– ರಾಮಭಕ್ತನನ್ನು ಬಂಧಿಸಲು ನಿಮಗೆಷ್ಟು ಧೈರ್ಯ?
– ಹಿಂದೂ ವಿರೋಧಿ ಸಿಎಂ ವಿರುದ್ಧ ಹೋರಾಟ ಎಂದ ವಿಜಯೇಂದ್ರ
– ಕಾಂಗ್ರೆಸ್ ಹಿಂದೂ ವಿರೋಧಿ ಅನ್ನೋದನ್ನ ತೋರಿಸಿದೆ ಎಂದ ಶಾಸಕ
ಬೆಂಗಳೂರು: ರಾಜ್ಯದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ (Congress Government) ಹಿಂದೂ ವಿರೋಧಿ ಸರ್ಕಾರ. ಈ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನ ಖಂಡಿಸಿ ಬುಧವಾರ ರಾಜ್ಯಾದ್ಯಂತ ಹೋರಾಟ ಮಾಡಲು ಕರೆ ನೀಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ ವಿಜಯೇಂದ್ರ (BY Vijayendra) ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಮಾಧ್ಯಮಗಳೊಂದಿಗೆ ಮತನಾಡಿದ ಅವರು, ತಾನು ಹಿಂದೂ ವಿರೋಧಿ ಎಂಬುದನ್ನ ಈ ಸರ್ಕಾರ ರಾಜ್ಯ ಮತ್ತು ದೇಶದ ಜನತೆಗೆ ಪದೇಪದೇ ನೆನಪು ಮಾಡುತ್ತಿದೆ. ಹುಬ್ಬಳ್ಳಿಯಲ್ಲಿ (Hubballi) 31 ವರ್ಷದ ಹಳೆಯ ಕೇಸನ್ನು ರೀ ಓಪನ್ ಮಾಡಿ ಹಿಂದೂ ಕಾರ್ಯಕರ್ತ ಶ್ರೀಕಾಂತ ಪೂಜಾರಿಯವರನ್ನು ಬಂಧಿಸಿದ್ದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ ಎಂದು ಆಕ್ರೋಶ ಹೊರಹಾಕಿದರು.
ಹಿಂದೂ ವಿರೋಧಿ ಅನ್ನೋದನ್ನ ತೋರಿಸಿದೆ:
ಜ.22ರಂದು ಅಯೋಧ್ಯೆಯಲ್ಲಿ (Ayodhya) ಭಗವಾನ್ ಶ್ರೀರಾಮನ ಪ್ರತಿಷ್ಠಾ ಕಾರ್ಯಕ್ರಮ ಆಗುವ ಶುಭ ಸಂದರ್ಭದಲ್ಲಿ ರಾಜ್ಯ ಮಾತ್ರವಲ್ಲದೇ ದೇಶದಾದ್ಯಂತ ಕೋಟ್ಯಂತರ ಹಿಂದೂ ಕಾರ್ಯಕರ್ತರು ಸಂತಸದಲ್ಲಿದ್ದಾರೆ. ದೇಶದೆಲ್ಲೆಡೆ ಸಂಭ್ರಮದ ವಾತಾವರಣ ಇದೆ. ಇಂಥ ಸಂದರ್ಭವನ್ನು ಬಳಸಿಕೊಂಡು ಕೈಗೊಂಡ ಕ್ರಮದ ಮೂಲಕ ತಮ್ಮದು ಹಿಂದೂ ವಿರೋಧಿ ಸರ್ಕಾರ ಎಂದು ದೇಶಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಟೀಕಿಸಿದರು.
ರಾಜ್ಯಾದ್ಯಂತ ಹೋರಾಟಕ್ಕೆ ಕರೆ:
ಶ್ರೀರಾಮನ ಪ್ರತಿಮೆಯನ್ನು ಮೈಸೂರಿನ ಶಿಲ್ಪಿ ಕೆತ್ತನೆ ಮಾಡಿದ್ದಾಗಿ ಸಂಭ್ರಮದಿಂದ ಇದ್ದೆವು. ರಾಜ್ಯದ ಪ್ರತಿಯೊಬ್ಬರು ಹೆಮ್ಮೆಪಡುವ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಹಳೆಯ ಕೇಸನ್ನು ಮತ್ತೆ ಓಪನ್ ಮಾಡಿ ಶ್ರೀಕಾಂತ ಪೂಜಾರಿಯವರನ್ನ ಬಂಧಿಸಿದೆ, ಇದು ಖಂಡನೀಯ. ಆದ್ದರಿಂದ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನ ಖಂಡಿಸಿ ಬುಧವಾರ ರಾಜ್ಯಾದ್ಯಂತ ಹೋರಾಟ ಮಾಡಲು ಕರೆ ನೀಡಿದ್ದೇವೆ. ಬೆಂಗಳೂರಿನ ಫ್ರೀಡಂ ಪಾರ್ಕ್ ಮಾತ್ರವಲ್ಲದೇ, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರಕಟಿಸಿದರು.
ಹಿಂದೂ ವಿರೋಧಿ ಸಿಎಂ ವಿರುದ್ಧ ಹೋರಾಟ:
ಹಿಂದೂ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಹೋರಾಟ ನಡೆಯಲಿದೆ. ಪದೇಪದೇ ಅಲ್ಪಸಂಖ್ಯಾತರನ್ನ ಓಲೈಸುವ ರಾಜ್ಯದ ಕಾಂಗ್ರೆಸ್ ಸರ್ಕಾರ, ಬರಗಾಲದಲ್ಲೂ ತುಷ್ಟೀಕರಣ ಮಾಡುತ್ತಿದೆ. ಇದಕ್ಕೆ ತಕ್ಕ ಶಾಸ್ತಿಯನ್ನು ಮತದಾರರು ಮುಂದಿನ ದಿನಗಳಲ್ಲಿ ಮಾಡುತ್ತಾರೆ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದರು.
ರಾಮಭಕ್ತನನ್ನು ಬಂಧಿಸಲು ನಿಮಗೆಷ್ಟು ಧೈರ್ಯ?
ಅಯೋಧ್ಯೆಯ ಮಂತ್ರಾಕ್ಷತೆಯನ್ನು ರಾಜ್ಯ ಮಾತ್ರವಲ್ಲದೆ, ದೇಶಾದ್ಯಂತ ಪ್ರತಿ ಮನೆಗೂ ತಲುಪಿಸುತ್ತಿದ್ದಾರೆ. ಅದಕ್ಕೂ ಕಾಂಗ್ರೆಸದ್ ಸರ್ಕಾರ ಅಡ್ಡಿಯುಂಟುಮಾಡುತ್ತಿದೆ. ಪುಡಾರಿತನ ಮಾಡುತ್ತಿದೆ, ಇದನ್ನೆಲ್ಲ ಗಮನಿಸಿ ಹೋರಾಟಕ್ಕೆ ಮುಂದಾಗಿದ್ದೇವೆ. ದೇಶವೇ ಸಂಭ್ರಮದಲ್ಲಿರುವಾಗ ರಾಮಭಕ್ತನನ್ನು ಬಂಧಿಸುವುದಾದರೆ ನಿಮಗೆಷ್ಟು ಧೈರ್ಯ? ಕಾನೂನು-ಸುವ್ಯವಸ್ಥೆಗೆ ಭಂಗ ತರುವ ದುಸ್ಸಾಹಸಕ್ಕೆ ಮುಖ್ಯಮಂತ್ರಿಗಳೇ ಕೈ ಹಾಕುತ್ತಿದ್ದಾರೆ ಎಂದು ವಿಜಯೇಂದ್ರ ಅವರು ಆಕ್ಷೇಪ ವ್ಯಕ್ತಪಡಿಸಿದರು.
31 ವರ್ಷದ ಹಳೆಯ ಕೇಸನ್ನು ಈಗಲೇ ರೀ ಓಪನ್ ಮಾಡಬೇಕಿತ್ತೇ? ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ಗೃಹ ಸಚಿವರಿಗೆ ಹಳೆಯ ಕೇಸುಗಳ ಬಗ್ಗೆ ಬಹಳ ಕಾಳಜಿ ಇರುವುದು ಸಂತೋಷ. ಆದ್ರೆ ಮುಂದೆ ನಡೆಯುವ ಘಟನೆಗೆ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರೇ ಹೊಣೆಗಾರರಾಗುತ್ತಾರೆ. ಸಿಎಂ ಕ್ರಮವನ್ನು ಪಕ್ಷಾತೀತವಾಗಿ ಎಲ್ಲರೂ ಖಂಡಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ದಬ್ಬಾಳಿಕೆ ಮತ್ತು ಪ್ರತೀಕಾರ ಮನೋಭಾವ ಖಂಡಿಸಬೇಕಾಗಿದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ಸಿಗರ ಮಾತುಗಳು ಅವರ ಸಂಸ್ಕೃತಿಯನ್ನ ತೋರಿಸುತ್ತದೆ. ಅಯೋಧ್ಯೆ ಎಂಬುದು ಒಂದು ಭಾವನಾತ್ಮಕ ಸಂಬಂಧದ ವಿಚಾರ. ಶ್ರೀರಾಮನ ಜನ್ಮಸ್ಥಳವದು. ಕಾಂಗ್ರೆಸ್ಸಿಗರ ಹುಚ್ಚು ಹೇಳಿಕೆಗಳಿಗೆ ನಾವು ಉತ್ತರ ಕೊಡಬೇಕಿಲ್ಲ. ಹಿಂದೂಗಳು, ಹಿಂದೂ ಕಾರ್ಯಕರ್ತರ ಭಾವನೆಗೆ ಧಕ್ಕೆ ತರುವುದರಲ್ಲಿ ಇವರು ನಿಸ್ಸೀಮರು. ಹಿಂದೂಗಳಿಗೆ ನೋವು ಕೊಡುವುದರಲ್ಲಿ ಕಾಂಗ್ರೆಸ್ಸಿಗರಿಗೆ ಎಲ್ಲಿಲ್ಲದ ಸಂತೋಷ ಎಂದು ಟೀಕಿಸಿದರು.