ಬದ್ರುದ್ದೀನ್ ಕೆ ಮಾಣಿ
`ಮುಂದಿನ ದಿನಗಳಲ್ಲಿ ರಾಜ್ಯದ ಜನರ ಪರವಾಗಿ ಕೆಲಸ ಮಾಡಲು, ನಮ್ಮ ತಂದೆಯವರಿಗೆ ನೀಡಿದ ಸಹಕಾರದಂತೆ ನನಗೂ ಸಹಕಾರ ನೀಡಿ ಆಶೀರ್ವಾದ ಮಾಡಿ’ ಎಂದು ಸಿಎಂ ಯಡಿಯೂರಪ್ಪ ಕಿರಿಯ ಪುತ್ರ, ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಭಾನುವಾರ ಬಹಿರಂಗ ಸಮಾರಂಭವೊಂದರಲ್ಲಿ ಮಾಡಿದ ಮನವಿ, ಭವಿಷ್ಯದಲ್ಲಿ ರಾಜ್ಯ ಬಿಜೆಪಿಯಲ್ಲಿ ನಡೆಯಬಹುದಾದ ಕೆಲವು ವಿದ್ಯಮಾನಗಳ ಮುನ್ಸೂಚನೆ ನೀಡಿದೆ. ಹೌದು, ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಈಗ ಅಧಿಕೃತವಾಗಿ ಪಕ್ಷದ ಸಂಘಟನೆಯಲ್ಲಿ ತೊಡಗುತ್ತಾ, ಮುಖ್ಯವಾಹಿನಿಗೆ ಬರುವ ಪ್ರಯತ್ನ ನಡೆಸಿರುವುದು ಗುಟ್ಟಾಗಿ ಉಳಿದಿಲ್ಲ. ಯಡಿಯೂರಪ್ಪ ಪಕ್ಷ ಸಂಘಟನೆಗೆ ರಾಜ್ಯಾದ್ಯಂತ ತೊಡಗಿಸಿಕೊಂಡಿದ್ದಾಗ, ಅವರ ಸ್ವಕ್ಷೇತ್ರ ಶಿಕಾರಿಪುರದ ಮೇಲುಸ್ತವಾರಿಗಷ್ಟೇ ಸೀಮಿತವಾಗಿದ್ದ ವಿಜಯೇಂದ್ರ ಚಟುವಟಿಕೆ, 2008ರಲ್ಲಿ ಬಿ.ಎಸ್.ವೈ ಮುಖ್ಯಮಂತ್ರಿಯಾದಾಗ ತೆರೆಮರೆಯಲ್ಲಿ ರಾಜ್ಯವ್ಯಾಪಿ ವಿಸ್ತಾರಗೊಳ್ಳಲು ಆರಂಭವಾಗಿತ್ತು. ಅವರು ಸಿಎಂ ಪುತ್ರ ಅನ್ನೋದು ಮಾತ್ರ ಅವರ ಅಂದಿನ ಐಡೆಂಟಿಟಿಯಾಗಿತ್ತು. ಆಗ ಮುಖ್ಯಮಂತ್ರಿಗಳ ಎಲ್ಲಾ ವ್ಯವಹಾರ, ಆಗುಹೋಗುಗಳಲ್ಲಿ ಮೂಗು ತೂರಿಸುತ್ತಿದ್ದಾರೆ ಅನ್ನೋ ಆರೋಪ ಕೂಡ ಅವರ ಮೇಲಿತ್ತು. ಇದ್ಯಾವುದನ್ನು ಲೆಕ್ಕಿಸದೇ ಅವರು, ತೆರೆಮರೆಯಲ್ಲಿ ಕಾರ್ಯನಿರ್ವಹಿಸಿ, ನಿಯಂತ್ರಿಸುತ್ತಿದ್ದುದು ಗುಟ್ಟಾಗಿ ಉಳಿದಿಲ್ಲ.
Advertisement
ಆದರೆ ಈಗ ಕಾಲ ಬದಲಾಗಿದೆ. ವಿಜಯೇಂದ್ರ ಬಿಜೆಪಿಯ ಘಟಕವೊಂದರ ರಾಜ್ಯ ಪದಾಧಿಕಾರಿ. ತಂದೆಯ ಹಾಗೆ ತಾವೂ ಕೂಡ ಅಧಿಕೃತವಾಗಿ ಸಂಘಟನೆಯಲ್ಲಿ ಸಕ್ರಿಯವಾಗತೊಡಗಿದ್ದಾರೆ. ಈ ಮೂಲಕ ಕೇವಲ ಸಿಎಂ ಪುತ್ರ ಎಂಬ ಹಣೆಪಟ್ಟಿಯಿಂದ ಹೊರಬರುವ ಪ್ರಯತ್ನ ನಡೆಸಿದ್ದಾರೆ. ತಾನೂ ಕೂಡ ತಳಹಂತದಿಂದಲೇ ಪಕ್ಷದ ಸಂಘಟನೆ ನಡೆಸಿ ಬೆಳೆದಿದ್ದೇನೆ ಎಂಬ ಸಂದೇಶ ರವಾನಿಸುತ್ತಿದ್ದಾರೆ. ಬೇರೆ ರಾಜಕಾರಣಿಗಳ ಕುಟುಂಬದ ಮಾದರಿಯಲ್ಲಿ ಪರೋಕ್ಷ ಎಂಟ್ರಿ ಎಂಬ ಅಪಕೀರ್ತಿ ಬಾರದ ಹಾಗೆ ಎಚ್ಚರಿಕೆ ಹೆಜ್ಜೆ ಇಡುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸಂಘಟನೆಗೆ ಇಳಿಯುವ ಮೂಲಕ ಅಧಿಕೃತವಾಗಿ ರಾಜಕೀಯ ಆರಂಭಿಸಿದ ವಿಜಯೇಂದ್ರ, ಅಲ್ಲಿ ಪಕ್ಷದ ಅಭ್ಯರ್ಥಿಯಾಗುವವರೆಗೂ ತಲುಪಿದ್ದರು. ಅಂದಿನ ಸಿಎಂ ಸಿದ್ದರಾಮಯ್ಯ ವಿರುದ್ಧ ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟದಲ್ಲಿದ್ದ ಪಕ್ಷಕ್ಕೆ ಆಶಾಕಿರಣವಾಗಿ ಮೂಡಿ ಬಂದಿದ್ದರು. ಆದರೆ ಪಕ್ಷದೊಳಗಿನ ಯಡಿಯೂರಪ್ಪ ವಿರೋಧಿಗಳು ವಂಶಪಾರಂಪಾರ್ಯದ ಕೂಗು ಎಬ್ಬಿಸಿ, ಸ್ಪರ್ಧಿಸದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ವಿಜಯೇಂದ್ರ ಸ್ಪರ್ಧಿಸಿದ್ದರೆ ವರುಣಾ ಕ್ಷೇತ್ರದ ಪ್ರಬಲ ಅಭ್ಯರ್ಥಿಯಾಗುವುದಲ್ಲದೆ ಸುತ್ತಮುತ್ತಲಿನ ಕೆಲವು ಕ್ಷೇತ್ರಗಳಲ್ಲಿ ಪ್ರಭಾವ ಕೂಡ ಬೀರುತ್ತಿತ್ತು ಎಂಬ ಲೆಕ್ಕಾಚಾರ ಬಿ.ಎಸ್.ವೈ ಬೆಂಬಲಿಗರದ್ದಾಗಿತ್ತು. ವಂಶಪಾರಂಪರ್ಯ ರಾಜಕಾರಣವನ್ನು ವಿರೋಧಿಸುತ್ತಾ ಬಂದಿದ್ದ ಬಿಜೆಪಿ, ಅದನ್ನು ಪಕ್ಷ ಪ್ರೋತ್ಸಾಹಿಸುವುದಿಲ್ಲ ಎಂಬ ಸಂದೇಶ ನೀಡುವ ಸಲುವಾಗಿ ವಿಜಯೇಂದ್ರ ಸ್ಪರ್ಧೆಯನ್ನು ತಡೆಯಲಾಯಿತು. ಅದರೊಂದಿಗೆ ತಮ್ಮ ಕಿರಿಯ ಪುತ್ರನನ್ನು ವಿಧಾನಸಭೆಗೆ ಕರೆತರಬೇಕೆನ್ನುವ ಬಿಎಸ್‍ವೈ ಆಸೆಗೆ ತಣ್ಣೀರು ಬಿತ್ತು. ಯಡಿಯೂರಪ್ಪ ಅವರನ್ನ ಸಮಾಧಾನ ಪಡಿಸಲು ವರಿಷ್ಠರು ವಿಜಯೇಂದ್ರ ಅವರನ್ನು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದ್ರು.
Advertisement
Advertisement
ಭವಿಷ್ಯದ ಕಾರಣಕ್ಕೆ ಲೆಕ್ಕಾಚಾರ ಹಾಕಿದ ಬಿಎಸ್‍ವೈ ಏನೂ ಆಗೇ ಇಲ್ಲಾ ಅನ್ನೋ ರೀತಿ ಸುಮ್ಮನಾಗಿ ಬಿಟ್ರು. ಆವಾಗ ಬಿಎಸ್‍ವೈ ಅನುಭವ, ದೂರಾಲೋಚನೆ ಕೆಲಸ ಮಾಡಿತ್ತು. ಅಂದು ತೆಗೆದುಕೊಂಡ ತಾಳ್ಮೆ ಈಗ ಫಲ ನೀಡತೊಡಗಿದೆ. ಹೇಗೂ 70ರ ವಯೋಮಾನದವರನ್ನು ನಿವೃತ್ತಿಗೊಳಿಸುವ ಪಕ್ಷದ ವರಿಷ್ಠರ ಸೂತ್ರ ತಮಗೂ ಶೀಘ್ರದಲ್ಲಿ ಅನ್ವಯವಾಗುತ್ತೆ ಅನ್ನೋ ಅರಿವಿರುವ ಯಡಿಯೂರಪ್ಪ, ನಿವೃತ್ತಿಯಾಗುವ ಸಂದರ್ಭದಲ್ಲಿ ಪಕ್ಷದಲ್ಲಿ ತಮ್ಮ ಪುತ್ರ ಭದ್ರವಾಗಿ ನೆಲೆಯೂರುವಂತೆ ಮಾಡುವುದೇ ಅವರ ರಹಸ್ಯ ಕಾರ್ಯಸೂಚಿಯಾಗಿದೆ. ಹಾಗಾಗಿಯೇ ಹಂತಹಂತವಾಗಿ ಪುತ್ರ ವಿಜಯೇಂದ್ರ ಅವರಿಗೆ ಪಕ್ಷದಲ್ಲಿ ಆದ್ಯತೆ ದೊರಕುವಂತೆ ಮಾಡುವಲ್ಲಿ ಬಿಎಸ್‍ವೈ ಯಶಸ್ವಿಯಾಗತೊಡಗಿದ್ದಾರೆ. ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಕೆಡವಲು ಹೊಣೆ ಹೊತ್ತ ಬೆರಳೆಣಿಕೆಯಷ್ಟು ಬಿಜೆಪಿ ನಾಯಕರ ಪೈಕಿ ವಿಜಯೇಂದ್ರ ಕೂಡ ಒಬ್ಬರು. ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ಕೆಲ ಶಾಸಕರೊಂದಿಗೆ ವ್ಯವಹರಿಸುವ ಕೆಲಸವನ್ನು ವಿಜಯೇಂದ್ರ ಮಾಡಿದ್ರು ಅನ್ನೋದು ಬಹಿರಂಗವಾಗಿದೆ. ಮುಂಬೈ ಹೋಟೆಲ್‍ನಲ್ಲಿ ತಂಗಿದ್ದ ಬಂಡಾಯ ಶಾಸಕರನ್ನು ಭೇಟಿಯಾಗಿ ಅವರು ಮಾತುಕತೆ ನಡೆಸಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ವರಿಷ್ಠರ ಆಶಯದಂತೆ ಮತ್ತು ಬಿಎಸ್‍ವೈಯವರ ಕೊನೆ ಆಸೆಯಂತೆ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಅಸ್ತಿತ್ವಕ್ಕೂ ಬಂತು. ಅದರಲ್ಲಿ ವಿಜಯೇಂದ್ರ ಪಾತ್ರ ಕೂಡ ಬಹುಮುಖ್ಯವಾಗಿತ್ತು. ಇವೆಲ್ಲ ವರಿಷ್ಠರ ಮಾರ್ಗದರ್ಶನದಲ್ಲೇ ನಡೆದಿದ್ದಲ್ಲದೇ ಯಶಸ್ಸಿನ ರೂವಾರಿಗಳು ಯಾರು ಎಂಬುದನ್ನು ಪಕ್ಷದ ವರಿಷ್ಠರು ಗಮನಿಸಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ಗೌರವಯುತ ನಿವೃತ್ತಿ ಹೇಗೆ ಎಂಬ ಚಿಂತೆಯಲ್ಲಿ ಹೈಕಮಾಂಡ್
Advertisement
ಈಗ ಸಿಎಂ ಯಡಿಯೂರಪ್ಪ ಅವರು 3 ವರ್ಷಗಳ ಬಳಿಕ ರಾಜಕೀಯ ನಿವೃತ್ತಿ ಪಡೆಯಲಿದ್ದಾರೆ ಎಂಬ ಚರ್ಚೆ ಬಿಜೆಪಿಯಲ್ಲಿ ಆರಂಭವಾಗಿದೆ. ಅದು ಹೇಗೆ ಯಾವ ರೀತಿಯಲ್ಲಿ ಎಂಬ ಲೆಕ್ಕಚಾರದಲ್ಲಿ ಬಿಜೆಪಿ ವರಿಷ್ಠರು ತೊಡಗಿದ್ದಾರೆ. ಹಾಗಂತ ಬಿಎಸ್‍ವೈ ಸುಮ್ಮನೆ ಕುಳಿತಿಲ್ಲ, ನಿವೃತ್ತಿ ಬಳಿಕ ತಮ್ಮ ಪುತ್ರನಿಗೆ ಪಕ್ಷದಲ್ಲಿ ಯಾವ ರೀತಿಯ ಮಾನ್ಯತೆ ಸಿಗಬೇಕೆಂಬುದಕ್ಕೆ ಬೇಕಾದ ಆಡಿಪಾಯ ಹಾಕುತ್ತ ಪ್ರತಿತಂತ್ರ ರೂಪಿಸುವ ಕಾರ್ಯದಲ್ಲಿ ತೊಡಗಿರುವುದು ಈಗ ಬಹಿರಂಗವಾಗಿದೆ. ಅದರ ಮೊದಲ ಭಾಗವೇ ಇತ್ತೀಚೆಗೆ ನಡೆದ ಉಪಚುನಾವಣೆ ಹೊಣೆ. ವಿಜಯೇಂದ್ರ ಅವರಿಗೆ ಕೆ.ಆರ್.ಪೇಟೆ ಉಪಚುನಾವಣೆ ಹೊಣೆ ನೀಡಿದ ಬಿಎಸ್‍ವೈ, ಖಾತೆ ತೆರೆಯದಿದ್ದ ಮಂಡ್ಯ ಜಿಲ್ಲೆಯಲ್ಲಿ ಗೆಲುವು ಸಾಧಿಸುವ ಮೂಲಕ ಅದರ ಪೂರ್ತಿ ಕ್ರೆಡಿಟ್ ತಮ್ಮ ಪುತ್ರನಿಗೆ ದೊರಕುವಂತೆ ನೋಡಿಕೊಂಡ್ರು. ಈ ಸಾಧನೆ ಸಹಜವಾಗಿಯೇ ಕೇಂದ್ರ ನಾಯಕರ ಮೆಚ್ಚುಗೆಗೆ ಪಾತ್ರವಾಯಿತು. ಅದನ್ನು ಬಿಎಸ್‍ವೈ ಸರಿಯಾಗಿ ಬಳಸಿಕೊಂಡು ಪುತ್ರ ವಿಜಯೇಂದ್ರ ಅವರಿಗೆ ಪಕ್ಷದಲ್ಲಿ ಮಹತ್ವ ದೊರಕುವಂತೆ ಮಾಡಿದ್ದಾರೆ.
ಅಚ್ಚರಿಯ ಮತ್ತೊಂದು ವಿದ್ಯಮಾನ ಅಂದ್ರೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಗೃಹ ಸಚಿವ ಅಮಿತ್ ಶಾ ಅವರನ್ನು ಕೆ.ಆರ್.ಪೇಟೆ ಗೆಲುವಿನ ಬಳಿಕ ನೇರವಾಗಿ ಭೇಟಿ ಮಾಡಿದ ವಿಜಯೇಂದ್ರ ಪಕ್ಷದ ಆಂತರಿಕ ವಲಯದಲ್ಲಿ ಪ್ರಬಲ ಸಂದೇಶವೊಂದನ್ನು ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾರನ್ನು ಹತ್ತಿರ ಬಿಟ್ಟುಕೊಳ್ಳದೇ ಅತ್ಯಂತ ಸ್ಟ್ರಿಕ್ಟ್ (ಶಿಸ್ತು) ಅಂತ ಕರೆಸಿಕೊಳ್ಳುವ ಅಮಿತ್ ಶಾ, ನೇರವಾಗಿ ಸಿಎಂ ಪುತ್ರರೊಬ್ಬರಿಗೆ ಅಪಾಯಿಂಟ್‍ಮೆಂಟ್ ಕೊಟ್ಟಿದ್ದು ಇದೇ ಮೊದಲು ಎನ್ನಲಾಗಿದೆ. ಪಕ್ಷದ ಮುಖಂಡರ ಕುಟುಂಬಸ್ಥರು, ಮಕ್ಕಳನ್ನು ರೆಫರೆನ್ಸ್ ಮೂಲಕ ಅಮಿತ್ ಶಾ ಭೇಟಿಯಾದ ಉದಾಹರಣೆಯೇ ಇಲ್ಲ ಎನ್ನಲಾಗಿದೆ. ಹಾಗಂತ ಈ ಭೇಟಿಯನ್ನು ಗುಟ್ಟಾಗಿ ಉಳಿಸಿಕೊಳ್ಳದ ವಿಜಯೇಂದ್ರ ಅದನ್ನು ಬಹಿರಂಗಗೊಳಿಸಿ ಸೂಕ್ತ ಪ್ರಚಾರವನ್ನ ಗಿಟ್ಟಿಸಿಕೊಂಡ್ರು. ಇದು ಪಕ್ಷದೊಳಗೆ ಕೆಲವರ ಹುಬ್ಬೇರುವಂತೆ ಮಾಡಿದ್ದು ಹೌದು.
ಇಂದು ನವದೆಹಲಿಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @BSYBJPರವರೊಂದಿಗೆ ಕೇಂದ್ರ ಗೃಹಸಚಿವ ಶ್ರೀ @AmitShah ಜೀ ಮತ್ತು ನಮ್ಮ ರಾಷ್ಟ್ರೀಯ ಅಧ್ಯಕ್ಷ ಶ್ರೀ @JPNadda ಜೀ ರವರೊಂದಿಗೆ ಸಮಾಲೋಚನೆ ನಡೆಸಿದ ಸಂದರ್ಭ. ರಾಜ್ಯದ ವಿದ್ಯಮಾನಗಳ ಜೊತೆಗೆ ಪಕ್ಷದ ಅನೇಕ ವಿಷಯಗಳ ಬಗ್ಗೆ ನಮ್ಮ ರಾಷ್ಟ್ರೀಯ ನಾಯಕರು ಮಾರ್ಗದರ್ಶನ ನೀಡಿದರು. @BJP4Karnataka pic.twitter.com/E23m2QVBV8
— Vijayendra Yeddyurappa (@BYVijayendra) January 31, 2020
ಹೀಗೆ ಹಂತ-ಹಂತವಾಗಿ ವರಿಷ್ಠರ ಬಾಗಿಲ ಪ್ರವೇಶ ಗಿಟ್ಟಿಸಿಕೊಳ್ಳಲು ಆರಂಭಿಸಿದ ವಿಜಯೇಂದ್ರ ನೂತನ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅಧಿಕಾರ ವಹಿಸಿಕೊಂಡ ಒಂದೆರಡು ದಿನದಲ್ಲಿ ಅವರನ್ನು ಏಕಾಂಗಿಯಾಗಿ ಭೇಟಿಯಾಗಿ ಶುಭ ಹಾರೈಸಿದ್ರು. ರಾಜ್ಯದ ಬೆರಳೆಣಿಕೆಯಷ್ಟು ನಾಯಕರಿಗೆ ಮಾತ್ರ ಅವಕಾಶ ದೊರಕಿತ್ತು. ರಾಜ್ಯದ ಕೇಂದ್ರ ಸಚಿವರು, ಉಪಮುಖ್ಯಮಂತ್ರಿಗಳು, ಒಂದೆರೆಡು ಪದಾಧಿಕಾರಿಗಳನ್ನು ಬಿಟ್ಟು ಇನ್ಯಾರಿಗೂ ಇದು ಸಾಧ್ಯವಾಗಿಲ್ಲ. ಅವರೆಲ್ಲಾ ಗುಂಪಾಗಿ ಹೋಗಿ ಭೇಟಿಯಾಗಿದ್ರೆ, ವಿಜಯೇಂದ್ರ ಏಕಾಂಗಿಯಾಗಿ ಭೇಟಿಯಾಗಿ ಜಾಣತನ ಪ್ರದರ್ಶಿಸಿದ್ರು. ಅಷ್ಟಾಗಿದ್ರೆ ಪರವಾಗಿಲ್ಲ ಹಲವು ದಿನಗಳ ಕಾಲ ಕಗ್ಗಂಟಾಗಿದ್ದ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರನ್ನು ಭೇಟಿಯಾಗಲು ಸಿಎಂ ಬಿಎಸ್‍ವೈ ಜೊತೆಗೆ ಕರೆದುಕೊಂಡು ಹೋಗಿದ್ದು ಪುತ್ರ ವಿಜಯೇಂದ್ರ ಅವರನ್ನು. ಇದಂತೂ ಬಿಜೆಪಿಯೊಳಗೆ ಸಾಕಷ್ಟು ಚರ್ಚೆಯ ವಿಷಯವಾಯ್ತು ಅನ್ನೋದು ಮಾತ್ರ ಸುಳ್ಳಲ್ಲ. ಸಂಪುಟ ವಿಸ್ತರಣೆಯಂತಹ ಮಹತ್ವದ ವಿಷಯ ಚರ್ಚಿಸಲು ಪ್ರಮುಖ ರಾಷ್ಟ್ರೀಯ ನಾಯಕರ ಭೇಟಿ ವೇಳೆ ಪುತ್ರನನ್ನು ಮಾತ್ರ ಕರೆದೊಯ್ದ ಬಿಎಸ್‍ವೈ, ಭವಿಷ್ಯದಲ್ಲಿ ನನ್ನ ಪ್ರತಿನಿಧಿ ವಿಜಯೇಂದ್ರ ಎಂಬ ಸಂದೇಶ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ ಅಂತಲೇ ಹೇಳಲಾಗುತ್ತಿದೆ.
ಸಹಜವಾಗಿ ಇಂದಲ್ಲ, ನಾಳೆ ತಾವು ನಿವೃತ್ತಿಯಾಗುವಾಗ ತಮ್ಮ ಪುತ್ರನನ್ನು ಸುರಕ್ಷಿತ ಸ್ಥಾನಕ್ಕೆ ತಲುಪಿಸುವ ಹೊಣೆ ಬಿಎಸ್‍ವೈ ಅವರದಾಗಿದ್ದು, ಅದನ್ನು ಅವರು ಸಮರ್ಪಕವಾಗಿ ಮಾಡುತ್ತಿದ್ದಾರೆ. ಮತ್ತೊಂದು ಕಡೆ, ಭವಿಷ್ಯದಲ್ಲಿ ಹಿರಿಯರನ್ನು ತೆರೆಗೆ ಸರಿಸಿ ಯುವಕರಿಗೆ ಆದ್ಯತೆ ನೀಡಬೇಕೆಂಬ ವರಿಷ್ಠರ ಲೆಕ್ಕಾಚಾರ ಇಂದಲ್ಲಾ ನಾಳೆ ಜಾರಿಗೆ ಬರುತ್ತೆ. ಇತ್ತೀಚೆಗೆ ರಾಜ್ಯದಲ್ಲಿ ಯುವ ನಾಯಕರನ್ನು ಗುರುತಿಸಿ ಆದ್ಯತೆ ನೀಡುವ ಕೆಲಸವನ್ನು ರಾಷ್ಟ್ರೀಯ ನಾಯಕರು ಮಾಡತೊಡಗಿದ್ದಾರೆ. ಆ ಯುವನಾಯಕರ ಪಟ್ಟಿಯಲ್ಲಿ ತಮ್ಮ ಪುತ್ರನ ಹೆಸರು ಸೇರುವಂತೆ ಮಾಡುವುದರಲ್ಲಿ ಬಿಎಸ್‍ವೈ ಯಶಸ್ವಿಯಾಗಿದ್ದಾರೆ. ಡಿಸಿಎಂ ಅಶ್ವಥ್ ನಾರಾಯಣ್, ಯುವ ಸಂಸದರಾದ ತೇಜಸ್ವಿಸೂರ್ಯ, ಪ್ರತಾಪ್ ಸಿಂಹ, ಸಚಿವ ಸಿಟಿ ರವಿ ಮುಂತಾದವರಿಗೆ ಕೇಂದ್ರ ನಾಯಕರು ಆದ್ಯತೆ ನೀಡುತ್ತಿದ್ದಾರೆ. ಆ ಸಾಲಿನಲ್ಲಿ ತಮ್ಮ ಪುತ್ರ ಇರಲಿ ಅನ್ನೋದು ಬಿಎಸ್‍ವೈ ಲೆಕ್ಕಾಚಾರ. ಪ್ರಸ್ತಕ ವಿದ್ಯಮಾನಗಳನ್ನು ಗಮನಿಸಿದ್ರೆ ಇದು ನಿಜವಾಗತೊಡಗಿದೆ.
ಬಿಎಸ್‍ವೈ ಅವರ ಮತ್ತೋರ್ವ ಪುತ್ರ ಬಿ.ವೈ.ರಾಘವೇಂದ್ರ 2009ರ ಲೋಕಸಭೆ ಚುನಾವಣೆ ಮೂಲಕ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದ್ದಾರೆ. ಅಂದು ವಂಶಪಾರಂಪರ್ಯ ರಾಜಕಾರಣ ಮಾಡುತ್ತಿದ್ದಾರೆ ಎಂಬ ಪಕ್ಷದೊಳಗಿನ ಟೀಕೆಗಳಿಗೆ ಸೊಪ್ಪು ಹಾಕದೆ ಬಿಎಸ್‍ವೈ ಪುತ್ರನ ರಾಜಕೀಯ ಎಂಟ್ರಿಗೆ ನೆರವಾಗಿದ್ರು. ರಾಘವೇಂದ್ರ ಈಗಾಗಲೇ ಸಕ್ರಿಯ ರಾಜಕಾರಣದಲ್ಲಿ 10 ವರ್ಷ ಪೂರೈಸಿದ್ದಾರೆ. ಆದ್ರೆ ಅವರು ಶಿವಮೊಗ್ಗ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದು, ಅಲ್ಲಿಂದ ಹೊರಗೆ ಪ್ರಭಾವ ಬೀರಲು ಸಾಧ್ಯವಾಗಿಲ್ಲ. ಹಾಗಾಗಿಯೇ ಭವಿಷ್ಯದಲ್ಲಿ ತಮ್ಮ ಉತ್ತರಾಧಿಕಾರಿ ಬಿ.ವೈ. ವಿಜಯೇಂದ್ರ ಅವರೇ ಸೂಕ್ತ ಎನ್ನುವ ನಿರ್ಧಾರಕ್ಕೆ ಬಿಎಸ್‍ವೈ ಬಂದಿದ್ದಾರೆ. ಅದನ್ನು ಬಿಂಬಿಸುವ ಬಿಎಸ್‍ವೈ ತಂತ್ರ ಈಗ ಫಲಿಸತೊಡಗಿದೆ ಅಂತಾನೇ ಹೇಳಬಹುದು. ಇದಕ್ಕೆ ಎಷ್ಟರ ಮಟ್ಟಿಗೆ ಯಶಸ್ಸು ಸಿಗುತ್ತೆ? ಭವಿಷ್ಯದಲ್ಲಿ ಪಕ್ಷದ ವರಿಷ್ಠರು ಇದನ್ನು ಹೇಗೆ ನಿಭಾಯಿಸುತ್ತಾರೆ? ಬಿಎಸ್‍ವೈ ನಿವೃತ್ತಿ ಪ್ರಕ್ರಿಯೆ ಹೇಗೆ? ಏನು, ಎತ್ತ ಅಂತೆಲ್ಲಾ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಲಿದೆ. ಒಟ್ಟಿನಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಿ ರಾಜ್ಯದಲ್ಲಿ ಅಧಿಕಾರ ತರುವವರೆಗೆ ಯಶಸ್ವಿಯಾಗಿ ನಾಲ್ಕೂವರೆ ದಶಕಗಳ ರಾಜಕೀಯ ಹಾದಿ ಸವೆಸಿದ ಬಿಎಸ್‍ವೈ ತಮ್ಮ ಉತ್ತರಾಧಿಕಾರಿಯ ಪ್ರತಿಷ್ಠಾಪನೆಯನ್ನು ಹಂತ ಹಂತವಾಗಿ ಮಾಡಿದ್ದಾರೆ. ಕೆಲವು ರಾಜಕಾರಣಿಗಳು ತಮ್ಮ ವಂಶಪಾರಂಪರ್ಯ ರಾಜಕರಣ ಮಾಡಲು ಅನುಸರಿಸಿದ್ದ ಹಾದಿಗಿಂತ ವಿಭಿನ್ನವಾಗಿ ಬಿಎಸ್‍ವೈ ತಂತ್ರ ರೂಪಿಸಿರುವುದಂತೂ ಸತ್ಯ. ಪಕ್ಷದ ಸಂಘಟನೆಯಲ್ಲಿ ಎಳ್ಳಷ್ಟು ತೊಡಗಿಸಿಕೊಳ್ಳದೇ, ಕೇವಲ ಅಪ್ಪಂದಿರ ಸಾಧನೆಯನ್ನು ಮಾತ್ರ ಮನದಲ್ಲಿಟ್ಟು ರಾಜಕೀಯ ರಂಗ ಪ್ರವೇಶಿಸುವುದು ಮಾಮೂಲಾಗಿರುವಾಗ, ಪಕ್ಷದ ವರಿಷ್ಠರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಹಂತ-ಹಂತವಾಗಿ ಪಕ್ಷದ ಸಂಘಟನೆಯಲ್ಲಿ ತೊಡಗುವಂತೆ ಮಾಡಿ, ಸೈಲೆಂಟಾಗಿ ರಂಗ ಪ್ರವೇಶ ಮಾಡಿಸುವ ಬಿಎಸ್‍ವೈ ತಂತ್ರಗಾರಿಕೆ ಫಲಿಸಿದಂತೆ ಕಾಣುತ್ತಿದೆ.
ವಿಜಯೇಂದ್ರ ಅವರ ಇತ್ತೀಚಿನ ನಡವಳಿಕೆ, ಭಾನುವಾರ ಅವರು ನೀಡಿದ ಬಹಿರಂಗ ಹೇಳಿಕೆ, ಸಾರ್ವಜನಿಕರಲ್ಲಿ ಮಾಡಿದ ಮನವಿ ಮಠ-ಮಾನ್ಯಗಳ ಸಹಕಾರ ಕೋರಿರುವ ರೀತಿ… ಈ ಎಲ್ಲಾ ವಿದ್ಯಮಾನಗಳಿಂದಾಗಿ ಬಿ.ವೈ.ವಿಜಯೇಂದ್ರ ಪಕ್ಷದೊಳಗೆ ಅಕ್ಷರಶಃ ಪ್ರಭಾವಿಯಾಗ ತೊಡಗಿದ್ದಾರೆ. ಅವರು ಈಗ ಕೇವಲ ಸಿಎಂ ಪುತ್ರ ಮಾತ್ರ ಅಲ್ಲ, ಹೈಕಮಾಂಡ್ ಜೊತೆಗೂ ನಿಕಟ ಸಂಪರ್ಕ ಹೊಂದಿದ್ದಾರೆ. ಹೀಗಾಗಿಯೇ ಸಂಪುಟ ವಿಸ್ತರಣೆಯ ಮುನ್ನಾ ದಿನ (ಬುಧವಾರ) ವಿಜಯೇಂದ್ರ ಅವರ ನಿವಾಸ ರಾಜಕೀಯ ಚಟುವಟಿಕೆಯ ಕೇಂದ್ರವಾಗಿತ್ತು. ಸಂಪುಟ ವಿಸ್ತರಣೆಯ ಕಗ್ಗಂಟಿನ ಮಧ್ಯೆ ಸಚಿವಾಕಾಂಕ್ಷಿಗಳು, ಕೆಲವು ಹಿರಿಯ ಮುಖಂಡರು ಖುದ್ದಾಗಿ ಅವರ ನಿವಾಸಕ್ಕೆ ತೆರಳಿ ಸಮಾಲೋಚನೆ ನಡೆಸಿದ್ದಾರೆ. ಶಾಸಕರು ಭೇಟಿಯಾಗಿ ಸಚಿವ ಸ್ಥಾನಕ್ಕಾಗಿ ಲಾಬಿ, ಒತ್ತಡ ಹಾಕಿದ್ದಾರೆ ಅಂದರೆ, ಸಿಎಂ ಅನುಪಸ್ಥಿತಿಯಲ್ಲಿ ವಿಜಯೇಂದ್ರ ಅವರೇ ಪ್ರಭಾವಿ ಅನ್ನೋ ಸಂದೇಶ ಪಕ್ಷದೊಳಗೆ ರವಾನೆಯಾಗಿರುವುದಂತೂ ಸ್ಪಷ್ಟ. ಒಟ್ಟಿನಲ್ಲಿ ಸಂಪುಟ ವಿಸ್ತರಣೆ ಗದ್ದಲ, ಸಚಿವಾಕಾಂಕ್ಷಿಗಳ ಒತ್ತಡ, ಬಿರುಸಿನ ರಾಜಕೀಯ ಚಟುವಟಿಕೆಗಳ ಮಧ್ಯೆ ಸದ್ದಿಲ್ಲದೆ ಸಿಎಂ ಯಡಿಯೂರಪ್ಪ ಅವರು, ಪುತ್ರ ವಿಜಯೇಂದ್ರ ಅವರ ರಾಜಕೀಯ ಭವಿಷ್ಯವನ್ನು ಭದ್ರಗೊಳಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ ಎಂದೇ ಹೇಳಬೇಕು.