ಬೆಂಗಳೂರು: ಉಪ ಚುನಾವಣೆಗೆ ತಡೆ ನೀಡುವ ಮೂಲಕ ಸುಪ್ರೀಂ ಅನರ್ಹರಿಗೆ ಈಗ ರಿಲೀಫ್ ಸಿಕ್ಕಿದೆ. ಆದರೆ ಮುಂದೆ ಉಪಚುನಾವಣೆ ರಾಜ್ಯದಲ್ಲಿ ನಡೆಯುತ್ತಾ ಎನ್ನುವ ಅನುಮಾನ ಈಗ ಎದ್ದಿದೆ.
ಸುಪ್ರೀಂ ಕೋರ್ಟಿನಲ್ಲಿ ತಮ್ಮ ಪರವಾಗಿ ತೀರ್ಪು ಬಂದರೆ ಅನರ್ಹರು ಚುನಾವಣೆ ನಿಂತು ಜಯಗಳಿಸಿ ಮಂತ್ರಿಯಾಗುವ ಕನಸಿನಲ್ಲಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಉಪ ಚುನಾವಣೆ ನಡೆಸದೇ ವಿಧಾನಸಭೆಯಲ್ಲಿ ವಿಸರ್ಜಿಸಿ ಚುನಾವಣೆಗೆ ಹೋಗಲು ಚಿಂತಿಸಿದೆ ಎನ್ನಲಾಗುತ್ತಿದೆ.
Advertisement
Advertisement
ಹೌದು, ರಾಜ್ಯ ಉಪಚುನಾವಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಬಿಜೆಪಿ ಬೀಸೋ ದೊಣ್ಣೆಯಿಂದ ಪಾರಾಗಿದೆ. ಆದರೆ ಇದೇ ವೇಳೆ ಬಿಎಸ್ ಯಡಿಯೂರಪ್ಪ ಅವರ ಸರ್ಕಾರದ ಅವಧಿ ಕೇವಲ 9 ತಿಂಗಳು ಮಾತ್ರವೇ ಎನ್ನುವ ಪ್ರಶ್ನೆ ಎದ್ದಿದೆ.
Advertisement
ಸದ್ಯ ಚುನಾವಣೆಗೆ ನ್ಯಾಯಾಲಯ ಬ್ರೇಕ್ ಹಾಕಿರುವುದರಿಂದ ಪಕ್ಷದಲ್ಲಿ ಉಂಟಾಗಿದ್ದ ಬಂಡಾಯವನ್ನು ಶಮನ ಮಾಡಲು ನಾಯಕರಿಗೆ ಅವಕಾಶ ಸಿಕ್ಕಿದೆ. ಆದರೆ ಬಿಜೆಪಿ ಹೈಕಮಾಂಡ್ ಮಾತ್ರ ಬಂಡಾಯ ನಡುವೆ ಸರ್ಕಾರ ನಡೆಸುವುದು ಅಗತ್ಯತೆ ಹಾಗೂ ಪಕ್ಷದ ವರ್ಚಸ್ಸಿಗೆ ಉಂಟಾಗಬಹುದಾದ ಹಾನಿಯ ಬಗ್ಗೆಯೂ ಚರ್ಚೆ ನಡೆಸಿದೆ. ಈ ಹಿನ್ನೆಲೆಯಲ್ಲಿಯೇ ಉಪಚುನಾವಣೆಗೆ ಅವಕಾಶ ನೀಡದೆ ನೇರ ಚುನಾವಣೆ ಎದುರಿಸುವ ಕುರಿತು ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.
Advertisement
ಹೈಕಮಾಂಡ್ ಚುನಾವಣೆಯೇ ಸರಿ ಎನ್ನುವ ನಿರ್ಧಾರ ತಗೆದು ಜನವರಿ ಬಳಿಕ ಚುನಾವಣೆ ಹೋಗುವ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಪರಿಣಾಮ ಫೆಬ್ರವರಿಯಲ್ಲಿ ಚುನಾವಣೆ ಎದುರಿಸುವ ಸಾಧ್ಯತೆ ಇದೆ. ಏಕೆಂದರೆ ಶಾಸಕರ ತಮ್ಮ ಅನರ್ಹತೆಯನ್ನು ಪ್ರಶ್ನೆ ಮಾಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದು, ಪ್ರಕರಣ ಸುದೀರ್ಘ ವಿಚಾರಣೆಗೆ ನ್ಯಾಯಾಲಯ ಮುಂದಾಗಿ ಸಾಂವಿಧಾನಿಕ ಪೀಠ ರಚನೆ ಮಾಡಿದರೆ ಪ್ರಕರಣ ಇತ್ಯರ್ಥವಾಗಬೇಕಾದರೆ ಹಲವು ದಿನಗಳು ಬೇಕಾಗಬಹುದು. ತೆರವಾದ ವಿಧಾನಸಭಾ ಕ್ಷೇತ್ರಗಳನ್ನು 6 ತಿಂಗಳ ಕಾಲ ಖಾಲಿ ಬಿಡುವಂತಿಲ್ಲ. ಹೀಗಾಗಿ ದೀರ್ಘ ಸಮಯಗಳ ಕಾಲ ವಿಚಾರಣೆ ನಡೆಸಲು ಬರುವುದಿಲ್ಲ.
ಕರ್ನಾಟಕ ಉಪಚುನಾವಣೆ ಮಾತ್ರ ಮುಂದೂಡಿರುವುದರಿಂದ ಬಿಜೆಪಿ ಹೈಕಮಾಂಡ್ ಮಹಾರಾಷ್ಟ್ರ ಚುನಾವಣೆಯತ್ತ ಹೆಚ್ಚು ಗಮನಹರಿಸಿದ್ದು, ಇಲ್ಲೂ ಬಹುಮತ ಸಿಕ್ಕರೆ ಕರ್ನಾಟಕದಲ್ಲೂ ಮಧ್ಯಂತರ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ. ಅನರ್ಹರ ಪ್ರಕರಣ ಇತ್ಯರ್ಥಕ್ಕೆ ಕೆಲ ತಿಂಗಳ ಅವಧಿ ಅಗತ್ಯ ಇರುವ ಕಾರಣ ಅಲ್ಲಿಯವರೆಗೂ ರಾಜ್ಯದಲ್ಲಿ ಬಿಎಸ್‍ವೈ ಅವರ ಸರ್ಕಾರ ಆಡಳಿತ ನಡೆಯನ್ನು ತುಲನೆ ಮಾಡಿ ಚುನಾವಣೆಗೆ ಹೋಗುವ ಅಂತಿಮ ನಿರ್ಧಾರ ಮಾಡುವ ಚಿಂತನೆ ಹೈಕಮಾಂಡ್ ಮುಂದಿದೆ.
ಯಾಕೆ ಚುನಾವಣೆ?
ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿ ಗೆಲುವು ಸಾಧಿಸಿದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಅವರು ಕರ್ನಾಟಕವನ್ನ ಟಾರ್ಗೆಟ್ ಮಾಡಲಿದ್ದಾರೆ. ಕೇಂದ್ರದಂತೆ ರಾಜ್ಯದಲ್ಲಿ ಕೂಡ ಸ್ಪಷ್ಟ ಬಹುಮತದ ಬಿಜೆಪಿ ಸರ್ಕಾರವನ್ನು ರಚಿಸಲು ಬಿಜೆಪಿ ಹೈಕಮಾಂಡ್ ಯೋಚಿಸಿದೆ ಎನ್ನಲಾಗಿದೆ.
ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆಯಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ತನ್ನ ಅವಧಿಯನ್ನು ಪೂರ್ಣಗೊಳಿಸಬೇಕಾದರೆ ಉಪಚುನಾವಣೆಯಲ್ಲಿ 6 ಕ್ಷೇತ್ರಗಳಲ್ಲಿ ಜಯಗಳಿಸಬೇಕು. ಕರ್ನಾಟಕ ವಿಧಾನಸಭೆಯಲ್ಲಿ ಒಟ್ಟು ಈಗ ಬಿಜೆಪಿಯ ಸಂಖ್ಯಾ ಬಲ 105(ಪಕ್ಷೇತರ ಸೇರಿದರೆ 106) ಇದೆ. ಸರಳ ಬಹುಮತಕ್ಕೆ 112 ಸ್ಥಾನಗಳ ಅವಶ್ಯಕತೆಯಿದೆ. ಹೀಗಾಗಿ 15 ಕ್ಷೇತ್ರಗಳಲ್ಲಿ ನಡೆಯುವ ಉಪಚುನಾವಣೆಯಲ್ಲಿ ಕನಿಷ್ಟ 6 ಕ್ಷೇತ್ರಗಳಲ್ಲಿ ಜಯಗಳಿಸಲೇಬೇಕಾದ ಅನಿವಾರ್ಯತೆಗೆ ಬಿಜೆಪಿ ಸಿಲುಕಿದೆ.
ಸದ್ಯ ವಿಧಾನಸಭೆಯಲ್ಲಿ ಬಿಎಸ್‍ಪಿ 1, ಬಿಜೆಪಿ 105, ಕಾಂಗ್ರೆಸ್ 66, ಜೆಡಿಎಸ್ 34 ಶಾಸಕರ ಬಲಾಬಲವನ್ನು ಹೊಂದಿದೆ. ಒಂದು ವೇಳೆ 6 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲದೇ ಇದ್ದರೆ ರಾಜ್ಯದಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ. ಒಂದೊಮ್ಮೆ 6 ಸ್ಥಾನ ಗೆದ್ದರು ಬಿಜೆಪಿ ಅಲ್ಪ ಬಹುಮತದ ಸರ್ಕಾರ ಮುಂದುವರಿಯುತ್ತದೆ. ಈ ಅವಧಿಯಲ್ಲಿ ಬಿಜೆಪಿಯ ಯಾವುದೇ ಶಾಸಕರು ಕೈಕೊಟ್ಟರು ಮತ್ತೆ ಸರ್ಕಾರ ಪತನವಾಗುತ್ತದೆ. ಪರಿಣಾಮ ಇಂತಹ ಸರ್ಕಾರ ಹೊಂದಿರುವುದಕ್ಕಿಂತ ಚುನಾವಣೆ ಎದುರಿಸಿ ಬಹುಮತದ ಸ್ಪಷ್ಟ ಸರ್ಕಾರ ರಚನೆ ಮಾಡುವುದು ಉತ್ತಮ ಎಂಬ ಚರ್ಚೆ ಹೈಕಮಾಂಡ್ ಮಾಡುತ್ತಿದೆ ಎನ್ನಲಾಗುತ್ತಿದೆ.