ಬೆಂಗಳೂರು: ಸಿದ್ದರಾಮಯ್ಯನವರು ಒಂದು ಕಡೆ ಧರ್ಮ ಒಡೆಯುವ, ಮತ್ತೊಂದು ಕಡೆ ವೀರ್ ಸಾವರ್ಕರ್‌ರಂತಹ ಸ್ವಾತಂತ್ರ್ಯ ಸೇನಾನಿಗಳನ್ನು ಅವಹೇಳನ ಮಾಡುತ್ತಿರುವುದನ್ನು ಜನ ಗಮನಿಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಧರ್ಮ ವಿಭಜನೆಗೆ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಟ್ವೀಟ್ ಮಾಡಿರುವ ಬಿ.ವೈ. ವಿಜಯೇಂದ್ರ ಅವರು, ತಮ್ಮ ಅವಧಿಯ ಜನ ವಿರೋಧಿ ಆಡಳಿತ ಹಾಗೂ ರಾಜಕಾರಣದ ವೈಫಲ್ಯ ಮುಚ್ಚಿಕೊಳ್ಳಲು ಧರ್ಮ ರಾಜಕಾರಣಕ್ಕೆ ಕೈ ಹಾಕಿ ಮುಖಭಂಗ ಅನುಭವಿಸಿ ತಕ್ಕ ಬೆಲೆ ತೆತ್ತ ಮಾನ್ಯ ಸಿದ್ದರಾಮಯ್ಯನವರೇ, ಪಶ್ಚಾತ್ತಾಪದ ಮಾತು ನಿಮ್ಮಿಂದ ಯಾರೂ ನಿರೀಕ್ಷಿಸುವುದಿಲ್ಲ. ಆದರೆ ಧರ್ಮಗುರುಗಳ ದರ್ಶನಕ್ಕೆ ತೆರಳಿ ಅಲ್ಲಿಯೂ ವಿತಂಡ ವಿವಾದ ಸೃಷ್ಟಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪರೀಕ್ಷೆಯಲ್ಲಿ ನಡೆಯುವ ಅಕ್ರಮ ತಡೆಗೆ ಇಂಟರ್‌ನೆಟ್ ಸ್ಥಗಿತಗೊಳಿಸಿದ ಸರ್ಕಾರ
ಸಿದ್ದರಾಮಯ್ಯನವರೇ ಒಂದು ಕಡೆ ಧರ್ಮ ಒಡೆಯುವ, ಮತ್ತೊಂದು ಕಡೆ ವೀರ್ ಸಾವರ್ಕರ್‌ರಂತಹ ಸ್ವಾತಂತ್ರ್ಯ ಸೇನಾನಿಗಳನ್ನು ಅವಹೇಳನ ಮಾಡುವ ಮೂಲಕ ಮತಾಂಧರನ್ನು ಎತ್ತಿ ಕಟ್ಟುವ ನಿಮ್ಮ ರಾಜಕೀಯ ನಡೆ ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಧರ್ಮರಾಜಕಾರಣದ ಬಿಸಿ ಅನುಭವಿಸಿಯೂ ಮತ್ತದೇ ಹಾದಿಯಲ್ಲಿ ಸಾಗಿರುವ ನಿಮಗಾಗಿ ಬಹುದೊಡ್ಡ ಕಂದಕ ಕಾಯುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಸಿನಿಮಾ ನೋಡಿಕೊಂಡು ಬರುತ್ತಿದ್ದಾಗ ಭೀಕರ ಅಪಘಾತ – ನವ ವಿವಾಹಿತೆ ಸ್ಥಳದಲ್ಲೇ ಸಾವು, ಪತಿ ಗಂಭೀರ
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿರುವ ರಂಭಾಪುರಿ ಮಠಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಅವರನ್ನು ರಂಭಾಪುರಿ ಪೀಠದ ಶ್ರೀ ಪ್ರಸನ್ನ ವೀರ ಸೋಮೇಶ್ವರ ಸ್ವಾಮೀಜಿಗಳ ಆಶೀರ್ವಾದ ಪಡೆದು, ವೀರಭದ್ರನಾಥ ಸ್ವಾಮಿ, ರೇಣುಕಾಚಾರ್ಯರ ಗದ್ದುಗೆಯ ದರ್ಶನ ಸಹ ಪಡೆದಿದ್ದರು. ಇದೇ ವೇಳೆ ಶ್ರೀಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಧರ್ಮ ಒಡೆಯುವುದು ನನ್ನ ಉದ್ದೇಶ ಆಗಿರಲಿಲ್ಲ. ಕೆಲವರು ನನ್ನನ್ನ ದಾರಿ ತಪ್ಪಿಸಿದರು. ಇನ್ಯಾವತ್ತೂ ಧರ್ಮದ ವಿಷಯಕ್ಕೆ ಹೋಗುವುದಿಲ್ಲ. ರಾಜ್ಯ ಜನರ ಅಭಿವೃದ್ದಿಗೆ ಆದ್ಯತೆ ನೀಡುತ್ತೇನೆ ಎಂದಿದ್ದರು.
ಇದಾದ ನಂತರ ರಂಭಾಪುರಿ ಶ್ರೀಗಳ ಬಳಿ ಸಿದ್ದರಾಮಯ್ಯನವರು ಪಶ್ಚಾತ್ತಾಪದ ಮಾತುಗಳನ್ನು ಆಡಿದ್ದಾರೆ ಎನ್ನಲಾಗಿತ್ತು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ನಾನು ಯಾವುದೇ ಪಶ್ಚಾತಾಪದ ಮಾತುಗಳನ್ನು ಆಡಿಲ್ಲ. ನಾವು ಲಿಂಗಾಯಿತ ಧರ್ಮ ಮಾಡುವಾಗ ಏನೇನು ಮಾಡಿದ್ದೇನೆ ಅಂತ ಹೇಳಿದ್ದೀನಿ ಅಷ್ಟೇ. ಇದು ಅಪಪ್ರಚಾರ ಆಗಿದೆ. ಧರ್ಮದ ಬಗ್ಗೆ ನಾನೇನು ತಲೆ ಕೆಡಿಸಿಕೊಳ್ಳಲು ಹೋಗಿರಲಿಲ್ಲ. ಶ್ಯಾಮನೂರು ಶಿವಶಂಕರಪ್ಪ ಅವರು ವೀರಶೈವ ಧರ್ಮ ಮಾಡಿ ಅಂತ ಅರ್ಜಿ ಕೊಟ್ಟರು ಆಗಿನಿಂದ ಇದು ಶುರುವಾಯ್ತು ಅಷ್ಟೇ ಎಂದು ಹೇಳಿದ್ದರು.