ಬೆಂಗಳೂರು: ಹಿಂದೂಗಳ ತೇಜೋವಧೆಗೆ ಸದನ ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಸುಳ್ಳು ಹೇಳುತ್ತಾ ದೇಶಾದ್ಯಂತ ಓಡಾಡಿದ್ರು. ಈಗ ವಿಪಕ್ಷ ನಾಯಕನ ಸ್ಥಾನಕ್ಕೂ ರಾಹುಲ್ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ಹಿಂದೂಗಳು ಹಿಂಸಾಚಾರ, ದ್ವೇಷದಲ್ಲಿ ಹಗಲಿರುಳು ನಿರತರಾಗಿದ್ದಾರೆ ಅಂತ ಉಲ್ಲೇಖ ಮಾಡಿದ್ದಾರೆ. ಈ ಮೂಲಕ ರಾಹುಲ್ ಗಾಂಧಿಯವರು ದೇಶದ ಅಸಂಖ್ಯಾತ ಹಿಂದೂಗಳಿಗೆ ತೇಜೋವಧೆ ಮಾಡುವ ಕೆಲಸ ಮಾಡಿದ್ದಾರೆ. ನಿನ್ನೆ ಅಗ್ನಿವೀರ್, ರೈತರು, ಅಯೋಧ್ಯೆ ಮತ್ತು ಮೈಕ್ರೋ ಫೋನ್ ಬಗ್ಗೆ ಮಾತಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸುಳ್ಳು ಹೇಳಿ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ರಾಹುಲ್ ಗಾಂಧಿ ದೇಶದ ಹಿಂದೂಗಳ ಕ್ಷಮೆ ಯಾಚಿಸಬೇಕು. ಅವರನ್ನು ಸುಳ್ಳು ಹೇಳಿ ಓಡಿಹೋಗಲು ಬಿಡಲ್ಲ. ಸದನದಲ್ಲಿ ಹಿಂದೂಗಳಿಗೆ ರಾಹುಲ್ ಗಾಂಧಿ ಅಪಮಾನ ಮಾಡಿದ್ದಾರೆ. ನೂರರ ಗಡಿ ದಾಟಲಾಗದ ಕಾಂಗ್ರೆಸ್ ನಾಯಕ ರಾಹುಲ್ ವಿಪಕ್ಷ ನಾಯಕ ಆಗಿ ಮನಸೋ ಇಚ್ಛೆ ಮಾತಾಡಲು ಸದನ ಬಳಸಿಕೊಳ್ತಿದ್ದಾರೆ. ಹಿಂದೂಗಳ ತೇಜೋವಧೆಗೆ ಸದನ ಬಳಸಿಕೊಳ್ತಿರೋದು ಸರಿಯಲ್ಲ ಎಂದರು.
ಸಿಖ್ ಹತ್ಯಾಕಾಂಡಕ್ಕೆ ಇದೇ ಕಾಂಗ್ರೆಸ್ (Congress) ಕಾರಣ. ಎಮರ್ಜೆನ್ಸಿ ಹೇರಿ ಜನರ ಮೇಲೆ ದಬ್ಬಾಳಿಕೆ ಮಾಡಿದ್ದೂ ಇದೇ ಕಾಂಗ್ರೆಸ್. ಸೋಮವಾರ ರಾಹುಲ್ ಗಾಂಧಿ ಮಾತುಗಳನ್ನು ಯಾರೂ ಕ್ಷಮಿಸಲು ಸಾಧ್ಯವಿಲ್ಲ. ಚಿದಂಬರಂ ಕೂಡಾ ಹಿಂದೊಮ್ಮೆ ಹಿಂದೂಗಳು ಭಯೋತ್ಪಾದಕರು ಅಂದಿದ್ರು. ಇದೇ ರಾಹುಲ್ ಈ ಹಿಂದೆ ಭಯೋತ್ಪಾದನೆ ಬೆಂಬಲಿಸುವ ಹಿಂದೂಗಳನ್ನು ದೇಶ ಬಿಟ್ಟು ಓಡಿಸಬೇಕು ಅಂದಿದ್ರು. ಇಲ್ಲಿನ ಸಚಿವ ಸತೀಶ್ ಜಾತಕಿಹೊಳಿ ಸಹ ಹಿಂದೂ ಪದವನ್ನು ಅವಹೇಳನಕಾರಿಯಾಗಿ ಬಳಸಿದ್ರು ಎಂದು ಕಿಡಿಕಾರಿದರು.
ಅಗ್ನಿವೀರರರಿಗೂ ರಾಹುಲ್ ಗಾಂಧಿ ಅಪಮಾನ ಮಾಡಿದ್ದಾರೆ. ಸ್ಪೀಕರ್ ಸ್ಥಾನಕ್ಕೂ ಅವಮಾನ ಮಾಡಿದ್ದಾರೆ. ಬೇಜವಾಬ್ದಾರಿಯಿಂದ ರಾಹುಲ್ ನಡೆದುಕೊಳ್ತಿದ್ದಾರೆ. ದೇಶದ ಹಿಂದೂಗಳ ಅಪಮಾನ ಮಾಡಿದ್ದಾರೆ. ರಾಹುಲ್ ಗಾಂಧಿ (Rahul Gandhi) ದೇಶದ ಜನರ ಕ್ಷಮೆ ಕೇಳಲಿ ಎಂದು ಇದೇ ವೇಳೆ ವಿಜಯೇಂದ್ರ ಆಗ್ರಹಿಸಿದರು.
ಅಯೋಧ್ಯೆಯಲ್ಲಿ ಭೂಮಿ ಕಳದೆದುಕೊಂಡವರಿಗೆ ಹಣ ನೀಡಿಲ್ಲ ಎಂದು ರಾಹುಲ್ ಗಾಂಧಿ ಸುಳ್ಳು ಹೇಳಿದ್ದಾರೆ. ಆದರೆ 253 ಕೋಟಿ ಉತ್ತರ ಪ್ರದೇಶ ಸರ್ಕಾರ ಭೂಮಿ ಮನೆ ಕಳೆದುಕೊಂಡ ಜನರಿಗೆ ನೀಡಿದೆ. ಯುಪಿಎ ಸರ್ಕಾರ ಅದರ ದಾಖಲೆ ನೀಡಿದೆ. ರಾಹುಲ್ ಗೆ ಆಧಾರ ಕೇಳಿದಾಗ ನಿನ್ನೆ ಸದನದಲ್ಲಿ ಬಾಯಿ ಮುಚ್ಚಿ ಕುಳಿತಿದ್ರು ಎಂದು ಗರಂ ಆದರು.