ಚಿಕ್ಕೋಡಿ: ಬಿಜೆಪಿ ಪಕ್ಷಕ್ಕೆ ಭ್ರಷ್ಟ ಲೇಬಲ್ ಬರಲು ಬಿಜೆಪಿ (BJP) ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಕಾರಣ. ಅವರ ನಾಯಕತ್ವವವನ್ನು ನಾನು ಒಪ್ಪುವುದಿಲ್ಲ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಹೇಳಿದ್ದಾರೆ.
ಅಥಣಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಸ್ಥಾನವನ್ನು ನಾನು ಎಂದಿಗೂ ಒಪ್ಪುವುದಿಲ್ಲ. ಮುಂದಿನ ಅಧ್ಯಕ್ಷ ಯಾರು ಎಂಬುದು ಪಕ್ಷದ ವರಿಷ್ಠರು ತೀರ್ಮಾನ ಮಾಡಬೇಕು ಎಂದರು.
ವಿಜಯೇಂದ್ರ ಪಕ್ಷದಲ್ಲಿ ಜೂನಿಯರ್, ಯಾವುದೇ ಸಿದ್ಧಾಂತ ಇಲ್ಲ. ಭಾರತಿಯ ಜನತಾ ಪಕ್ಷದ ಭ್ರಷ್ಟ ಅಂತ ಲೇಬಲ್ ಕೊಟ್ಟಿದ್ದು ವಿಜಯೇಂದ್ರ. ನಾನು ಯಡಿಯೂರಪ್ಪನವರನ್ನು (Yediyurappa) ಯಾವತ್ತೂ ವಿರೋಧ ಮಾಡುವುದಿಲ್ಲ. ಯಡಿಯೂರಪ್ಪ ನಮ್ಮ ಪಕ್ಷಕ್ಕೆ ಪ್ರಶ್ನಾತೀತ ನಾಯಕರು. ಯಡಿಯೂರಪ್ಪರ ಬಗ್ಗೆ ನಮಗೆ ತುಂಬಾ ಗೌರವವಿದೆ ಎಂದು ಹೇಳಿದರು. ಇದನ್ನೂ ಓದಿ: ಮುನಿರತ್ನ ಬೈದಿದ್ದು ಇನ್ನೂ ಸಾಬೀತಾಗಿಲ್ಲ, ಇದು ಸಿಡಿ ಶಿವು ಕೆಲಸ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ನಮ್ಮ ಪಕ್ಷದ ನಾಯಕನಲ್ಲ. ಸಾಮೂಹಿಕ ನಾಯಕತ್ವಕ್ಕೆ ಒತ್ತು ಕೊಡುವಂತೆ ನಾವು ಮೊನ್ನೆ ಸಭೆಯಲ್ಲಿ ಹೇಳಿದ್ದೇವೆ. 15 ರಿಂದ 20 ಜನರ ಸಾಮೂಹಿಕ ನಾಯಕತ್ವದ ಕೈಯಲ್ಲಿ ನಾಯಕತ್ವ ಕೊಡುವಂತೆ ಮನವಿ ಮಾಡಿದ್ದೇವೆ ಎಂದರು.
ಬಿಜೆಪಿ ವರಿಷ್ಠರು ನೀವು ಈ ಕೆಲಸ ಮಾಡುವಂತೆ ಟಾಸ್ಕ್ ನೀಡಿ. 15 ರಿಂದ 20 ಜನರ ನಾಯಕತ್ವದಲ್ಲಿ ಲೀಡರ್‌ಶಿಪ್ ಕೊಡಿ. 120 ರಿಂದ 130 ಸ್ಥಾನಗಳನ್ನು ಗೆಲ್ಲಿಸಿ ಕೊಡುವ ಶಕ್ತಿ ನಮ್ಮಲ್ಲಿದೆ. ವರಿಷ್ಠರು ಕೊಟ್ಟಂತಹ ಟಾಸ್ಕ್‌ನಲ್ಲಿ ಫೇಲಾದರೆ ನಮ್ಮನ್ನು ಒದ್ದು ಹೊರಗೆ ಹಾಕಿ. ಯಡಿಯೂರಪ್ಪನವರಿಗೆ ವಯಸ್ಸಾಗಿದ್ದು ಅವರಿಗೆ ವಿಶ್ರಾಂತಿ ಅಗತ್ಯವಿದೆ. ಅವರ ಸಲಹೆ ಬೇಕಾದರೆ ಅವರ ಮನೆಗೆ ಹೋಗುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ವಂದೇ ಮೆಟ್ರೋ ಈಗ ‘ನಮೋ ಭಾರತ್ ರೈಲು’ – ಚಾಲನೆ ನೀಡಿದ ಮೋದಿ