ಬೆಂಗಳೂರು: ಸಿಎಂ ರಾಜೀನಾಮೆ ಕೊಡುವ ಕಾಲ ಸನ್ನಿಹಿತವಾಗಿದೆ. ಯಾವ ಸಂದರ್ಭದಲ್ಲಿ ಬೇಕಾದರೂ ರಾಜೀನಾಮೆ ಕೊಟ್ಟೇ ಕೊಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ (BY Vijayendra) ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗಿಂದು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ (Siddaramaiah) ರಾಜೀನಾಮೆಗೆ ಕ್ಷಣಗಣನೆ ಎಂಬ ಹೇಳಿಕೆ ಹಿನ್ನೆಲೆ ಕುರಿತ ಪ್ರಶ್ನೆಗೆ ಉತ್ತರಿಸಿದರು. ಸಾಕಷ್ಟು ಜನ ಸಚಿವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡುತ್ತಿದ್ದಾರೆ. ಡಿ.ಕೆ ಶಿವಕುಮಾರ್ (DK Shivakumar) ಅವರು ಪಾಪ ಏನೋ ಪ್ಲಾನ್ ಜೊತೆ ಖರ್ಗೆಯವರ ಮನೆಗೆ ಹೋಗಿದ್ದರು. ಬರೇ ಬಿಲ್ಡಿಂಗ್ ಫೋಟೊ ಕಾಣುತ್ತಿತ್ತು. ಅದೇನು ಪ್ಲಾನ್ ಎಂದು ಗೊತ್ತಾಗಿಲ್ಲ ಎಂದು ವ್ಯಂಗ್ಯವಾಡಿದರು.
Advertisement
ನಮ್ಮ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಮುಖಂಡರೊಂದಿಗೆ ಲೋಕೋಪಯೋಗಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಶಿಕಾರಿಪುರದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ ನಂ-57 ಶಿವಮೊಗ್ಗ- ಶಿಕಾರಿಪುರ -ಹಾನಗಲ್ -ತಡಸ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿರುವ ಕುಟ್ರಳ್ಳಿ ಸುಂಕ ವಸೂಲಾತಿ ಕೇಂದ್ರದಿಂದ ನಮ್ಮ ರೈತರು ಹಾಗೂ ಸಾರ್ವಜನಿಕರಿಗೆ… pic.twitter.com/PoNSuzUQWq
— Vijayendra Yediyurappa (@BYVijayendra) October 7, 2024
Advertisement
ವಿಜಯೇಂದ್ರ ಅವರು ಸಿಎಂ ಕನಸು ಕಾಣುತ್ತಿದ್ದಾರೆ. ಹಾಗಾಗಿ ಸರ್ಕಾರ ಪತನಕ್ಕೆ ಷಡ್ಯಂತ್ರ ನಡೆಸುತ್ತಿದ್ದಾರೆ ಎಂಬ ಮಾತುಗಳಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕನಸು ಕಾಣುವ ಸಂದರ್ಭ ಬಂದರೆ ಹೇಳುವೆ, ಸದ್ಯಕ್ಕೆ ಬೇಡ ಎಂದು ನಗುತ್ತಾ ತಿಳಿಸಿದರು.
Advertisement
ಆರೋಪಿ ಸ್ಥಾನದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಒಂದು ಪಾರದರ್ಶಕ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂಬ ಆಗ್ರಹವನ್ನು ಬಿಜೆಪಿ ನಿರಂತರವಾಗಿ ಮಾಡುತ್ತ ಬಂದಿದೆ. ನಮ್ಮ ವಿಚಾರಗಳು ಸ್ಪಷ್ಟ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಕೇಳೋ ಮೊದಲು ವಿಜಯೇಂದ್ರ ನೀಡಲಿ: ಈಶ್ವರ್ ಖಂಡ್ರೆ
Advertisement
ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಈ ಸರಕಾರ ಬಂದ ಮೇಲೆ ಅಭಿವೃದ್ಧಿ ಎಂಬುದು ಸ್ಥಗಿತ ಎಂಬುದಕ್ಕಿಂತ ಶುರುವೇ ಆಗಿಲ್ಲ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಇದರ ನಡುವೆ ಜನರೂ ಈ ಸರಕಾರದ ಬಗ್ಗೆ ವಿಶ್ವಾಸ ಕಳಕೊಂಡಿದ್ದಾರೆ. ಮುಡಾ, ವಾಲ್ಮೀಕಿ ನಿಗಮದ ಹಗರಣಗಳ ಪಾರದರ್ಶಕ ತನಿಖೆಯ ದೃಷ್ಟಿಯಿಂದ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕಿದೆ. ಭಂಡತನ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ವಿಜಯೇಂದ್ರ ಹೇಳಿದರು. ಇದನ್ನೂ ಓದಿ: ಪ್ರತಿಯೊಬ್ಬರಿಗೂ ಮುಖ್ಯಮಂತ್ರಿ ಆಗಬೇಕು ಅಂತಾ ಆಸೆ ಇರುತ್ತೆ: ಸತೀಶ್ ಜಾರಕಿಹೊಳಿ
ಜಾತಿ ಗಣತಿ ವಿಷಯದಲ್ಲಿ ಪ್ರಾಮಾಣಿಕತೆಯ ಕೊರತೆ
ಪ್ರಶ್ನೆಗೆ ಉತ್ತರ ಕೊಟ್ಟ ಬಿ.ವೈ.ವಿಜಯೇಂದ್ರ ಅವರು, ಜಾತಿ ಜನಗಣತಿ ಬಗ್ಗೆ ಸಿದ್ದರಾಮಯ್ಯನವರು ಮಾತನಾಡುತ್ತಿದ್ದಾರೆ. ಎಲ್ಲೋ ಒಂದು ಕಡೆ ಪ್ರಾಮಾಣಿಕತೆಯ ಕೊರತೆ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿಗಳಿಗೆ ಜಾತಿಗಣತಿ ವಿಚಾರದಲ್ಲಿ ಪ್ರಾಮಾಣಿಕತೆ ಇದ್ದಿದ್ದೇ ಆದರೆ, ಹಿಂದಿನ ಅವಧಿಯಲ್ಲಿ ಕೈಸೇರಿದ್ದ ವರದಿಯನ್ನು ಅವತ್ತೇ ಅನುಷ್ಠಾನ ಮಾಡಬಹುದಿತ್ತು. ಅವತ್ಯಾಕೆ ಮಾಡಿಲ್ಲ? ಈಗ ಸಿಎಂ ಕುರ್ಚಿ ಅಲ್ಲಾಡುತ್ತಿರುವಾಗ ತಕ್ಷಣ ಅವರಿಗೆ ಜ್ಞಾನೋದಯ ಆಗಿದೆ. ನೆನಪು ಕೂಡ ಆಗಿದೆ. ಕ್ಯಾಬಿನೆಟ್‍ಗೆ ತಂದು ಅನುಷ್ಠಾನ ಮಾಡುವುದಾಗಿ ಹೇಳಿದ್ದಾರೆ ಎಂದು ವಿಜಯೇಂದ್ರ ಆಕ್ಷೇಪಿಸಿದರು.
ಇವತ್ತು ಡಿ.ಕೆ ಶಿವಕುಮಾರ್ ಅವರೇನು ಹೇಳಿದ್ದಾರೆ? ಒಕ್ಕಲಿಗರ ಸಂಘದ ಅಧ್ಯಕ್ಷ ಬಾಲಕೃಷ್ಣ ಅವರೇನು ಹೇಳಿದ್ದಾರೆ? ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಏನು ಹೇಳಿದ್ದಾರೆ? ಎಲ್ಲವನ್ನೂ ತಾವು ಗಮನಿಸಬೇಕು. ರಾಜಕೀಯ ಬೇರೆ, ಆದರೆ, ರಾಜಕೀಯದ ಹೊರತಾಗಿ ಮುಖ್ಯಮಂತ್ರಿಗಳು ನಡೆದುಕೊಳ್ಳಬೇಕಿದೆ. ಮುಖ್ಯಮಂತ್ರಿಗಳು ರಾಜ್ಯದ ಎಲ್ಲ ವರ್ಗ, ಸಮುದಾಯಗಳಿಗೆ ನ್ಯಾಯ ಕೊಡಬೇಕು. ಇವತ್ತು ಹಿಂದುಳಿದ ವರ್ಗಗಳು, ಶೋಷಿತ ಸಮುದಾಯಗಳಿಗೆ ನ್ಯಾಯ ಕೊಡಬೇಕೆಂಬುದರಲ್ಲಿ ಎರಡು ಮಾತಿಲ್ಲ. ಅದರಿಂದ ಮತ್ತೊಬ್ಬರಿಗೆ ಅನ್ಯಾಯ ಆಗಬಾರದು. ನ್ಯಾಯಯುತವಾಗಿ ನಡೆದುಕೊಳ್ಳಬೇಕಿದೆ. ಜಾತಿಗಣತಿ ಅವೈಜ್ಞಾನಿಕ ಎಂಬುದು ಎಲ್ಲರ ಅಭಿಪ್ರಾಯ ಎಂದು ವಿಶ್ಲೇಷಿಸಿದರು. ತಮ್ಮ ಸ್ಥಾನಕ್ಕೆ ಕುತ್ತು ಬಂದಾಗ ಮುಖ್ಯಮಂತ್ರಿಗಳು ಭಾವನಾತ್ಮಕ ರಾಜಕಾರಣ ಮಾಡುತ್ತಿರುವ ಪ್ರಯತ್ನ ಎಂಬ ಭಾವನೆ ಎಲ್ಲರದೂ ಕೂಡ ಎಂದು ತಿಳಿಸಿದರು.