– ಶಿವಕುಮಾರ್ ತಮ್ಮ ಹೇಳಿಕೆಯನ್ನು ತಕ್ಷಣ ಹಿಂಪಡೆಯಲಿ; ವಿಜಯೇಂದ್ರ ಆಗ್ರಹ
ಬೆಂಗಳೂರು: ಡಿ.ಕೆ ಶಿವಕುಮಾರ್ (D K Shivakumar) ಅವರು ಸಿಎಂ ಆಗುವ ಕನಸು ಕಾಣುತ್ತಿದ್ದು, ಆ ಕನಸು ನನಸಾಗಲಿ ಎಂಬ ದೃಷ್ಟಿಯಿಂದ ಗಾಂಧಿ ಕುಟುಂಬವನ್ನು ಖುಷಿಪಡಿಸಲು ಇಂಥ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ (B Y Vijayendra) ಟಾಂಗ್ ಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಚಾಮುಂಡಿ ಬೆಟ್ಟವು ಕೇವಲ ಹಿಂದೂಗಳ ಆಸ್ತಿಯಲ್ಲ ಎಂಬ ಮಾತನ್ನು ಆಡಿದ್ದಾರೆ. ಡಿಕೆಶಿ ಅವರು ತಮ್ಮ ಹೇಳಿಕೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬಾನು ಮುಷ್ತಾಕ್ಗೆ ದಸರಾ ಆಹ್ವಾನ – ಉದ್ದೇಶವೋ, ದುರುದ್ದೇಶವೋ ಬಹಿರಂಗಪಡಿಸಲಿ – ವಿಜಯೇಂದ್ರ
ಡಿಕೆಶಿ ಅವರು ಗಾಂಧಿ ಕುಟುಂಬವನ್ನು ಖುಷಿಪಡಿಸಲು ಈ ರೀತಿ ಹಿಂದೂಗಳಿಗೆ ಅಪಮಾನ ಮಾಡಿರುವುದನ್ನು ಹಿಂದೂ ಸಮಾಜ ಒಪ್ಪಲು ಸಾಧ್ಯವಿಲ್ಲ. ದಸರಾ ಉತ್ಸವಕ್ಕೆ, ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮೀಯರೂ ಭೇಟಿ ಕೊಡುತ್ತಾರೆಂಬುದು ನಮಗೂ ಗೊತ್ತಿದೆ. ಆದರೆ, ಇದು ಹಿಂದೂಗಳಿಗೆ ಸಂಬಂಧಿಸಿದ್ದಲ್ಲ ಎಂಬ ಹೇಳಿಕೆ ಹಿಂದೂಗಳಿಗೆ ಮಾಡಿದ ಅಪಮಾನ. ಇದು ಅಕ್ಷಮ್ಯ ಅಪರಾಧ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:
ಡಿಕೆಶಿ ಅವರು ಸದನದಲ್ಲಿ ನಮಸ್ತೇ ಸದಾ ವತ್ಸಲೇ ಗೀತೆ ಹೇಳಿದರು. ತಕ್ಷಣ ದೆಹಲಿ ಹೈಕಮಾಂಡ್ನಿಂದ ಒತ್ತಡ ಬಂದು ಕ್ಷಮಾಪಣೆ ಕೇಳುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ನದ್ದು ಒಡೆದಾಳುವ ನೀತಿಯ ಸಂಸ್ಕೃತಿ. ಹಾಗಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಪದೇಪದೇ ಹಿಂದೂಗಳ ಅಪಮಾನ, ಹಿಂದೂ ಕಾರ್ಯಕರ್ತರಿಗೆ ಅವಮಾನ, ನಮ್ಮ ಪರಂಪರೆಗೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ವಿಷಯದಲ್ಲಿ ಅಷ್ಟೆಲ್ಲ ಅಪಪ್ರಚಾರ ನಡೆಯುತ್ತಿದ್ದರೂ ಬಾಯಿ ಮುಚ್ಚಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಡಿಕೆಶಿ ರಾಮನಗರದಲ್ಲಿ ಏಸುಕ್ರಿಸ್ತನ ಪ್ರತಿಮೆ ಸ್ಥಾಪಿಸಲು ಮುಂದಾಗಿದ್ರು
ಡಿ.ಕೆ ಶಿವಕುಮಾರ್ ಅವರು ಸಿಎಂ ಆಗುವ ಕನಸು ಕಾಣುತ್ತಿದ್ದು, ಆ ಕನಸು ನನಸಾಗಲಿ ಎಂಬ ದೃಷ್ಟಿಯಿಂದ ಗಾಂಧಿ ಕುಟುಂಬವನ್ನು ಖುಷಿಪಡಿಸಲು ಇಂಥ ಹೇಳಿಕೆ ನೀಡುತ್ತಿದ್ದಾರೆ. ಇದೇ ಡಿ.ಕೆ.ಶಿವಕುಮಾರ್ ಅವರು ಗಾಂಧಿ ಕುಟುಂಬವನ್ನು ಖುಷಿಪಡಿಸಲು ರಾಮನಗರದಲ್ಲಿ (Ramanagara) ಏಸುಕ್ರಿಸ್ತನ 115 ಅಡಿಯ ಪ್ರತಿಮೆ ಸ್ಥಾಪಿಸಲು ಮುಂದಾಗಿದ್ದರು. ಗಾಂಧಿ ಕುಟುಂಬಸ್ಥರನ್ನು ಖುಷಿಪಡಿಸಿ ಸಿಎಂ ಗದ್ದುಗೆ ಏರಿ ಕುಳಿತುಕೊಳ್ಳಬೇಕು ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಚಾಮುಂಡೇಶ್ವರಿ ದೇವಸ್ಥಾನ ಎಲ್ಲರ ಆಸ್ತಿ ಅನ್ನೋದು ಸರಿ ಅಲ್ಲ, ಡಿಕೆಶಿ ಕ್ಷಮೆ ಕೇಳ್ಬೇಕು: ಆರ್.ಅಶೋಕ್
ವನವಾಸದ ಸಂದರ್ಭದಲ್ಲಿ ಶ್ರೀರಾಮನು ರಾಮನಗರಕ್ಕೆ ಬಂದು ಹೋಗಿದ್ದ. ಅಲ್ಲಿ ನೆಲೆಸಿದ್ದ ಎಂಬ ಬಲವಾದ ನಂಬಿಕೆ ಹಿಂದೂಗಳಲ್ಲಿದೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಏನು ಬೇಕಾದರೂ ಹೇಳುತ್ತೇವೆ. ಏನು ಬೇಕಾದರೂ ಮಾತನಾಡುತ್ತೇವೆ ಎಂಬ ಧೋರಣೆ ಸರಿಯಲ್ಲ. ಭಗವಂತನೂ ಖಂಡಿತವಾಗಿ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದಿದ್ದಾರೆ.
ಡಿ.ಕೆ.ಶಿವಕುಮಾರ್ ಸೇರಿ ಕಾಂಗ್ರೆಸ್ ಪಕ್ಷದ ನಾಯಕರ ನಡವಳಿಕೆಗಳು, ಹಿಂದೂಗಳ ಭಾವನೆಗೆ ಧಕ್ಕೆ ತರುವುದು, ಹಿಂದೂ ಧರ್ಮದ ಕುರಿತ ಅವರ ಹೇಳಿಕೆಗಳನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ. ಚಾಮುಂಡಿ ಬೆಟ್ಟದ ಕುರಿತು ತಮ್ಮ ಹೇಳಿಕೆಯನ್ನು ಡಿ.ಕೆ.ಶಿವಕುಮಾರ್ ಅವರು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.