆ ರವಾನಿಸಿದ್ದಾರೆ.